
ಚನ್ನಗಿರಿ: ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಈವರೆಗೂ ಮೆಕ್ಕೆಜೋಳ ಹಾಗೂ ಭತ್ತದ ಖರೀದಿ ಕೇಂದ್ರ ತೆರೆಯದೇ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಎಲ್ಲೆಡೆ ಈಗಾಗಲೇ ಮೆಕ್ಕೆಜೋಳ ಹಾಗೂ ಭತ್ತದ ಕೊಯ್ಲು ಆರಂಭವಾಗಿದೆ. ಆದರೆ ಸರಿಯಾದ ಬೆಲೆ ಇಲ್ಲದೇ ರೈತರು ಕಣ್ಣೀರು ಹಾಕುವಂತಹ ಸ್ಥಿತಿಯಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕುರ್ಚಿಗಾಗಿ ನಡೆಸುತ್ತಿರುವ ಕಾದಾಟದಲ್ಲಿ ರೈತರನ್ನು ಮರೆತಿದೆ. ಐದು ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿರುವ ಸರ್ಕಾರ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಇಲ್ಲ ಎಂದು ಕೈಕಟ್ಟಿ ಕುಳಿತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಬಿಜೆಪಿ ರೈತರ ರಕ್ಷಣೆಗೆ ನಿಲ್ಲಲಿದೆ. ರೈತರೊಡನೆ ಸೇರಿ ಹೋರಾಟ ನಡೆಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡಲು ಶ್ರಮಿಸುತ್ತದೆ. ಈ ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಮುಂಬರುವ ಚುನಾವಣೆಯಲ್ಲಿ ರೈತ ಪರ ಸರ್ಕಾರವನ್ನು ಜನರು ಅಧಿಕಾರಕ್ಕೆ ತರಲಿದ್ದಾರೆ’ ಎಂದು ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತಹಶೀಲ್ದಾರ್ ಕಚೇರಿಗೆ ತಲುಪಿತು. ತಹಶೀಲ್ದಾರ್ ಎನ್.ಜೆ. ನಾಗರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಮಂಡಳ ಅಧ್ಯಕ್ಷ ಕುಮಾರಸ್ವಾಮಿ, ಕೆ.ಸಿ. ಕೆಂಚಪ್ಪ, ಚ.ಮ. ಗುರುಸಿದ್ದಯ್ಯ, ಪರಮೇಶ್ ಪಾರಿ, ಪಟ್ಲಿ ನಾಗರಾಜ್, ಸವಿತಾ ರಾಘವೇಂದ್ರ, ಕಾಯಿ ಮಂಜುನಾಥ್, ಕುಮಾರಪ್ಪ, ಟಿ. ನಾಗರಾಜ್, ಎಚ್.ವಿ. ಮಲ್ಲಿಕಾರ್ಜುನ್, ಮಾಲತೇಶ್, ಮಂಜಪ್ಪ, ಮಂಜುನಾಥ್, ರುದ್ರೇಗೌಡ, ಕೆ. ಬಸವರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.