ADVERTISEMENT

ಬಿಜೆಪಿ–ಕಾಂಗ್ರೆಸ್‌: ಘೋಷಣೆ ಸಮರ

ಏಕನಿವೇಶನಕ್ಕೆ ಅನುಮೋದನೆ ವಿರೋಧಿಸಿ ‘ಧೂಡಾ’ ಕಚೇರಿ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 5:24 IST
Last Updated 11 ಡಿಸೆಂಬರ್ 2025, 5:24 IST
ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಬುಧವಾರ ಧರಣಿ ನಡೆಸಿದರು
ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಬುಧವಾರ ಧರಣಿ ನಡೆಸಿದರು   

ದಾವಣಗೆರೆ: ಸ್ವಾಮಿ ವಿವೇಕಾನಂದ ಬಡಾವಣೆಯ 13 ಗುಂಟೆ ಜಾಗವನ್ನು ಏಕನಿವೇಶನಕ್ಕೆ ಅನುಮೋದನೆ ನೀಡಿದ ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ಧೂಡಾ) ಕ್ರಮವನ್ನು ವಿರೋಧಿಸಿ ಬಿಜೆಪಿ ಬುಧವಾರ ಹಮ್ಮಿಕೊಂಡಿದ್ದ ಧರಣಿ ರಾಜಕೀಯ ಹೈಡ್ರಾಮಾಗೆ ಕಾರಣವಾಯಿತು.

ಬಿಜೆಪಿ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಆಗಮಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘೋಷಣೆ ಸಮರ ನಡೆಯಿತು. ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಧರಣಿಗೆ ಅವಕಾಶ ಕಲ್ಪಿಸಿದರು.

‘ಧೂಡಾ‘ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಬುಧವಾರ ಬೆಳಿಗ್ಗೆ ಧರಣಿ ಹಮ್ಮಿಕೊಂಡಿದ್ದರು. ಇದಕ್ಕೂ ಮುನ್ನ ಸ್ಥಳದಲ್ಲಿ ಜಮಾಯಿಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನಕಾರರಿಗೆ ಗುಲಾಬಿ ಹೂವು ಮತ್ತು ಜ್ಯೂಸ್ ನೀಡಲು ಮುಂದಾದರು. ಇದು ವಿಕೋಪಕ್ಕೆ ತಿರುಗುವ ಸೂಚನೆಯನ್ನು ಅರಿತ ಪೊಲೀಸರು, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವರುಣ್ ಬೆಣ್ಣೆಹಳ್ಳಿ ಸೇರಿದಂತೆ ಅನೇಕರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ಬಿಜೆಪಿ ಧರಣಿ ಪ್ರಾರಂಭವಾಗುತ್ತಿದ್ದಂತೆ ಧಾವಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಪರ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಧರಣಿನಿರತರು ಬಿಜೆಪಿ ಪರ ಘೋಷಣೆ ಮೊಳಗಿಸಿದರು.

‘ವಿವೇಕಾನಂದ ಬಡಾವಣೆಯಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಮಹಾನಗರ ಪಾಲಿಕೆಯ ಆಸ್ತಿಯನ್ನು ಭೂ ಮಾಫಿಯಾ ಕಬಳಿಸಲು ‘ಧೂಡಾ’ ಅವಕಾಶ ಮಾಡಿಕೊಟ್ಟಿದೆ. ಏಕ ನಿವೇಶನಕ್ಕೆ ಅನುಮೋದನೆ ನೀಡಿರುವುದು ಬೇಲಿಯೇ ಎದ್ದು, ಹೊಲ ಮೇಯ್ದಂತೆ ಆಗಿದೆ. ನಿಗದಿತ ಸ್ಥಳದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲು ಎರಡು ಬಾರಿ ಪಾಲಿಕೆಗೆ ಪತ್ರ ಬರೆದಿದ್ದ ‘ಧೂಡಾ’ ಏಕೆ ನಿಲುವು ಬದಲಿಸಿತು’ ಎಂದು ‘ಧೂಡಾ’ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಪ್ರಶ್ನಿಸಿದರು.

‘ಧೂಡಾ ಮತ್ತು ಪಾಲಿಕೆಯ ಎಂಜಿನಿಯರುಗಳು, ಸರ್ವೆಯರ್‌ಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿದಾಗ ಉದ್ಯಾನ ಇರುವುದು ಖಚಿತವಾಗಿದೆ. ಈ ಕುರಿತು ಪಾಲಿಕೆಯ ಅಧಿಕಾರಿಗಳು ‘ಧೂಡಾ’ಗೆ ಪತ್ರ ಬರೆದರೂ ಅನುಮೋದನೆಯನ್ನು ರದ್ದುಪಡಿಸಿಲ್ಲ. ಇದರಲ್ಲಿ ಅವ್ಯವಹಾರದ ವಾಸನೆ ಇದೆ’ ಎಂದು ರಾಜನಹಳ್ಳಿ ಶಿವಕುಮಾರ್ ಆರೋಪಿಸಿದರು.

‘ಧೂಡಾ’ ಆಯುಕ್ತ ಹುಲ್ಮನಿ ತಿಮ್ಮಣ್ಣ ಮನವಿ ಸ್ವೀಕರಿಸಿದರು. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಧರಣಿ ಕೈಬಿಡಲಾಯಿತು.

ಬಿಜೆಪಿ ಮುಖಂಡರಾದ ಶಿವನಹಳ್ಳಿ ರಮೇಶ, ಬಿ. ರಮೇಶ ನಾಯ್ಕ, ಹೊನ್ನಾಳಿ ಎಂ.ಆರ್.ಮಹೇಶ, ಅಣಬೇರು ಜೀವನಮೂರ್ತಿ, ತರಕಾರಿ ಶಿವು, ಶಿವನಗೌಡ ಪಾಟೀಲ, ಶಂಕರಗೌಡ ಬಿರಾದಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.