ಎಸ್.ಎಂ.ವೀರೇಶ್ ಹನಗವಾಡಿ
ಹರಿಹರ: ‘ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ನೀಡಬೇಕು. ಇಲ್ಲವೇ ಕ್ಷಮೆ ಯಾಚಿಸಬೇಕು. ತಪ್ಪಿದಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಎಸ್.ರಾಮಪ್ಪ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಹೇಳಿದರು.
‘ಜಿಲ್ಲಾ ಕಾಂಗ್ರೆಸ್ ವರಿಷ್ಠರ ಓಲೈಕೆ ಮಾಡಿ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ತಂತ್ರವಾಗಿ ಜಿ.ಎಂ.ಸಿದ್ದೇಶ್ವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
‘ಕಾನೂನು ಬದ್ಧವಾಗಿಯೇ ಖರೀದಿಸಿದ ಜಮೀನಿನಲ್ಲಿ ಸಿದ್ದೇಶ್ವರ ಅವರು ವಿದ್ಯಾಸಂಸ್ಥೆ ನಿರ್ಮಿಸಿದ್ದಾರೆ. ಬೈರನಪಾದ ಸಮೀಪ ಸಕ್ಕರೆ ಕಾರ್ಖಾನೆ ನಿರ್ಮಿಸಲು ಗುಡ್ಡ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಸುಳ್ಳಾಗಿದ್ದು, ಸಾಕ್ಷಿ ಇದ್ದರೆ ಕೊಡಬೇಕು. ತಪ್ಪಿದಲ್ಲಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.
‘ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲೇ ಪತ್ರಿಕಾಗೋಷ್ಠಿಯಲ್ಲಿ ರಾಜಕೀಯ ವಿಷಯಗಳನ್ನು ಚರ್ಚಿಸಿರುವುದನ್ನು ಖಂಡಿಸುವ ಭರದಲ್ಲಿ ಶಾಸಕ ಹರೀಶ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಪಮೋರಿಯನ್ ನಾಯಿ ಎಂದು ಹೇಳಿದ್ದಾರೆಯೇ ಹೊರತು ಇದರಲ್ಲಿ ದುರುದ್ದೇಶವಿಲ್ಲ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ವೇದಿಕೆಯೊಂದರಿಂದ ಡಿಸಿಯೊಬ್ಬರನ್ನು ನಿಂದಿಸಿ ಕೆಳಗಿಳಿಸಿರುವುದು, ಇನ್ನೊಂದು ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಲು ಮುಂದಾಗಿರುವುದು, ರಾಷ್ಟ್ರಪತಿ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದು ರಾಮಪ್ಪ ಅವರ ಗಮನಕ್ಕೆ ಇಲ್ಲವೆ’ ಎಂದು ಪ್ರಶ್ನಿಸಿದರು.
‘ಗಣೇಶ ಉತ್ಸವದ ಉತ್ಸಾಹಕ್ಕೆ ಭಂಗ ಉಂಟು ಮಾಡಬೇಕೆಂಬ ದುರುದ್ದೇಶದಿಂದಲೇ ಡಿಜೆ ನಿಷೇಧಿಸಿದೆ. ಹಿಂದೂಗಳ ಮತವನ್ನು ಕಾಂಗ್ರೆಸ್ ಪಕ್ಷ ಪಡೆದಿಲ್ಲವೆ. ಒಂದು ಕೋಮಿನ ಓಲೈಕೆಯಲ್ಲಿರುವ ಕಾಂಗ್ರೆಸ್ ಪಕ್ಷದವರು ಅಧಿಕಾರ ಶಾಶ್ವತವಲ್ಲ ಎಂಬುದನ್ನು ತಿಳಿಯಲಿ’ ಎಂದು ಎಸ್.ಎಂ.ವೀರೇಶ್ ಹನಗವಾಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಘಟಕದ ಕಾರ್ಯದರ್ಶಿ ವೀರೇಶ್ ಆದಾಪುರ, ಮುಖಂಡರಾದ ರಾಘವೇಂದ್ರ ಉಪಾಧ್ಯಾಯ, ಸ್ವಾತಿ ಹನುಮಂತಪ್ಪ, ಪ್ರವೀಣ್ ಪವಾರ್, ಸಂತೋಷ್ ಗುಡಿಮನಿ ಹಾಗೂ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.