ADVERTISEMENT

ಮುಂದಿನ ಚುನಾವಣೆಯಲ್ಲಿ ಬಿಜೆಪಿ ನಿಷ್ಕ್ರಿಯ

ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀ ನಾರಾಯಣ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 4:25 IST
Last Updated 3 ಆಗಸ್ಟ್ 2021, 4:25 IST
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆಯಲ್ಲಿ ಒಬಿಸಿ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿದರು
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆಯಲ್ಲಿ ಒಬಿಸಿ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿದರು   

ದಾವಣಗೆರೆ: ಹಿಮಾಲಯದಷ್ಟು ಭ್ರಷ್ಟಾಚಾರ ಮಾಡಿರುವ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಜನರು ನಿಷ್ಕ್ರೀಯಗೊಳಿಸಲಿದ್ದಾರೆ. ಕಾಂಗ್ರೆಸ್‌ ಸಂಘಟನಾತ್ಮಕ ಶಕ್ತಿಯ ಮೂಲಕ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ₹ 6 ಸಾವಿರ ಕೋಟಿ ಅನುದಾನ ನೀಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಾಗ ಅನುದಾನವನ್ನು ₹ 400 ಕೋಟಿಗೆ ಇಳಿಸಲಾಗಿದೆ. ಹಿಂದುಳಿದ ವರ್ಗಗಳ 100 ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿದ್ದ ಪ್ರೊತ್ಸಾಹ ಧನವನ್ನು ಕೈಬಿಡಲಾಗಿದೆ. ರಾಜ್ಯದಲ್ಲಿ 197 ಹಿಂದುಳಿದ ಸಮುದಾಯಗಳಿವೆ. ರಾಜ್ಯ ಒಟ್ಟು ಜನಸಂಖ್ಯೆಯಲ್ಲಿ ಶೇ 52ರಷ್ಟು ಹಿಂದುಳಿದ ಸಮುದಾಯದವರು ಇದ್ದಾರೆ. ಈ ಸಮುದಾಯಕ್ಕೆ ಮೂಲ ಸೌಲಭ್ಯ ಕಲ್ಪಿಸದೇ ಬಿಜೆಪಿ ವಂಚನೆ ಮಾಡಿದೆ ಎಂದು ಆರೋಪಿಸಿದರು.

ADVERTISEMENT

ಬಸವರಾಜ ಬೊಮ್ಮಾಯಿ ಡಮ್ಮಿ ಮುಖ್ಯಮಂತ್ರಿ. ಸರ್ಕಾರದ ನಿಯಂತ್ರಣ ಯಡಿಯೂರಪ್ಪ ಕೈಲಿದೆ. ಬಿಜೆಪಿಯಲ್ಲಿ ಕೇವಲ ಖುರ್ಚಿಗಾಗಿ ಕಿತ್ತಾಟಗಳು ನಡೆಯುತ್ತಿವೆ. ಸರ್ಕಾರದ ಅನೀತಿ, ಭ್ರಷ್ಟಾಚಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾಂಗ್ರೆಸ್ ಯುವ ಸಮೂಹ ಮಾಡಬೇಕಿದೆ ಎಂದು ಹೇಳಿದರು.

ಸಣ್ಣಪುಟ್ಟ ದೋಷಗಳಿಂದಾಗಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಬೇಕಾಯಿತು. ಅದು ಈಗ ಎಲ್ಲರಿಗೂ ಅರ್ಥವಾಗಿದೆ. ಅಲ್ಲದೇ ಈಗ ರಾಜಕೀಯ ಚಿತ್ರಣವೂ ಬದಲಾಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ‘ಬಿಜೆಪಿ ಒಂದು ಸುಳ್ಳನ್ನೇ ನೂರು ಬಾರಿ ಹೇಳಿ ಜನರನ್ನು ವಂಚಿಸುತ್ತಾ ಬಂದಿದೆ. ನರೇಂದ್ರ ಮೋದಿ 100 ದಿನಗಳಲ್ಲಿ ಇಡೀ ದೇಶದ ಚಿತ್ರಣವನ್ನೇ ಬದಲಾಯಿಸುತ್ತೇನೆ, ಮೂರು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಮೋಸ ಮಾಡಿದ್ದಾರೆ’ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌, ‘ಆಪರೇಷನ್‌ ಕಮಲ ಮಾಡಿ ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರು. ಅವರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮೋದಿ–ಶಾ ಮಾಡಿದ್ದಾರೆ. ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದರು ಎಂದು ಟ್ವೀಟ್‌ ಮೋದಿ ಟ್ವೀಟ್‌ ಮಾಡಿದ್ದಾರೆ. ಅಡ್ವಾಣಿ, ಮುರಳಿ ಮನೋಹರ ಜೋಷಿಗೆ ಬೆನ್ನಿಗೆ ಚೂರಿ ಹಾಕಿ ತೋರಿದ ವೃದ್ಧಾಶ್ರಮದ ದಾರಿ ನಿಮಗೂ ತೋರಿಸಲಾಗಿದೆ ಎಂದು ಪರೋಕ್ಷವಾಗಿ ಟ್ವಿಟ್ಟರ್‌ ಮೂಲಕ ಹೇಳಿದಂತಿದೆ’ ಎಂದು ಅಣಕವಾಡಿದರು.

ಹರಿಹರ ಶಾಸಕ ಎಸ್‌. ರಾಮಪ್ಪ, ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಜಿಲ್ಲಾ ಸಮಿತಿ ಅಧ್ಯಕ್ಷ ನಲ್ಕುಂದ ಹಾಲೇಶ್‌, ಕಾಂಗ್ರೆಸ್‌ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಮುಖಮಡರಾದ ಮುನಿರತ್ನ ಮಾಲಾ, ನಾಗೇಂದ್ರಪ್ಪ, ಉಮೇಶ್‌ ಪಟೇಲ್‌, ಜಮ್ನಳ್ಳಿ ನಾಗರಾಜ್‌, ಮಲ್ಲಿಕಾರ್ಜುನ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.