ದಾವಣಗೆರೆ: ಇಲ್ಲಿನ ಹೊರವಲಯದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆದ ಸಿಬಿಎಸ್‌ಇ ಕ್ಲಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬೆಂಗಳೂರಿನ ಬೊಮ್ಮಸಂದ್ರದ ಡೆಲ್ಲಿ ಪಬ್ಲಿಕ್ ಶಾಲೆ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಶಾಲೆಯ ತಂಡ ದ್ವಿತೀಯ ಹಾಗೂ ಶಿವಮೊಗ್ಗದ ಜಾವಳ್ಳಿಯ ಜ್ಞಾನದೀಪ ಶಾಲೆಯ ಶಾಲಾ ತಂಡ ತೃತೀಯ ಸ್ಥಾನ ಪಡೆದವು.
ಕ್ರೀಡಾಕೂಟದಲ್ಲಿ ರಾಜ್ಯದ 284 ಸಿಬಿಎಸ್‌ಇ ಶಾಲೆಗಳ 2,600 ಕ್ರೀಡಾಪಟುಗಳು ಭಾಗವಹಿಸಿದ್ದರು. 14, 17 ಮತ್ತು 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ಆ.29ರಿಂದ ಆರಂಭವಾದ ಕ್ರೀಡಾಕೂಟ ಸೋಮವಾರ ಸಮಾರೋಪಗೊಂಡಿತು.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅಶೋಕ್ ದಾಮ್, ಬಾಲಕಿಯರ ವಿಭಾಗದಲ್ಲಿ ಎಸ್.ಮಾನಿಕಾ, 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶುಧಾಂಶು ರಾವ್, ಬಾಲಕಿಯರ ವಿಭಾಗದಲ್ಲಿ ವಿ.ಎಸ್.ಸೃಷ್ಟಿ ಪ್ರಶಸ್ತಿ ಪಡೆದರು. 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನಿರಂಜನ ಹಾಗೂ ಬಾಲಕಿಯರ ವಿಭಾಗದಲ್ಲಿ ಎಸ್.ಎ.ಭುವನಾ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.
ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ಶಾಲೆಯ ಅಂಕುಶಾ ಬಿ.ಎ. ಎತ್ತರ ಜಿಗಿತದಲ್ಲಿ ಹಾಗೂ ಎ.ಎಸ್. ಚಿನ್ಮಯಿ ಜಾವಲಿನ್ ಎಸೆತದಲ್ಲಿ ಮೊದಲ ಸ್ಥಾನ ಪಡೆದರು.
ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು, ಪ್ರಾಂಶುಪಾಲ ರಾಜೇಶ್ ಪ್ರಸಾದ್, ಪತ್ರಕರ್ತೆ ವಿಜಯ ಲಕ್ಷ್ಮಿ ಶಿಬರೂರು, ಕ್ರೀಡಾಕೂಟದ ವೀಕ್ಷಕರಾದ ಬಸವರಾಜ ಸಜ್ಜನರ್, ಪ್ರಮೋದ್ ಪಾಟೀಲ್, ಸೀತಾರಾಮಗೌಡ, ದೈಹಿಕ ಶಿಕ್ಷಣ ನಿರ್ದೇಶಕರಾದ ಸಂಜೀವ ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.