ADVERTISEMENT

ಸಿದ್ದರಾಮಯ್ಯ ಹೇಳಿಕೆಗೆ ಜನರಿಂದಲೇ ತಕ್ಕ ಉತ್ತರ: ಯಡಿಯೂರಪ್ಪ ತಿರುಗೇಟು

ಸರ್ಕಾರಕ್ಕೆ ಯಾರ ಬೆಂಬಲವೂ ಬೇಕಾಗಿಲ್ಲ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 7:50 IST
Last Updated 25 ನವೆಂಬರ್ 2019, 7:50 IST
   

ದಾವಣಗೆರೆ: ‘ರಾಜ್ಯ ಸರ್ಕಾರಕ್ಕೆ ಬೇರೆ ಯಾವುದೇ ಪಕ್ಷದ ಬೆಂಬಲ ಬೇಕಾಗಿಲ್ಲ. ಮುಂದಿನ ಮೂರೂವರೆ ವರ್ಷ ಸ್ವಂತ ಬಲದಿಂದಲೇ ನಾವು ಅಧಿಕಾರ ನಡೆಸಿ, ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆನಂದ ಸಿಂಗ್‌ ಪರ ಪ್ರಚಾರ ನಡೆಸಲು ಹೊಸಪೇಟೆಗೆ ಸೋಮವಾರ ಹೊರಡುವ ಮುನ್ನ ನಗರದ ಜಿಎಂಐಟಿ ಹೆಲಿಪ್ಯಾಡ್‌ ಬಳಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಉಪ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನಗಳನ್ನೂ ಗೆಲ್ಲುವುದಿಲ್ಲ’ ಎಂದು ವಿಧಾಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ‘ಪ್ರತಿಪಕ್ಷಗಳ ನಾಯಕರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ. ಮುಂದಿನ ಮೂರೂವರೆ ವರ್ಷಗಳ ಕಾಲ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಬೇಕು ಎಂದು ಜನ ಸಂಕಲ್ಪ ಮಾಡಿದ್ದಾರೆ. ಪ್ರಚಾರಕ್ಕೆ ತೆರಳಿದ ಎಲ್ಲಾ ಕಡೆ ಪಕ್ಷದ ಪರ ಉತ್ತಮ ವಾತಾವರಣ ಇದೆ. 15 ಸ್ಥಾನಗಳಲ್ಲೂ ನಾವು ಗೆಲುವು ಸಾಧಿಸುತ್ತೇವೆ’ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

ADVERTISEMENT

‘ವೀರಶೈವ ಸಮಾಜದ ಎಲ್ಲಾ ಮತಗಳೂ ಬಿಜೆಪಿಗೇ ಬರಬೇಕು’ ಎಂದು ತಾವು ನೀಡಿದ ಹೇಳಿಕೆಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ ಬಗ್ಗೆ ಗಮನ ಸೆಳೆದಾಗ, ‘ಕುಮಾರಸ್ವಾಮಿಗೆ ಮಾಡಲು ಬೇರೆ ಕೆಲಸ ಇಲ್ಲ’ ಎಂದು ಉತ್ತರಿಸಿದರು.

‘ಚುನಾವಣೆಯಲ್ಲಿ ಎಲ್ಲಾ ಸಮಾಜದವರೂ ಜಾತಿ–ಕುಲ–ಗೋತ್ರವನ್ನು ಮರೆತು ಬಿಜೆಪಿ ಜೊತೆ ನಿಲ್ಲಬೇಕು ಎಂದು ಪ್ರಾರ್ಥಿಸುತ್ತೇನೆ’ ಎಂದೂ ಅವರು ಇದೇ ಸಂದರ್ಭದಲ್ಲಿ ಸಮಜಾಯಿಷಿ ನೀಡಿದರು.

ಸಂತ್ರಸ್ತರಿಗೆ ಪರಿಹಾರ: ‘ಬೆಂಗಳೂರಿನ ಹುಳಿಮಾವು ಕೆರೆ ದಂಡೆ ಒಡೆದು ದೊಡ್ಡ ಅನಾಹುತವಾಗಿದೆ. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಸಂಜೆ ವೇಳೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲಾ ಸಂತ್ರಸ್ತ ಕುಟುಂಬಗಳಿಗೂ ಪರಿಹಾರ ಘೋಷಿಸುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಮುರುಗೇಶ ನಿರಾಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರೂ ಇದ್ದರು.

ಜಿಎಂಐಟಿ ಆವರಣದಲ್ಲಿ ವಾಯುವಿಹಾರ

ನಗರದ ಜಿಎಂಐಟಿ ಆವರಣದಲ್ಲಿ ಸೋಮವಾರ ಮುಂಜಾನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಾಯು ವಿಹಾರ ಮಾಡಿ ಉಪ ಚುನಾವಣಾ ಪ್ರಚಾರಕ್ಕೆ ಸಜ್ಜಾದರು.

ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಮುರುಗೇಶ ನಿರಾಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್, ಸಂಸದರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರುಮುಖ್ಯಮಂತ್ರಿ ಜೊತೆ ಹೆಜ್ಜೆ ಹಾಕಿದರು.

ವಾಯು ವಿಹಾರಕ್ಕೆ ಹೊರಟಾಗ ಎದುರಾದ ಜಿಎಂಐಟಿಯ ವಿದ್ಯಾರ್ಥಿಗಳು ಮುಖ್ಯಮಂತ್ರಿ ಜೊತೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.