ADVERTISEMENT

ಲೋಹದ ಹಕ್ಕಿಯಲ್ಲಿ ಸಿದ್ಧವಾಗುತ್ತಿದೆ ರೆಸ್ಟೋರೆಂಟ್: ಗಮನ ಸೆಳೆಯುವ ‘ರನ್‌ವೇ –17’

ರಾಮಮೂರ್ತಿ ಪಿ.
Published 19 ಫೆಬ್ರುವರಿ 2026, 2:41 IST
Last Updated 19 ಫೆಬ್ರುವರಿ 2026, 2:41 IST
ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ–48ರ ಪಕ್ಕದ (ಹಳೆಬಾತಿ ಸಮೀಪ) ಜಾಗದಲ್ಲಿ ನಿಂತಿರುವ ಏರ್‌ ಇಂಡಿಯಾ ವಿಮಾನದಲ್ಲಿ ರೆಸ್ಟೋರೆಂಟ್‌ ಸಿದ್ಧವಾಗುತ್ತಿರುವುದು 
ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ–48ರ ಪಕ್ಕದ (ಹಳೆಬಾತಿ ಸಮೀಪ) ಜಾಗದಲ್ಲಿ ನಿಂತಿರುವ ಏರ್‌ ಇಂಡಿಯಾ ವಿಮಾನದಲ್ಲಿ ರೆಸ್ಟೋರೆಂಟ್‌ ಸಿದ್ಧವಾಗುತ್ತಿರುವುದು  ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ   

ದಾವಣಗೆರೆ: ತಾಲ್ಲೂಕಿನ ಹಳೆಬಾತಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ– 48ರ ಪಕ್ಕದಲ್ಲಿ ದೊಡ್ಡ ವಿಮಾನವೊಂದು ಲ್ಯಾಂಡ್‌ ಆಗಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಲ್ಲ ಅಚ್ಚರಿ ಮೂಡಿಸುತ್ತಿದೆ.

‘ದೇವನಗರಿಯ ಬಳಿ ವಿಮಾನ ನಿಲ್ದಾಣವೇ ಇಲ್ಲ. ಆದರೂ ಈ ‘ಲೋಹದ ಹಕ್ಕಿ’ ತುರ್ತು ಭೂಸ್ಪರ್ಶ ಮಾಡಿರಬಹುದೇ? ಎಂಬ ಗೊಂದಲದಲ್ಲೇ ಪ್ರಯಾಣಿಕರು ಒಂದು ಕ್ಷಣ ಕಣ್ಣರಳಿಸಿ ಕುತೂಹಲದಿಂದ ಆ ಅದನ್ನು ವೀಕ್ಷಿಸುತ್ತಿದ್ದಾರೆ.

ಅಸಲಿಗೆ ಇದು ಸೇವೆಯಲ್ಲಿರುವ (ಸಕ್ರಿಯ) ವಿಮಾನವಲ್ಲ. ಈಗಾಗಲೇ ದೇಶೀಯವಾಗಿ ವಿವಿಧ ನಗರಗಳ ಮಧ್ಯೆ ಲಕ್ಷಾಂತರ ಕಿ.ಮೀ. ಸಂಚರಿಸಿ ಸೇವೆಯಿಂದ ವಿಮುಕ್ತಿಗೊಂಡಿರುವ ‘ಏರ್‌ ಇಂಡಿಯಾ’ ಸಂಸ್ಥೆಯ ವಿಮಾನವಿದು.

ADVERTISEMENT

2006ರ ಮಾಡೆಲ್‌ನ (ಏರ್‌ಬಸ್‌ 320) ಈ ವಿಮಾನವು 2018ರಿಂದ ಸೇವೆಯನ್ನು ಸ್ಥಗಿತಗೊಳಿಸಿದೆ. ಉತ್ತರ ಪ್ರದೇಶದ ಮೀರತ್‌ ಏರ್‌ಪೋರ್ಟ್‌ನಲ್ಲಿದ್ದ ಈ ಸ್ಕ್ರ್ಯಾಪ್‌ (ಗುಜರಿ) ವಿಮಾನವು, ಇದೀಗ ರಾಷ್ಟ್ರೀಯ ಹೆದ್ದಾರಿ–48ರ ಪಕ್ಕದಲ್ಲಿ ರೆಸ್ಟೋರೆಂಟ್‌ ಆಗಿ ಬದಲಾಗುತ್ತಿದೆ.

ನಗರದ ಉದ್ಯಮಿ ನಾಗರಾಜ್ ಗಡ್ಡಾದ್ ಅವರು ವಿಮಾನದ ಮಾದರಿಯಲ್ಲೇ ರೆಸ್ಟೋರೆಂಟ್‌ ಆರಂಭಿಸುವ ಆಲೋಚನೆ ಸಾಕಾರಗೊಳಿಸುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಹಾರಾಟದ ಗತವೈಭವವನ್ನು ಮುಗಿಸಿ ಮೂಲೆ ಸೇರಿದ್ದ ವಿಮಾನವನ್ನು ಬಿಡ್ ಮಾಡಿ ಖರೀದಿಸಿ ತಂದಿದ್ದಾರೆ. ಎರಡೂ ರೆಕ್ಕೆಗಳನ್ನು ಬೇರ್ಪಡಿಸಿ, ಮೇರಠ್‌ನಿಂದ 3 ಬೃಹತ್ ಲಾರಿಗಳಲ್ಲಿ ವಿಮಾನದ ಬಿಡಿಭಾಗಗಳನ್ನು ತರಿಸಿದ್ದಾರೆ.

ವಿಮಾನದ ಒಳಗಡೆಯ ಆಸನಗಳನ್ನು ಈಗಾಗಲೇ ಬೇರ್ಪಡಿಸಲಾಗಿದೆ. ರೆಸ್ಟೋರೆಂಟ್‌ಗೆ ತಕ್ಕಂತೆ ಆಸನ ಹಾಗೂ ಡೈನಿಂಗ್‌ ಟೇಬಲ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಬಾಕಿ ಕಾರ್ಯಗಳೆಲ್ಲವೂ ಪೂರ್ಣಗೊಂಡರೆ, ಜಿಲ್ಲೆಯ ನಾಗರಿಕರು ಶೀಘ್ರವೇ ವಿಮಾನದಲ್ಲಿ ಕುಳಿತು ಊಟ ಮಾಡಬಹುದಾಗಿದೆ.

ರೆಸ್ಟೋರೆಂಟ್‌ನಲ್ಲಿ ವೆಜ್‌, ನಾನ್‌ವೆಜ್‌ ಸೇರಿದಂತೆ ಎಲ್ಲಾ ಬಗೆಯ ಊಟವೂ ಲಭ್ಯವಿರಲಿದೆ. ‘ಗಗನಸಖಿ’ಯರನ್ನು ಹೋಲುವ ಪರಿಚಾರಕಿಯರೂ ಇರಲಿದ್ದಾರೆ ಎಂದು ಅವರು ಹೇಳಿದ್ದಾರೆ.

ರನ್‌ವೇ 17: 

ವಿಮಾನದಲ್ಲಿನ ರೆಸ್ಟೋರೆಂಟ್‌ಗೆ ‘ರನ್‌ವೇ 17’ ಎಂದು ಹೆಸರಿಡಲಾಗಿದೆ.

ಸಾಮಾನ್ಯವಾಗಿ ವಿಮಾನಗಳು ಲ್ಯಾಂಡ್‌ ಆಗುವುದು ಹಾಗೂ ಟೇಕ್‌ ಆಫ್‌ ಆಗುವುದು ರನ್‌ವೇಗಳಲ್ಲಿ. ದಾವಣಗೆರೆಯ ಆರ್‌ಟಿಒ ನೋಂದಣಿ ಸಂಖ್ಯೆ 17. ಹೀಗಾಗಿ ‘ರನ್‌ವೇ 17’ ಎಂದು ಹೆಸರಿಟ್ಟಿದ್ದೇವೆ. ರೆಸ್ಟೋರೆಂಟ್‌ನಲ್ಲಿ 100ಕ್ಕೂ ಹೆಚ್ಚು ಜನ ಕುಳಿತು ಊಟ ಮಾಡುವಂತಹ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎನ್ನುತ್ತಾರೆ ನಾಗರಾಜ್ ಗಡ್ಡಾದ್ ಅವರ ಪುತ್ರ ಆಕಾಶ್.

3 ತಿಂಗಳಿಂದ ಕೆಲಸ ನಡೆಯುತ್ತಿದೆ. ಇನ್ನೂ 3 ತಿಂಗಳೊಳಗೆ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಿ ಆದಷ್ಟು ಬೇಗ ರೆಸ್ಟೋರೆಂಟ್ ಸೇವೆ ಒದಗಿಸುತ್ತೇವೆ
ನಾಗರಾಜ್ ಗಡ್ಡಾದ್ ‘ರನ್‌ವೇ 17’ ಮಾಲೀಕ
ಇರಲಿದೆ ಕೆಫೆ ಪ್ಲೇ ಝೋನ್‌ 
2 ಹೆಕ್ಟೇರ್‌ ಜಾಗದಲ್ಲಿ ‘ರನ್‌ವೇ 17’ ರೆಸ್ಟೋರೆಂಟ್‌ ಸಿದ್ಧಗೊಳ್ಳುತ್ತಿದೆ. ವಿಮಾನದ ಒಳಭಾಗದಲ್ಲಿ ಸೆಲ್ಫಿ ಪಾಯಿಂಟ್‌ ಇದ್ದರೆ ಹೊರ ಭಾಗದಲ್ಲಿ ಕೆಫೆ ಸ್ಟೇಷನರಿ ಟಾಯ್ಸ್‌ ಮಳಿಗೆ ಪ್ಲೇ ಝೋನ್‌ ಇರಲಿದೆ. ಕುಟುಂಬ ಸಮೇತ ‘ವಿಮಾನ’ದಲ್ಲಿ ಊಟ ಮಾಡಿ ಒಂದೆರೆಡು ಗಂಟೆ ಕಾಲ ಕಳೆಯಲು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶವಿದೆ ಎನ್ನುತ್ತಾರೆ ಆಕಾಶ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.