ADVERTISEMENT

ಗುಡಿ ಘಂಟೆಗಳ ಸದ್ದಿಗಿಂತ ಶಾಲೆ ಘಂಟೆಗಳ ಸದ್ದು ಮೊಳಗಲಿ

ಭೋವಿ ಸಮಾಜದ ವಿದ್ಯಾರ್ಥಿನಿಲಯ, ರಸ್ತೆ ಸಾರಿಗೆ ಘಟಕ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 4:56 IST
Last Updated 6 ಡಿಸೆಂಬರ್ 2022, 4:56 IST
ಚನ್ನಗಿರಿ ಪಟ್ಟಣದಲ್ಲಿ ಸೋಮವಾರ ತಾಲ್ಲೂಕು ಭೋವಿ ಸಮಾಜದ ವಿದ್ಯಾರ್ಥಿನಿಲಯ ಹಾಗೂ ರಸ್ತೆ ಸಾರಿಗೆ ಸಂಸ್ಥೆ ಬಸ್ ಘಟಕದ ಭೂಮಿಪೂಜೆ ಕಾರ್ಯಕ್ರಮವನ್ನು ಕೆಎಸ್ ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಉದ್ಘಾಟಿಸಿದರು. ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸಂಸದ ಜಿ.ಎಂ. ಸಿದ್ದೇಶ್ವರ ಎಂ. ಚಂದ್ರಪ್ಪ ಇದ್ದರು.
ಚನ್ನಗಿರಿ ಪಟ್ಟಣದಲ್ಲಿ ಸೋಮವಾರ ತಾಲ್ಲೂಕು ಭೋವಿ ಸಮಾಜದ ವಿದ್ಯಾರ್ಥಿನಿಲಯ ಹಾಗೂ ರಸ್ತೆ ಸಾರಿಗೆ ಸಂಸ್ಥೆ ಬಸ್ ಘಟಕದ ಭೂಮಿಪೂಜೆ ಕಾರ್ಯಕ್ರಮವನ್ನು ಕೆಎಸ್ ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಉದ್ಘಾಟಿಸಿದರು. ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸಂಸದ ಜಿ.ಎಂ. ಸಿದ್ದೇಶ್ವರ ಎಂ. ಚಂದ್ರಪ್ಪ ಇದ್ದರು.   

ಚನ್ನಗಿರಿ: ‘ವಿದ್ಯಾವಂತ ಸಮಾಜ ನಿರ್ಮಾಣ ಇಂದಿನ ಅಗತ್ಯವಾಗಿದೆ. ಗುಡಿಯ ಘಂಟೆಗಳ ಸದ್ದಿಗಿಂತ ಶಾಲೆಗಳಲ್ಲಿನ ಘಂಟೆಗಳ ಸದ್ದು ಹೆಚ್ಚಾಗಿ ಮೊಳಗಿದಾಗ ಮಾತ್ರ ನಮ್ಮ ದೇಶ ಪ್ರಜ್ಞಾವಂತ ದೇಶವಾಗಲು ಸಾಧ್ಯ. ನಿಜವಾದ ಸ್ವಾತಂತ್ರ್ಯ ಶಿಕ್ಷಣದಿಂದ ಮಾತ್ರ ಕಾಣಲು ಸಾಧ್ಯ’ ಎಂದು ಚಿತ್ರದುರ್ಗ–ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಭೋವಿ ಸಮಾಜದಿಂದ ನಡೆದ ಭೋವಿ ಸಮಾಜದ ವಿದ್ಯಾರ್ಥಿ ನಿಲಯದ ಕಟ್ಟಡ ಹಾಗೂ ಕೆಎಸ್ಆರ್‌ಟಿಸಿ ಬಸ್ ಘಟಕ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಜನಪರ ಕಾಳಜಿ ಹೊಂದಿರುವವರನ್ನು ಜನಪ್ರತಿನಿಧಿ ಗಳನ್ನಾಗಿ ಆಯ್ಕೆ ಮಾಡಬೇಕು. ಸರ್ವ ಜನಾಂಗಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಜನಪ್ರತಿನಿಧಿ ಎಂದರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ’ ಎಂದು ಹೇಳಿದರು.

ADVERTISEMENT

‘ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ ₹ 2 ಕೋಟಿ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ಮಂಜೂರು ಮಾಡಿದ್ದು, ಪ್ರಥಮ ಕಂತಿನಲ್ಲಿ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ವರ್ಷದೊಳಗೆ ಕೆಎಸ್‌ಆರ್‌ಟಿಸಿ ಘಟಕ ನಿರ್ಮಾಣ ಮುಕ್ತಾಯಗೊಂಡರೆ, ಬಸ್ ಸೌಕರ್ಯ ಇಲ್ಲದ ತಾಲ್ಲೂಕಿನ ಎಲ್ಲ ಗ್ರಾಮೀಣ ಪ್ರದೇಶಗಳಿಗೂ ಬಸ್ ಸಂಚಾರವನ್ನು ಆರಂಭಿಸಲಾಗುವುದು’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

‘ಶೇ 40 ಕಮಿಷನ್ ಪಡೆಯುವ ಸರ್ಕಾರ ಎಂದು ವಿರೋಧ ಪಕ್ಷಗಳು ಅಪಪ್ರಚಾರವನ್ನು ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿವೆ. ಜಾತಿ, ಜಾತಿಗಳ ನಡುವೆ ಸಂಘರ್ಷ ಉಂಟುಮಾಡುವ ಪಕ್ಷ ಎಂದು ಬಿಜೆಪಿಯನ್ನು ತೆಗಳುತ್ತಿದ್ದಾರೆ. ವಿರೋಧ ಪಕ್ಷಗಳು ಏನೇ ಬೊಬ್ಬೆ ಹಾಕಿದರೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಡಿ. ಶೇಖರ್ ಮಾತನಾಡಿದರು.

ಸಾರಿಗೆ ನಿಗಮದ ನಿರ್ದೇಶಕ ಆರುಂಡಿ ನಾಗರಾಜ್, ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಇ.ಶ್ರೀನಿವಾಸ್ ಮೂರ್ತಿ, ಹುಬ್ಬಳ್ಳಿ ನಿಗಮದ ನಿರ್ದೇಶಕ ರಾಜು ವಿಠಲಸ, ತುಮ್ಕೋಸ್ ಅಧ್ಯಕ್ಷ ಆರ್.ಎಂ.ರವಿ, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಜಿ.ಎಸ್.ಸಂಗಮ್, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಜಯ್ಯಪ್ಪ, ತಾಲ್ಲೂಕು ಅಧ್ಯಕ್ಷ ಗರಗದ ರಾಜಪ್ಪ, ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ಮಾಡಾಳ್ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.