
ಬಿಜೆಪಿ ಶಾಸಕ ಬಿ.ಪಿ. ಹರೀಶ್
ದಾವಣಗೆರೆ: ‘ಮಣ್ಣು ಅಕ್ರಮ ತಡೆಯಲು ಪ್ರಯತ್ನಿಸಿದ ಸ್ಥಳದಲ್ಲಿ ದೂರುದಾರ ಇರಲಿಲ್ಲ. ಜಾತಿ ನಿಂದನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳೇ ಇಲ್ಲ. ಸುಳ್ಳು ಪ್ರಕರಣ ದಾಖಲಿಸಿರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದೆ’ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಆರೋಪಿಸಿದರು.
‘ಮಣ್ಣು ಅಕ್ರಮ ಗಣಿಗಾರಿಕೆ, ಸಾಗಣೆಯನ್ನು ತಡೆಯಲು ಯತ್ನಿಸಿದ್ದೆ. ನನ್ನ ವಿರುದ್ಧ ದೂರು ದಾಖಲಿಸಿರುವ ವ್ಯಕ್ತಿ ಆಗ ಸ್ಥಳದಲ್ಲಿ ಇರಲಿಲ್ಲ. ಪ್ರಕರಣ ದಾಖಲಿಸಲು ಯಾವುದೇ ಸಾಕ್ಷ್ಯಗಳು ಅವರ ಬಳಿ ಇಲ್ಲ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಕರಣ ದಾಖಲಾದ ನಾಲ್ಕು ದಿನಗಳ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.
‘ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮಣ್ಣು ಅಕ್ರಮ ಗಣಿಗಾರಿಕೆ, ಸಾಗಣೆಗೆ ಸಂಬಂಧಿಸಿದಂತೆ ನನ್ನ ಬಳಿ ಸಾಕ್ಷ್ಯಗಳಿವೆ. ಮಣ್ಣು ತೆಗೆದ ಜೆಸಿಬಿ, ಸಾಗಣೆ ಮಾಡಿದ ಲಾರಿಗಳ ನೋಂದಣಿ ಸಂಖ್ಯೆ ಸಮೇತ ದಾಖಲೆಗಳಿವೆ. ಇವುಗಳನ್ನು ಗ್ರಾಮಾಂತರ ಪೊಲಿಸ್ ಠಾಣೆಗೆ ನೀಡಲಾಗುವುದು’ ಎಂದು ಹೇಳಿದರು.
‘ಮಣ್ಣು ಅಕ್ರಮ ಸಾಗಣೆಯನ್ನು ಪ್ರಶ್ನಿಸಿದ ನನ್ನ ಆಪ್ತ ಸಹಾಯಕನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಈ ಕುರಿತು ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಲಾಗುವುದು. ಇಂತಹ ಅಕ್ರಮ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕೃಷಿ ಇಲಾಖೆ ಕ್ರಮ ಕೈಗೊಂಡಿಲ್ಲ’ ಎಂದು ಕಿಡಿಕಾರಿದರು.
ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್ ಹಾಜರಿದ್ದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ. ಒಂದೊಂದೆ ಹಗರಣವನ್ನು ಹೊರಗೆ ಎಳೆಯುತ್ತೇನೆ.–ಬಿ.ಪಿ.ಹರೀಶ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.