ADVERTISEMENT

ಇಬ್ಬರ ಜೀವ ಉಳಿಸಿದ ಕುಗ್ರಾಮದ ಪೋರರಿಗೆ ಶೌರ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 15:42 IST
Last Updated 30 ನವೆಂಬರ್ 2024, 15:42 IST
ಕಾರ್ಗಲ್ ಸಮೀಪದ ಆರೋಡಿ ಕುಗ್ರಾಮದ ಪುಟಾಣಿ ಪೋರರಿಗೆ ಬೆಂಗಳೂರಿನಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶೌರ್ಯ ಪ್ರಶಸ್ತಿ ಪ್ರಧಾನ ಮಾಡಿದರು
ಕಾರ್ಗಲ್ ಸಮೀಪದ ಆರೋಡಿ ಕುಗ್ರಾಮದ ಪುಟಾಣಿ ಪೋರರಿಗೆ ಬೆಂಗಳೂರಿನಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶೌರ್ಯ ಪ್ರಶಸ್ತಿ ಪ್ರಧಾನ ಮಾಡಿದರು    

ಕಾರ್ಗಲ್: ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ಆರೋಡಿ ಕುಗ್ರಾಮದ ಪುಟ್ಟ ಪೋರರಿಗೆ 2024ನೇ ಸಾಲಿನ ಮಕ್ಕಳ ಶೌರ್ಯ ಪ್ರಶಸ್ತಿ ಲಭಿಸಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರಿನಲ್ಲಿ ಶುಕ್ರವಾರ ಪ್ರಶಸ್ತಿ ಪ್ರಧಾನ ಮಾಡಿದರು.

ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶರಾವತಿ ಸಿಂಗಳೀಕ ಅಭಯಾರಣ್ಯದ ಆರೋಡಿ ನಿವಾಸಿಗಳಾದ ಅಶ್ವಿನ್ ನಾಗರಾಜ್ ಮತ್ತು ನಿಶಾಂತ್ ಲಿಂಗರಾಜು ಪ್ರಶಸ್ತಿ ಪಡೆದವರು.

ಮಕ್ಕಳ ದಿನಾಚರಣೆಯ ಅಂಗವಾಗಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಕೊಡುವ ಶೌರ್ಯ ಪ್ರಶಸ್ತಿ ಇದಾಗಿದ್ದು,  ಬಾವಿಗೆ ಬಿದ್ದ ಇಬ್ಬರನ್ನು ಈ ಇಬ್ಬರು ಸಮಯ ಪ್ರಜ್ಞೆಯಿಂದ ರಕ್ಷಿಸಿದ ಕಾರಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ADVERTISEMENT

ಘಟನೆ: ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮ ಆರೋಡಿಯ ಮನೆಯೊಂದರಲ್ಲಿ ತೆರೆದ ಬಾವಿ ಅಗೆಯುವ ಕೆಲಸವನ್ನು ಇಬ್ಬರು ಕಾರ್ಮಿಕರು ಮಾಡುತ್ತಿದ್ದರು. ಅಲ್ಲಿಯೇ ಸಂಜೆಯ ಸಮಯದಲ್ಲಿ ಆಟ ಆಡುತ್ತಿದ್ದ ಅಶ್ವಿನ್ ನಾಗರಾಜ್ ಮತ್ತು ನಿಶಾಂತ್ ಲಿಂಗರಾಜು ಅವರಿಗೆ ಬಾವಿಯೊಳಗೆ ಏನೋ ಬಿದ್ದ ಶಬ್ದ ಕೇಳಿ ಓಡಿ ಬಂದು ನೋಡಿದರು. ಆಗ ಅಂದಾಜು 60 ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಹಗ್ಗ ತುಂಡಾಗಿ ಬಿದ್ದು, ಒದ್ದಾಡುತ್ತಿದ್ದರು.

ಕೂಡಲೇ ಯಾವುದೇ ಅಂಜಿಕೆ ಇಲ್ಲದೇ ಗುಡ್ಡಗಾಡು ಪ್ರದೇಶದ ಅಲ್ಲೊಂದು ಇಲ್ಲೊಂದು ಇರುವ ಮನೆಯವರನ್ನು ಕೂಗಿ ಕರೆದು ಕಾರ್ಮಿಕರನ್ನು ಜೀವ ಸಹಿತ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದರು. ಮಕ್ಕಳ ಸಮಯ ಪ್ರಜ್ಞೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಘಟನೆ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನ ಸೆಳೆದಿತ್ತು.

ನಿಶಾಂತ್ ಲಿಂಗರಾಜು
ಅಶ್ವಿನ್ ನಾಗರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.