
ದಾವಣಗೆರೆ: ತಾಲ್ಲೂಕಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಮೂರು ತಿಂಗಳ ಹಿಂದೆ ಕಾಣೆಯಾದ ಕೃಷ್ಣಮೃಗ ಈವರೆಗೂ ಪತ್ತೆಯಾಗಿಲ್ಲ. ಈ ಕುರಿತು ಅರಣ್ಯ ಇಲಾಖೆ ನಡೆಸುತ್ತಿರುವ ತನಿಖೆಯೂ ಪೂರ್ಣಗೊಂಡಿಲ್ಲ.
ನಾಲ್ಕು ಜಿಂಕೆಗಳ ಸಾವಿನಿಂದ ಗಮನ ಸೆಳೆದಿರುವ ಕಿರು ಮೃಗಾಲಯದಲ್ಲಿ ಮೂರು ತಿಂಗಳ ಹಿಂದೆ ಕೃಷ್ಣಮೃಗ ನಾಪತ್ತೆಯಾಗಿದ್ದು ತಡವಾಗಿ ಬಹಿರಂಗಗೊಂಡಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಕಿರು ಮೃಗಾಲಯದಲ್ಲಿ 147 ಚುಕ್ಕೆ ಜಿಂಕೆ ಹಾಗೂ 24 ಕೃಷ್ಣಮೃಗಗಳಿದ್ದವು. 2022ರಿಂದ ಮೃಗಾಲಯದಲ್ಲಿ ಆಶ್ರಯ ಪಡೆದಿದ್ದ ಗಂಡು ಕೃಷ್ಣಮೃಗ ಜಿಂಕೆಗಳಿಗೆ ಕೊಂಬಿನಿಂದ ಇರಿಯುತ್ತಿತ್ತು. ಜಿಂಕೆಗಳ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಹೀಗೆ, ಪ್ರತ್ಯೇಕವಾಗಿದ್ದ ಕೃಷ್ಣಮೃಗ ನಾಪತ್ತೆಯಾಗಿತ್ತು.
‘ಕೃಷ್ಣಮೃಗ ಕಾಣೆಯಾಗಿರುವ ಸಂಬಂಧ ಎಸಿಎಫ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಚಿರತೆ ದಾಳಿ ನಡೆಸಿ ಹೊತ್ತೊಯ್ದ ಶಂಕೆ ವ್ಯಕ್ತವಾಗಿದೆ. ಬೇಲಿ ನೆಗೆದು ಕಾಡೊಳಗೆ ತಪ್ಪಿಸಿಕೊಂಡ ಸಾಧ್ಯತೆಯೂ ಇದೆ. ಕಾಡಿನಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ತನಿಖೆ ಪೂರ್ಣಗೊಳಿಸಿ ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್. ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
ಕಿರು ಮೃಗಾಲಯಕ್ಕೆ ಹೊಂದಿಕೊಂಡಂತೆ 200 ಹೆಕ್ಟೇರ್‌ಗೂ ಹೆಚ್ಚು ಮೀಸಲು ಅರಣ್ಯ ಪ್ರದೇಶವಿದೆ. ಇಲ್ಲಿ ಚಿರತೆ ಸೇರಿದಂತೆ ಇತರ ಪ್ರಾಣಿಗಳಿವೆ. ಚಿರತೆಯ ಹೆಜ್ಜೆಗುರುತು, ಮರದ ತೊಗಟೆಯ ಮೇಲೆ ಚಿರತೆಯ ಕೂದಲು ಸೇರಿದಂತೆ ಇತರ ಕುರುಹುಗಳು ಪತ್ತೆಯಾಗಿವೆ. ಆದರೂ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಮೃಗಾಲಯದ ಮೂಲಗಳು ವಿವರಿಸಿವೆ.
ಮೃಗಾಲಯದ ಸುತ್ತ ಸಿ.ಸಿ.ಟಿವಿ ಕ್ಯಾಮೆರಾಗಳಿವೆ. ಸುಸಜ್ಜಿತ ತಂತಿಬೇಲಿ, ವಿದ್ಯುತ್ ವ್ಯವಸ್ಥೆಯೂ ಇದೆ. ಕೃಷ್ಣಮೃಗ ನಾಪತ್ತೆಯಾದಾಗ ಸಿ.ಸಿ.ಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎನ್ನಲಾಗಿದೆ. ಮೃಗಾಲಯದ ಸಿಬ್ಬಂದಿ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆಯೇ ಎಂಬ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ.
ನೀರು, ಆಹಾರ ಸುರಕ್ಷಿತ
ಮೃಗಾಲಯದ ವನ್ಯಜೀವಿಗಳಿಗೆ ನೀಡುತ್ತಿರುವ ನೀರು ಮತ್ತು ಆಹಾರ ಸುರಕ್ಷಿತವಾಗಿದೆ ಎಂಬುದು ಪ್ರಯೋಗಾಲಯದ ವರದಿಯಲ್ಲಿ ಖಚಿತವಾಗಿದೆ. ಮೃತ ಜಿಂಕೆಗಳ ದೇಹದ ಮಾದರಿಯ ಪರೀಕ್ಷಾ ವರದಿ ಬರುವುದು ಮಾತ್ರ ಬಾಕಿ ಇದೆ.
ಜ.16ರಿಂದ ಜ.18ರ ಮೂರು ದಿನಗಳಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟಿವೆ. ‘ಹೆಮರಾಜಿಕ್ ಸೆಪ್ಟಿಸೆಮಿಯಾ’ ಸಾಂಕ್ರಾಮಿಕ ಕಾಯಿಲೆಗೆ ಬಲಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತ ಜಿಂಕೆಗಳ ದೇಹದ ಮಾದರಿಗಳನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವರದಿಗೆ ಅರಣ್ಯ ಇಲಾಖೆ ಕಾಯುತ್ತಿದೆ.
ಪ್ರತ್ಯೇಕವಾಗಿಡುವ ಪ್ರಯತ್ನ
ಕಿರು ಮೃಗಾಲಯದಲ್ಲಿ 143 ಚುಕ್ಕೆ ಜಿಂಕೆ ಹಾಗೂ 23 ಕೃಷ್ಣಮೃಗಗಳಿವೆ. ಇವುಗಳನ್ನು ಪ್ರತ್ಯೇಕವಾಗಿಡುವ ಪ್ರಯತ್ನ ಸಾಕಾರಗೊಂಡಿಲ್ಲ.
ಮೃಗಾಲಯದಲ್ಲಿರುವ ವನ್ಯಜೀವಿಗಳಲ್ಲಿ ಚುಕ್ಕೆ ಜಿಂಕೆ ಹಾಗೂ ಕೃಷ್ಣಮೃಗಗಳ ಸಂಖ್ಯೆಯೇ ಹೆಚ್ಚು. ಇವುಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದಲೇ ಹಲವು ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಸ್ವಭಾವದಲ್ಲಿ ಭಿನ್ನವಾಗಿರುವ ಜಿಂಕೆ ಹಾಗೂ ಕೃಷ್ಣಮೃಗಗಳನ್ನು ಪ್ರತ್ಯೇಕವಾಗಿ ಇಡುವ ಆಲೋಚನೆಯನ್ನು ಮೃಗಾಲಯ ಮಾಡಿತ್ತು. ಆದರೆ, ಇದು ಇನ್ನೂ ಕೈಗೂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.