ದಾವಣಗೆರೆ: ‘ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವ ಸಂಬಂಧ ಆಗಸ್ಟ್ ಮೊದಲ ವಾರದಲ್ಲಿ ಕಾಡಾ ಸಮಿತಿ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದು, ನೀರು ಬಿಡುಗಡೆ ಮಾಡುವ ದಿನಾಂಕವನ್ನು ಅಂದಿನ ಸಭೆಯಲ್ಲಿ ನಿಗದಿಪಡಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
‘ದೇವರ ಕೃಪೆಯಿಂದ ಸರಿಯಾದ ಸಮಯದಲ್ಲಿ ಮಳೆಯಾಗಿದ್ದು, ರೈತರು ಖುಷಿಯಲ್ಲಿ ಇದ್ದಾರೆ. ಭದ್ರಾ ಜಲಾಶಯದಲ್ಲಿ ಪ್ರಸ್ತುತ 161.06 ಅಡಿ ನೀರು ಇದ್ದು, ಶೀಘ್ರದಲ್ಲಿಯೇ ನೀರಾವರಿ ಸಲಹಾ ಸಮಿತಿ ರಚಿಸಲಾಗುವುದು’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಮುಂಗಾರು ಆರಂಭದಲ್ಲಿ ಮಳೆ ಬೀಳುವುದು ವಿಳಂಬವಾದರೂ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬಂದು ಜಲಾಶಯಕ್ಕೆ ಉತ್ತಮ ನೀರು ಹರಿದು ಬಂದಿದೆ. ವಾಡಿಕೆಯಂತೆ 163 ಅಡಿ ನೀರು ಜಲಾಶಯದಲ್ಲಿದ್ದರೆ ಮಳೆಗಾಲದಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಈಗಾಗಲೇ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದ್ದು, ನೀರಿನ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಸಭೆ ಕರೆದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.