ADVERTISEMENT

ದಾವಣಗೆರೆ: 80 ಅಡಿ ಬಾವಿಗೆ ಬಿದ್ದ ಎಮ್ಮೆ ರಕ್ಷಣೆ

ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ನಾಲ್ಕು ಗಂಟೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 6:26 IST
Last Updated 28 ಜುಲೈ 2020, 6:26 IST
ಹರಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ 80 ಅಡಿ ಆಳದ ಬಾವಿಯಲ್ಲಿ ಮಂಗಳವಾರ ಬಿದ್ದಿದ್ದ ಎಮ್ಮೆಯನ್ನು ದಾವಣಗೆರೆಯ ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಹೊರ ತೆಗೆದರು.
ಹರಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ 80 ಅಡಿ ಆಳದ ಬಾವಿಯಲ್ಲಿ ಮಂಗಳವಾರ ಬಿದ್ದಿದ್ದ ಎಮ್ಮೆಯನ್ನು ದಾವಣಗೆರೆಯ ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಹೊರ ತೆಗೆದರು.   

ದಾವಣಗೆರೆ: ಹರಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ ಮಂಗಳವಾರ ಬೆಳಗಿನಜಾವ 80 ಆಳದ ಬಾವಿಯೊಳಗೆ ಬಿದ್ದಿದ್ದ ಎಮ್ಮೆಯನ್ನು ದಾವಣಗೆರೆಯ ಅಗ್ನಿ ಶಾಮಕ ದಳದ ಸಿಬ್ಬಂದಿ ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಲಕ್ಷ್ಮೀಪುರದ ಕೊಟ್ರೇಶ್‌ ನಾಯ್ಕ ಅವರಿಗೆ ಸೇರಿದ ಎಮ್ಮೆ ಬೆಳಗಿನಜಾವ 4.30ರ ಸುಮಾರಿಗೆ ಬಾವಿಯೊಳಗೆ ಬಿದ್ದಿದೆ. ಶಬ್ದ ಬಂದಿದ್ದರಿಂದ ಬಾಕಿಯೊಳಗೆ ಎಮ್ಮೆ ಬಿದ್ದ ವಿಚಾರ ಗೊತ್ತಾಗಿದೆ. 5 ಗಂಟೆ ಹೊತ್ತಿಗೆ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿ ನೆರವಿಗೆ ಬರುವಂತೆ ಕೊಟ್ರೇಶ್‌ ಅವರು ಕೋರಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನು ಸುರಕ್ಷಿತವಾಗಿ ಹೊರತೆಗೆಯಲು ಯಶಸ್ವಿಯಾಗಿದ್ದಾರೆ.

‘ಎಮ್ಮೆ ಬಿದ್ದಿರುವ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಎರಡು ವಾಹನಗಳಲ್ಲಿ ನಾವು 10 ಸಿಬ್ಬಂದಿ 30 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದೇವೆ. 80 ಅಡಿ ಆಳದ ಬಾವಿಯಾಗಿದ್ದರಿಂದ ಜೀವಂತವಾಗಿ ಎಮ್ಮೆಯನ್ನು ಹೊರ ತೆಗೆಯುವುದು ಸವಾಲಿನ ಕೆಲಸವಾಗಿತ್ತು. ಸುಬಾನ್‌, ಆನಂದ ಸೇರಿ ನಮ್ಮ ಸಿಬ್ಬಂದಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪರಿಣಾಮ ಬೆಳಿಗ್ಗೆ 9 ಗಂಟೆ ಹೊತ್ತಿಗೆ ಎಮ್ಮೆಯನ್ನು ಮೇಲಕ್ಕೆ ಎತ್ತಲು ಸಾಧ್ಯವಾಯಿತು’ ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ಬಾವಿಯಲ್ಲಿ ಸುಮಾರು ಏಳು ಅಡಿ ರಾಡಿ ನೀರು ಇತ್ತು. ನೇರವಾಗಿ ನೀರಿನೊಳಗೆ ಬಿದ್ದಿದ್ದರಿಂದ ಸಣ್ಣ ಪುಟ್ಟ ಗಾಯಗಳಾಗಿದ್ದು, ಎಮ್ಮೆಯ ಜೀವಕ್ಕೆ ಅಪಾಯವಾಗಿಲ್ಲ’ ಎಂದು ತಿಳಿಸಿದರು.

‘ನಾನು ಮನೆಯ ಹೊರಗೆ ಮಲಗಿಕೊಂಡಿದ್ದೆ. ಬೆಳಗಿನ ಜಾವ ಮನೆಯ ಪಕ್ಕದ ಬಾವಿಯಲ್ಲಿ ಏನೋ ಬಿದ್ದ ಶಬ್ದ ಬಂತು. ಬಾವಿ ಪಕ್ಕದಲ್ಲಿ ಕಟ್ಟಿದ್ದ ನಮ್ಮ ಎಮ್ಮೆ ಕಾಣಿಸಲಿಲ್ಲ. ಬಾವಿಗೆ ಬ್ಯಾಟರಿ ಬಿಟ್ಟು ನೋಡಿದಾಗ ಎಮ್ಮೆ ಬಿದ್ದಿರುವುದು ಕಂಡುಬಂತು. ಬಹುಶಃ ಎಮ್ಮೆಗಳು ಕಾದಾಡಿದ್ದರಿಂದ ಬಾವಿ ಕಟ್ಟೆಯನ್ನು ಹತ್ತಿದಾಗ ಕಬ್ಬಿಣದ ಜಾಲರಿ ತುಂಡಾಗಿ ಒಳಗೆ ಬಿದ್ದಿರಬೇಕು. ಇಷ್ಟು ಆಳದ ಬಾವಿಯಿಂದ ಎಮ್ಮೆಯನ್ನು ಎತ್ತಲು ನಮ್ಮಿಂದ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದೆವು. ನಾಲ್ಕು ತಿಂಗಳ ಗರ್ಭ ಧರಿಸಿರುವ ಎಮ್ಮೆಯನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ. ಪಶು ವೈದ್ಯರನ್ನು ಕರೆಸಿ ಎಮ್ಮೆಯ ಗರ್ಭದಲ್ಲಿರುವ ಕರು ಆರೋಗ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ನಮಗೆ ಸಮಾಧಾನವಾಗಲಿದೆ’ ಎಂದು ಎಮ್ಮೆಯ ಮಾಲೀಕ ಕೊಟ್ರೇಶ್‌ ನಾಯ್ಕ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.