ADVERTISEMENT

ಅಧಿಕಾರದತ್ತ ಬಿಜೆಪಿ: ಮ್ಯಾಜಿಕ್‌ ನಿರೀಕ್ಷೆಯಲ್ಲಿ ಕಾಂಗ್ರೆಸ್‌

ಇಂದು ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಇಬ್ಬರು ಆಕಾಂಕ್ಷಿಗಳು * ಕಾಂಗ್ರೆಸ್‌ನ ಆಕಾಂಕ್ಷಿಗಳಿಬ್ಬರಲ್ಲಿ ಒಬ್ಬರು ರಾಜೀನಾಮೆ

ಬಾಲಕೃಷ್ಣ ಪಿ.ಎಚ್‌
Published 24 ಫೆಬ್ರುವರಿ 2021, 3:08 IST
Last Updated 24 ಫೆಬ್ರುವರಿ 2021, 3:08 IST
ವೀಣಾ ನಂಜಣ್ಣ
ವೀಣಾ ನಂಜಣ್ಣ   

ದಾವಣಗೆರೆ: ಮೇಲ್ನೋಟದ ಅಂಕಿ ಅಂಶಗಳ ಪ್ರಕಾರ ದಾವಣಗೆರೆ ಮಹಾನಗರ ಪಾಲಿಕೆಯ ಅಧಿಕಾರವನ್ನು ಬಿಜೆಪಿ ಸಲೀಸಾಗಿ ಹಿಡಿಯಲಿದೆ. ಆದರೆ ಕಾಂಗ್ರೆಸ್‌ ಮ್ಯಾಜಿಕ್‌ ನಡೆಯಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದೆ. ಇದರ ನಡುವೆ ಎರಡೂ ಪಕ್ಷಗಳಲ್ಲಿಯೂ ತಲಾ ಇಬ್ಬರು ಮೇಯರ್‌ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್‌ನ ಒಬ್ಬ ಆಕಾಂಕ್ಷಿ ಬಿಜೆಪಿಗೆ ತೆರಳಿದ್ದಾರೆ. ಆದರೆ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುವ ತಲೆನೋವು ಪಕ್ಷದ ನಾಯಕಿಗೆ ಉಂಟಾಗಿದೆ.

ಫೆ.24ರಂದು ಮೇಯರ್‌, ಉಪಮೇಯರ್‌ ಮತ್ತು ಸ್ಥಾಯಿ ಸಮಿತಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ಬಿಜೆಪಿಯ 17, ಪಕ್ಷೇತರ ನಾಲ್ವರು, ಒಬ್ಬ ಸಂಸದ, ಒಬ್ಬ ಶಾಸಕ, ಏಳು ಮಂದಿ ವಿಧಾನಪರಿಷತ್‌ ಸದಸ್ಯರು ಸೇರಿ 30 ಮತಗಳು ಬಿಜೆಪಿ ಪರವಾಗಿವೆ. ಕಾಂಗ್ರೆಸ್‌ 22 ಸ್ಥಾನಗಳಲ್ಲಿ ಗೆದ್ದಿತ್ತು. ಕಳೆದ ವರ್ಷ ಮೇಯರ್‌ ಚುನಾವಣೆ ಮುಗಿದ ಬಳಿಕ ಭಾರತ್‌ ಕಾಲೊನಿ ವಾರ್ಡ್‌ನ ಸದಸ್ಯೆ ಯಶೋದಾ ಉಮೇಶ್‌ ರಾಜೀನಾಮೆ ನೀಡಿದ್ದರಿಂದ ಸದಸ್ಯರ ಸಂಖ್ಯೆ 21ಕ್ಕೆ ಇಳಿದಿತ್ತು. ಇದೀಗ ಮತ್ತೊಬ್ಬರ ರಾಜೀನಾಮೆಯಿಂದ 20ಕ್ಕೆ ಕುಸಿದಿದೆ. ಒಬ್ಬರು ಪಕ್ಷೇತರ, ನಾಲ್ವರು ವಿಧಾನಪರಿಷತ್‌ ಸದಸ್ಯರು, ಒಬ್ಬರು ಶಾಸಕರು ಸೇರಿ ಒಟ್ಟು 26 ಮತಗಳನ್ನು ಕಾಂಗ್ರೆಸ್‌ ಹೊಂದಿದೆ.

ಜತೆಗೆ ಜೆಡಿಎಸ್‌ನ ಒಂದು ಮತವೂ ತಮಗೆ ಬೀಳಲಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸಿಗರು ಇದ್ದಾರೆ. ಬಿಜೆಪಿ ಜತೆ ಗುರುತಿಸಿಕೊಂಡಿರುವವರಲ್ಲಿ ಮೂವರು ಗೈರಾಗುವ ಮೂಲಕ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್‌ ಒಳಗೆ ಮಾತುಗಳು ಓಡಾಡುತ್ತಿದ್ದರೆ, ಕಳೆದ ವರ್ಷದ ಮೇಯರ್‌ ಚುನಾವಣೆಗಿಂತ ಈ ಬಾರಿ ಭಿನ್ನವಾಗಿರುವುದಿಲ್ಲ. ಕಾಂಗ್ರೆಸ್‌ನವರೇ ಗೈರು ಆಗಲಿದ್ದಾರೆ ಕಾದು ನೋಡಿ ಎಂಬುದು ಬಿಜೆಪಿ ನಾಯಕರು ವಿಶ್ವಾಸದ ನುಡಿಗಳನ್ನಾಡುತ್ತಿದ್ದಾರೆ.

ADVERTISEMENT

ಆಕಾಂಕ್ಷಿಗಳ ತಲೆ ನೋವು: ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ನಾಲ್ವರು ಆಕಾಂಕ್ಷಿಗಳಿದ್ದರು. ಅದರಲ್ಲಿ ಕೆ.ಎಂ. ವೀರೇಶ್‌ ಮತ್ತು ಎಸ್‌.ಟಿ. ವೀರೇಶ್‌ ಹಿಂದಕ್ಕೆ ಸರಿದಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರ ಪುತ್ರ ರಾಕೇಶ್‌ ಜಾಧವ್‌ ಮತ್ತು ಶಾಸಕ ಎಸ್‌.ಎ. ರವೀಂದ್ರನಾಥ ಅವರ ಮಗಳು ವೀಣಾ ನಂಜಣ್ಣ ಅವರು ಪ್ರಮುಖ ಆಕಾಂಕ್ಷಿಗಳಾಗಿ ಉಳಿದಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರ ಮಕ್ಕಳಾಗಿರುವುದರಿಂದ ಸುಲಭದಲ್ಲಿ ತೀರ್ಮಾನ ಕೈಗೊಳ್ಳಲು ಬಿಜೆಪಿ ನಾಯಕರಿಗೆ ಆಗುತ್ತಿಲ್ಲ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಕಾಂಗ್ರೆಸ್‌ನಿಂದಲೂ ನಾಲ್ವರು ಆಕಾಂಕ್ಷಿಗಳಿದ್ದರು. ಅದರಲ್ಲಿ ಗಡಿಗುಡಾಳ್‌ ಮಂಜುನಾಥ್‌ ಮತ್ತು ಚಮನ್‌ಸಾಬ್‌ ತಟಸ್ಥಗೊಂಡಿದ್ದಾರೆ. ದೇವರಮನಿ ಶಿವಕುಮಾರ್‌ ಮತ್ತು ಜೆ.ಎನ್‌. ಶ್ರೀನಿವಾಸ್‌ ಅಂತಿಮವಾಗಿ ಇದ್ದರು. ಪಕ್ಷದ ವರಿಷ್ಠು ದೇವರಮನಿ ಶಿವಕುಮಾರ್‌ ಕಡೆ ಒಲವು ತೋರಿಸಿದ್ದರು. ಆದರೆ ರಾತ್ರಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ದೇವರಮನಿ ಶಿವಕುಮಾರ್‌ ಪಾಲಿಕೆ ಸದಸ್ಯತ್ವ ಸ್ಥಾನಕ್ಕೇ ರಾಜೀನಾಮೆ ಸಲ್ಲಿಸಿದ್ದಾರೆ.

ಉಪ ಮೇಯರ್‌ ಸ್ಥಾನ: ಪರಿಶಿಷ್ಟ ಜಾತಿ ಮಹಿಳೆಗೆ ಉಪ ಮೇಯರ್‌ ಸ್ಥಾನ ಮೀಸಲಾಗಿದೆ. ಕಾಂಗ್ರೆಸ್‌ನಿಂದ ನಾಗರತ್ನಮ್ಮ ಒಬ್ಬರೇ ಅರ್ಹರಿದ್ದರೆ, ಬಿಜೆಪಿಯಿಂದ ಶಿಲ್ಪಾ ಜಯಪ್ರಕಾಶ್‌ ಮತ್ತು ಜಯಮ್ಮ ಗೋಪಿ ನಾಯ್ಕ್‌ ಅರ್ಹರಿದ್ದಾರೆ. ಅದರಲ್ಲಿ ಶಿಲ್ಪಾ ಜಯಪ್ರಕಾಶ್‌ ಅವರ ಹೆಸರು ಅಂತಿಮಗೊಂಡಿದೆ.

ಏಕೈಕ ಜೆಡಿಎಸ್‌ ಸದಸ್ಯೆ ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಜೆಡಿಎಸ್‌ ಸದಸ್ಯೆ ನೂರ್‌ಜಹಾನ್‌ ಬಿ ಅವರನ್ನು ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದರೆ ಮೊಬೈಲ್ ಸ್ವಿಚ್‌ಡ್‌ ಆಫ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.