ADVERTISEMENT

ಆರೋಗ್ಯ ಮಾತೆ ಕಿರುಬೆಸಿಲಿಕಾದಲ್ಲಿ ಸಡಗರ

ಇಂದು ಕ್ರಿಸ್‍ಮಸ್: ಆಚರಣೆಗಾಗಿ ಚರ್ಚ್‌ನಲ್ಲಿ ಅಲಂಕಾರ, ಸಿದ್ಧತೆ ಜೋರು

ಆರ್.ರಾಘವೇಂದ್ರರಾವ್
Published 25 ಡಿಸೆಂಬರ್ 2020, 6:23 IST
Last Updated 25 ಡಿಸೆಂಬರ್ 2020, 6:23 IST
ರೆ.ಫಾ.ಡಾ. ಅಂತೋನಿ ಪೀಟರ್
ರೆ.ಫಾ.ಡಾ. ಅಂತೋನಿ ಪೀಟರ್   

ಹರಿಹರ:ನಗರದ ಆರೋಗ್ಯಮಾತೆ ಕಿರುಬೆಸಿಲಿಕಾ (ಮಹಾದೇವಾಲಯ)ದಲ್ಲಿ ಕ್ರಿಸ್‍ಮಸ್ ಆಚರಣೆಗಾಗಿ ಅಲಂಕಾರ ಹಾಗೂ ಸಿದ್ಧತೆಗಳು ಭರದಿಂದ ಸಾಗಿವೆ.

ಆರೋಗ್ಯಮಾತೆ ಚರ್ಚ್‌ನಲ್ಲಿ ಡಿ.24ರ ಸಂಜೆ 7ಕ್ಕೆ ಕ್ರಿಸ್ತ ಜಯಂತಿ ಸ್ಮರಣಾರ್ಥ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಹಾಗೂ ಜಾಗರಣಾ ವಿಧಿಗಳು ಆರಂಭಗೊಳ್ಳಲಿವೆ. ಪೂಜೆಯ ನಂತರ, ಕ್ರೈಸ್ತ ಸಮಾಜದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಬಳಿಕ ಕ್ರಿಸ್‍ಮಸ್‍ನ ವಿಶೇಷ ಸಿಹಿ ಹಂಚಿಕೆ ಕಾರ್ಯ ನಡೆಯಲಿದೆ.

ಕ್ರಿಸ್‍ಮಸ್‍ ಆಚರಣೆಗೆ ಚರ್ಚ್‌ ಅನ್ನು ವಿಶೇಷ ಅಲಂಕಾರ ಸಿಂಗರಿಸಲಾಗಿದೆ. ಆವರಣದಲ್ಲಿ ನಕ್ಷತ್ರಾಕಾರದ ಕ್ರಿಸ್ತ ಜನಿಸಿದ ಗೊಂದಲಿ, ಕುರಿ, ಒಂಟೆ, ಕುದುರೆ ಹಾಗೂ ವಿವಿಧ ಪ್ರಾಣಿಗಳ ಪ್ರತಿಕೃತಿಗಳನ್ನು ಅಲಂಕರಿಸಿ ಸಿದ್ಧಪಡಿಸಲಾಗಿದೆ.

ADVERTISEMENT

ಸಿದ್ಧತೆಯಲ್ಲಿ ತೊಡಗಿದ್ದ ಚರ್ಚ್ ಮುಖ್ಯಪಾದ್ರಿ ರೆ.ಫಾ. ಡಾ. ಅಂತೋನಿ ಪೀಟರ್, ‘ಭೂಲೋಕಕ್ಕೆ ಶಾಂತಿ, ನೆಮ್ಮದಿಯ ಸಂದೇಶ ಹೊತ್ತು ತಂದ ಕ್ರಿಸ್ತರ ಜನನ ಜಗತ್ತಿಗೆ ಬೆಳಕು ತಂದ ಸುದಿನ. ತಮ್ಮ ಭೋದನೆ ಹಾಗೂ ಸಾಧನೆ ಮೂಲಕ ಏಸು ಕ್ರಿಸ್ತರು ಜನಮಾನಸದಲ್ಲಿ ಸದಾ ಪ್ರಸ್ತುತರಾಗಿದ್ದಾರೆ’ ಎಂದರು.

‘ಕೋವಿಡ್‌ನಿಂದ ವಿಶ‍್ವವೇ ನಲುಗುತ್ತಿರುವ ಸಂಕಷ್ಟ ಸಮಯದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ, ಶಾಂತಿ ಹಾಗೂ ನೆಮ್ಮದಿಯನ್ನು ದಯಾಮಯನಾದ ಯೇಸು ಕರುಣಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಆಚರಣೆ: ಕ್ರಿಸ್ತನ ಜನನದ ಸೂಚನೆ ನೀಡಿದ ನಕ್ಷತ್ರವನ್ನು ಕ್ರೈಸ್ತರು ತಮ್ಮ ಮನೆಯ ತಾರಸಿಗೆ ಅಳವಡಿಸುತ್ತಾರೆ. ಮನೆಯಲ್ಲಿ ಕ್ರಿಸ್‍ಮಸ್‍ ಮರವನ್ನು ತಂದು ವಿಶೇಷ ರೀತಿಯಲ್ಲಿ ಅಲಂಕರಿಸುವ ಜತೆಗೆ ವಿಶೇಷ ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟು ಪ್ರಾರ್ಥನೆ ಸಲ್ಲಿಸಿ, ನೆರೆ-ಹೊರೆಯವರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.