ADVERTISEMENT

ವಿವಿಧ ಸ್ಥಾನಗಳಿಗೆ ಮೇ 20ರಂದು ಉಪಚುನಾವಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 3:04 IST
Last Updated 30 ಏಪ್ರಿಲ್ 2022, 3:04 IST

ದಾವಣಗೆರೆ: ಇಲ್ಲಿನ ಮಹಾನಗರಪಾಲಿಕೆಯ ವಾರ್ಡ್ ಸಂಖ್ಯೆ 27 ಭಗತ್‍ಸಿಂಗ್ ನಗರ ಹಾಗೂ 38 ನೇ ವಾರ್ಡ್‌ನ-ಕೆ.ಇ.ಬಿ ಕಾಲೊನಿಗೆ ಮೇ 20ರಂದು ಉಪಚುನಾವಣೆ ನಡೆಯಲಿದೆ.

ಜೆ.ಎನ್.ಶ್ರೀನಿವಾಸ್ ಹಾಗೂ ಶ್ವೇತಾ ಶ್ರೀನಿವಾಸ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಸ್ಥಾನಗಳಿಗೆ ವೇಳಾಪಟ್ಟಿ ನಿಗದಿಯಾಗಿದೆ.

ಮೇ 2 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ಮೇ 9ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಮೇ 10ರಂದು ನಾಮಪತ್ರಗಳನ್ನು ಪರಿಶೀಲಿಸಲು ಕೊನೆಯ ದಿನ. ಹಿಂಪಡೆಯಲು ಮೇ 12 ಕೊನೆಯ ದಿನ.

ADVERTISEMENT

ಮೇ 20ರಂದು ಬೆಳಿಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ಮತದಾನ ನಡೆಯಲಿದ್ದು, ಮೇ 22ರಂದು ಮತಗಳ ಎಣಿಕೆ ನಡೆಯಲಿದೆ. 28ನೇ ವಾರ್ಡ್ ಭಗತ್ ಸಿಂಗ್ ನಗರ ಸಾಮಾನ್ಯ ವರ್ಗಕ್ಕೂ, 37ನೇ ವಾರ್ಡ್ ಕೆ.ಇ.ಬಿ ಕಾಲೊನಿ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗಿದೆ.

‘ರೇಷ್ಮಾ ಹಾನಗಲ್ (ಮೊ.ಸಂ: 9481039449) ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದು, ಸಹಾಯಕ ಚುನಾವಣಾ ಅಧಿಕಾರಿಯಾಗಿ ಉಪ ವಿಭಾಗಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಗ್ರೇಡ್-2 ಗಿರೀಶ್ ಬಾಬು (ಮೊ.ಸಂ: 9483770354) ಅನ್ನು ಸಂಪರ್ಕಿಸಬಹುದು. ನಾಮಪತ್ರಗಳನ್ನು ಮಹಾನಗರ ಪಾಲಿಕೆಯ ಕೊಠಡಿ ಸಂಖ್ಯೆ 2ರಲ್ಲಿ ಸ್ವೀಕರಿಸಲಾಗುವುದು’ ಎಂದು ಪಾಲಿಕೆಯ ಆಯುಕ್ತರಾದ ವಿಶ್ವನಾಥ್ ಮುದಜ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
===

7 ಗ್ರಾ.ಪಂಗಳಲ್ಲಿ ಉಪಚುನಾವಣೆ

ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ 7 ಗ್ರಾಮ ಪಂಚಾಯಿತಿಯ 12 ಸ್ಥಾನಗಳಿಗೆ ಮೇ 20ರಂದು ಉಪ ಚುನಾವಣೆ ನಡೆಯಲಿದೆ.

ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಹಾಗೂ ಕುಕ್ಕವಾಡ ಗ್ರಾಮ ಪಂಚಾಯಿತಿಯ ತಲಾ 1ಸ್ಥಾನ, ಚನ್ನಗಿರಿ ತಾಲ್ಲೂಕಿನ ಹೊಸಕೆರೆ (ಬಸವಾಪಟ್ಟಣ) ಗೊಪ್ಪೇನಹಳ್ಳಿಗಳಲ್ಲಿ ತಲಾ 1 ಸ್ಥಾನ, ಜಗಳೂರು ತಾಲ್ಲೂಕಿನ ಬಿದರಕೆರೆಯಲ್ಲಿ 2, ಹರಿಹರ ತಾಲ್ಲೂಕಿನ ಎಳೆಹೊಳೆಯಲ್ಲಿ 1 ಹಾಗೂ ನ್ಯಾಮತಿ ತಾಲ್ಲೂಕಿನ ಗುಡ್ಡೇಹಳ್ಳಿಯ ತಲಾ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಮೇ 5ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಮೇ 10ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನಾಂಕ. ನಾಮಪತ್ರಗಳ ಪರಿಶೀಲನೆಗೆ ಮೇ 11, ನಾಮಪತ್ರ ಹಿಂಪಡೆಯಲು ಮೇ 13 ಕಡೆಯ ದಿನಾಂಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.