ADVERTISEMENT

ಸಾಹಿತ್ಯ ಇಲ್ಲದಿದ್ದರೆ ಮನುಷ್ಯ ಪಶುವಾಗುತ್ತಿದ್ದ: ಸಾಹಿತಿ ಬಿ.ಟಿ.ಲಲಿತಾ ನಾಯಕ್

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಂಡಾಯ ಸಾಹಿತಿ ಬಿ.ಟಿ. ಲಲಿತಾ ನಾಯಕ್ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 14:26 IST
Last Updated 23 ನವೆಂಬರ್ 2025, 14:26 IST
   

ದಾವಣಗೆರೆ: ‘ಕಲೆ ಮತ್ತು ಸಾಹಿತ್ಯ ಇಲ್ಲದೇ ಹೋಗಿದ್ದರೆ ಮನುಷ್ಯ ಪಶುವಾಗಿಯೇ ಉಳಿಯುತ್ತಿದ್ದ. ಮನುಷ್ಯನಾಗಿ ರೂಪುಗೊಳ್ಳುವುದಕ್ಕೆ ಹಲವು ಘಟ್ಟಗಳನ್ನು ದಾಟಿ ಬಂದಿದ್ದೇವೆ. ಇದರಲ್ಲಿ ಸಾಹಿತ್ಯ ಮತ್ತು ಕಲೆಯ ಪ್ರಭಾವ ಹೆಚ್ಚು’ ಎಂದು ಬಂಡಾಯ ಸಾಹಿತಿ ಬಿ.ಟಿ. ಲಲಿತಾ ನಾಯಕ್ ಅಭಿಪ್ರಾಯಪಟ್ಟರು.

ಇಲ್ಲಿನ ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಸಭಾಂಗಣದಲ್ಲಿ ‘ಬೇರು-ಚಿಗುರು’ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ’ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಾಚೀನ ಕನ್ನಡ ಸಾಹಿತ್ಯ, ವಚನ ಸಾಹಿತ್ಯದಲ್ಲಿ ಕೂಡ ಮಹಿಳಾ ಸಂವೇದನೆ ಹುಡುಕುವ ಪ್ರಯತ್ನ ಶ್ಲಾಘನೀಯ. ಕೀರ್ತನೆ, ತತ್ವಪದದಲ್ಲಿ ಹೆಚ್ಚು ಮೌಢ್ಯವಿದೆ. ಆದರೆ, ಇದು ಒಂದು ಕಾಲಘಟ್ಟದಲ್ಲಿ ಜನರ ಕೈಹಿಡಿದಿದೆ. ಹೀಗಾಗಿ, ಇದನ್ನು ಸ್ವೀಕರಿಸಬೇಕಿದೆ. ವಿಷವನ್ನು ತೆಗೆದಿಟ್ಟು ಅಮೃತವನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ’ ಎಂದು ಹೇಳಿದರು.‌

ADVERTISEMENT

‘ನವ್ಯ ಮತ್ತು ನವೋದಕ್ಕಿಂತ ಪ್ರಗತಿಶೀಲ ಸಾಹಿತ್ಯ ಜೀವಪರವಾಗಿತ್ತು. ಮನುಷ್ಯತ್ವ ಬೆಳೆಯುವ ಪ್ರಯತ್ನ ಮಾಡಿದೆ. ದಲಿತ ಮತ್ತು ಬಂಡಾಯ ಭಿನ್ನ ಎಂಬ ಭಾವನೆ ಇದೆ. ಈ ಎರಡು ಸಾಹಿತ್ಯ ಪ್ರಕಾರಗಳಲ್ಲಿರುವ ಆಶಯ ಒಂದೇ. ಇವುಗಳ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ಸಮಾಜವನ್ನು ಪೀಡಿಸುವ ಶಕ್ತಿಗಳನ್ನು ವಿರೋಧಿಸುವುದೇ ಬಂಡಾಯ. ಈ ಸಾಹಿತ್ಯದ ಬಗ್ಗೆ ಸಮಾಜದಲ್ಲಿ ತಪ್ಪು ತಿಳಿವಳಿಕೆ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಾವಿರಾರು ವರ್ಷಗಳಿಂದ ಅನ್ಯಾಯ, ಅತ್ಯಾಚಾರಗಳನ್ನು ದೇವರು, ಧರ್ಮದ ಹೆಸರಿನಲ್ಲಿ ಒಪ್ಪಿಕೊಂಡಿದ್ದೇವೆ. ಇದರಿಂದ ಹೊರಬರುವ ಅಗತ್ಯವಿದೆ. ನ್ಯಾಯಸಮ್ಮತ ಹಕ್ಕು ಪಡೆಯುವುದಕ್ಕೆ ಬಂಡಾಯ ಏಳುವುದು ತಪ್ಪಲ್ಲ. ಬಂಡಾಯವೆಂದರೆ ಯುದ್ಧ ಮಾಡುವುದಲ್ಲ. ಇದು ಬುದ್ಧನಂತೆ ಶಾಂತಿಯ ಅಭಿವ್ಯಕ್ತಿ. ಬಂಡಾಯಕ್ಕೆ ಪಕ್ಷ, ಜಾತಿ, ಪಂಥ ಇಲ್ಲ. ಇದೊಂದು ಮನಷ್ಯತ್ವದ ಭಾಗ’ ಎಂದರು.

‘ಜಾತಿ, ಕೋಮುಗಲಭೆ, ಭ್ರಷ್ಟಾಚಾರ, ದೌರ್ಜನ್ಯ ಮುಕ್ತ ಸಮಾಜ ಕಟ್ಟುವ ತುರ್ತು ಅಗತ್ಯವಿದೆ. ಜಾತಿ ಮನೋಭಾವ, ಪುರುಷರ ಅಹಂಭಾವ ಕಡಿಮೆಯಾಗಬೇಕಿದೆ. ಜನರಲ್ಲಿ ಪ್ರಾಮಾಣಿಕತೆ, ಪರಿಶುದ್ಧತೆ ಇದ್ದಾಗ ಮಾತ್ರ ಸರ್ಕಾರ ರೂಪಿಸುವ ಜನಪರ ಯೋಜನೆಗಳು ಸಾಕಾರಗೊಳ್ಳಲು ಸಾಧ್ಯ’ ಎಂದು ಹೇಳಿದರು.

ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಪ್ರಾಂಶುಪಾಲೆ ಪ್ರೊ.ಕಮಲಾ ಸೊಪ್ಪಿನ್, ಸಾಹಿತಿ ಅನಸೂಯಾ ಕಾಂಬಳೆ, ಕವಯಿತ್ರಿ ಮೈತ್ರೇಯಿಣಿ ಗದ್ದೆಪ್ಪಗೌಡರ್, ‘ಬೇರು-ಚಿಗುರು’ ಅಧ್ಯಕ್ಷ ಎಚ್.ಜೆ. ವಿಜಯಕುಮಾರ್, ಕಾರ್ಯದರ್ಶಿ ಡಿ.ಅಂಜನಪ್ಪ, ಪ್ರಾಧ್ಯಾಪಕರಾದ ಎಂ.ಆರ್. ಲೋಕೇಶ್, ರಣಧೀರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.