ADVERTISEMENT

ದಾವಣಗೆರೆ: ಟ್ಯಾಕ್ಸಿ ಮಾಲಕ ಚಾಲಕರಿಗೆ ಬೆಣ್ಣೆ, ಬರೀ ಚಾಲಕರಿಗೆ ಸುಣ್ಣ

ಕೋವಿಡ್ ವಿಶೇಷ ಪ್ಯಾಕೇಜ್‌ನ ಪರಿಹಾರ ಪಡೆಯಲು ಅಡ್ಡಿಯಾದ ನಿಯಮ

ಬಾಲಕೃಷ್ಣ ಪಿ.ಎಚ್‌
Published 11 ಜೂನ್ 2021, 1:55 IST
Last Updated 11 ಜೂನ್ 2021, 1:55 IST
ಬದ್ರಿ
ಬದ್ರಿ   

ದಾವಣಗೆರೆ: ರಾಜ್ಯ ಸರ್ಕಾರ ಘೋಷಿಸಿರುವ ಕೋವಿಡ್‌ ವಿಶೇಷ ಪ್ಯಾಕೇಜ್‌ನಲ್ಲಿ ಟ್ಯಾಕ್ಸಿ ಚಾಲಕರಿಗೆ ₹ 3 ಸಾವಿರ ಪರಿಹಾರ ಘೋಷಿಸಿದೆ. ಆದರೆ ಟ್ಯಾಕ್ಸಿ ಚಾಲನೆಯನ್ನೇ ನಂಬಿರುವವರಿಗೆ ಪರಿಹಾರ ಪಡೆಯಲು ಸರ್ಕಾರದ ನಿಯಮವೇ ಅಡ್ಡಿಯಾಗಿದೆ.

ಟ್ಯಾಕ್ಸಿ ಮಾಲೀಕ ಮತ್ತು ಚಾಲಕನಾಗಿದ್ದರೆ ಮಾತ್ರ ಈ ಪರಿಹಾರ ಸಿಗುತ್ತಿದೆ. ಟ್ಯಾಕ್ಸಿ ಕೊಳ್ಳಲು ಕೂಡ ಸಾಧ್ಯವಾಗದೇ ಬೇರೆಯವರ ಟ್ಯಾಕ್ಸಿಯಲ್ಲಿ ಚಾಲಕರಾಗಿರುವವರಿಗೆ ಪರಿಹಾರ ಸಿಗುತ್ತಿಲ್ಲ.

‘ಕೊರೊನಾ ಬಂದಾಗಿನಿಂದ ದುಡಿಮೆ ಇಲ್ಲ. ಆದರೆ ತೆರಿಗೆ ಕಡಿಮೆಯಾಗಿಲ್ಲ. ಇನ್ಶೂರೆನ್ಸ್‌ ಕಡಿಮೆಯಾಗಿಲ್ಲ. ಅಲ್ಪಸ್ವಲ್ಪ ಬಾಡಿಗೆ ಸಿಕ್ಕರೂ ಡೀಸೆಲ್‌, ಪೆಟ್ರೋಲ್‌ ಬೆಲೆ ಒಂದೇ ಸಮನೆ ಏರಿರುವುದರಿಂದ ಬಾಡಿಗೆ ಹೆಚ್ಚು ಹೇಳಬೇಕಾಗುತ್ತದೆ. ಆದರೆ ದುಡಿಮೆ ಸಿಕ್ಕರೆ ಸಾಕು ಎಂದು ಎಲ್ಲರೂ ಕಾಯುತ್ತಿರುವುದರಿಂದ ಕಡಿಮೆ ಬಾಡಿಗೆಯಲ್ಲಿ ಹೋಗಬೇಕಾಗುತ್ತದೆ. ಇಲ್ಲದೇ ಇದ್ದರೆ ಬಾಡಿಗೆ ಬೇರೆಯವರ ಪಾಲಾಗುತ್ತದೆ. ಇಂಥ ಸಂದರ್ಭದಲ್ಲಿ ಸರ್ಕಾರ ಟ್ಯಾಕ್ಸಿ ಚಾಲಕರಿಗೆ ಪರಿಹಾರ ಘೋಷಣೆ ಮಾಡಿದೆ. ಆದರೆ ಅದಕ್ಕೆ ವಿಧಿಸಿರುವ ಷರತ್ತುಗಳು ಪರಿಹಾರ ಪಡೆಯಲು ಅಡ್ಡಿಯಾಗಿದೆ’ ಎಂದು ದಾವಣಗೆರೆಯ ಟ್ಯಾಕ್ಸಿ ಚಾಲಕ ಬದ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಳೆದ ವರ್ಷ ಪಾಸ್‌ ವ್ಯವಸ್ಥೆ ಇದ್ದಿದ್ದರಿಂದ ಸ್ವಲ್ಪವಾದರೂ ದುಡಿಮೆ ಇತ್ತು. ಅಲ್ಲದೇ ಕಳೆದ ವರ್ಷ ಲಾಕ್‌ಡೌನ್ ಆಗುವ ಮೊದಲು ಒಳ್ಳೆಯ ಬಾಡಿಗೆ ಇದ್ದ ಕಾರಣ ಲಾಕ್‌ಡೌನ್‌ ಸಮಯದಲ್ಲಿ ಜೀವನ ನಿರ್ವಹಣೆಗೆ ಅಷ್ಟೊಂದು ಕಷ್ಟವಾಗಲಿಲ್ಲ. ಈ ಬಾರಿ ಪಾಸ್‌ ನೀಡದ ಕಾರಣ ದುಡಿಮೆಯೇ ಇಲ್ಲ ಎಂದು ಅವರು ನೋವು ತೋಡಿಕೊಂಡರು.

‘ನನ್ನ ಕಾರು ನಾನೇ ಓಡಿಸುತ್ತಿದ್ದೇನೆ. ಹಾಗಾಗಿ ನನಗೆ ಪರಿಹಾರ ಸಿಕ್ಕಿದೆ. ನನ್ನ ಇನ್ನೊಂದು ಕಾರು ಇದೆ. ಅದಕ್ಕೆ ಚಾಲಕನನ್ನು ಇಟ್ಟಿದ್ದೇನೆ. ಅವರಿಗೆ ಪರಿಹಾರ ದೊರೆತಿಲ್ಲ’ ಎಂದು ಕರ್ನಾಟಕ ಟ್ಯಾಕ್ಸಿ ಅಸೋಸಿಯೇಶನ್‌ನ ಜಿಲ್ಲಾ ಕಾರ್ಯದರ್ಶಿ ಶಿವರಾಜ್‌ ತಿಳಿಸಿದ್ದಾರೆ.

ಕಳೆದ ವರ್ಷ ಕೂಡ ಟ್ಯಾಕ್ಸಿ ಚಾಲಕರಿಗೆ ಪರಿಹಾರ ಘೋಷಣೆ ಮಾಡಲಾಗಿತ್ತು. ಅದೇ ಬಹಳ ಮಂದಿಗೆ ಇನ್ನೂ ಬಂದಿಲ್ಲ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.