ADVERTISEMENT

ಗುಣಮಟ್ಟದ ಕಲಿಕೆಗೆ ಬೇಕು ಕೇಂದ್ರೀಕೃತ ಮೌಲ್ಯಮಾಪನ

7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಶಿಕ್ಷಣ ತಜ್ಞರ ಸಹಮತ

ವಿನಾಯಕ ಭಟ್ಟ‌
Published 20 ಅಕ್ಟೋಬರ್ 2019, 2:57 IST
Last Updated 20 ಅಕ್ಟೋಬರ್ 2019, 2:57 IST
ಡಾ. ಎಂ.ಜಿ. ಈಶ್ವರಪ್ಪ
ಡಾ. ಎಂ.ಜಿ. ಈಶ್ವರಪ್ಪ   

ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದಕ್ಕೆ ಜಿಲ್ಲೆಯ ಕೆಲವು ಶಿಕ್ಷಣ ತಜ್ಞರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ನಿರ್ಧಾರ ಪ್ರಕಟಿಸಿರುವುದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಕಲಿಕಾ ಮಟ್ಟವನ್ನು ಮಾಧ್ಯಮಿಕ ಶಿಕ್ಷಣ ಹಂತದಲ್ಲೂ ಅಳೆಯಲು ರಾಜ್ಯಮಟ್ಟದಲ್ಲಿ ಪರೀಕ್ಷೆ ನಡೆಸಿ ಕೇಂದ್ರೀಕೃತ ಮೌಲ್ಯಮಾಪನ ನಡೆಸುವುದು ಅಗತ್ಯವಾಗಿದೆ. ಮಕ್ಕಳ ಮನಸ್ಸಿಗೆ ಇದು ಹೊರೆ ಎನಿಸದೇ ಪರೀಕ್ಷೆಯ ಭಯವನ್ನೂ ಹೋಗಲಾಡಿಸಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ.

ಮಾನದಂಡ ಸಡಿಲಗೊಳಿಸಲಿ: ‘ಪಬ್ಲಿಕ್‌ ಪರೀಕ್ಷೆ ಮತ್ತೆ ತರುತ್ತಿರುವುದು ಒಳ್ಳೆಯ ನಿರ್ಧಾರ. ಆದರೆ, ಇಷ್ಟೇ ಬರೆಯಬೇಕು, ಹೀಗೆಯೇ ಬರೆಯಬೇಕು ಎಂಬ ನಿರ್ಬಂಧಗಳನ್ನು ಹಾಕಿದಾಗ ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಮಾನದಂಡಗಳನ್ನು ಸ್ವಲ್ಪ ಸಡಿಲಗೊಳಿಸಬೇಕು. ಹಿಂದೆ ನಾವೂ ಪಬ್ಲಿಕ್‌ ಪರೀಕ್ಷೆ ಎದುರಿಸಿದ್ದೇವೆ. ಆಗ ಹೆದರಿಕೆ ಇರಲಿಲ್ಲ. ಈಗಲೂ ‘ಭಯರಹಿತ’ ಪಬ್ಲಿಕ್‌ ಪರೀಕ್ಷೆ ನಡೆಸಲಿ’ ಎನ್ನುತ್ತಾರೆ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಿ.ಇ. ರಂಗಸ್ವಾಮಿ.

ADVERTISEMENT

‘ದ್ವಿತೀಯ ಪಿಯು ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಹಳ ಒತ್ತಡದಲ್ಲಿ ಓದುತ್ತಾರೆ. ಪರೀಕ್ಷೆ ನಡೆದ ಒಂದು ತಿಂಗಳ ಬಳಿಕ ಅದೇ ಪ್ರಶ್ನೆ ಪತ್ರಿಕೆ ನೀಡಿದರೂ ಹಲವರು ಪಾಸಾಗದಂತಹ ಪರಿಸ್ಥಿತಿ ಇದೆ. ಪರೀಕ್ಷಾ ತಯಾರಿಗೆ ಓದುವ ಬದಲು ಜೀವನದ ತಯಾರಿಗೆ ಓದುವಂತಹ ವಾತಾವರಣ ನಿರ್ಮಾಣಗೊಳ್ಳಬೇಕು’ ಎಂಬುದು ಡಾ. ರಂಗಸ್ವಾಮಿ ಅವರ ಸಲಹೆ.

ಒತ್ತಡ ತರುವ ಅವೈಜ್ಞಾನಿಕ ನಿರ್ಧಾರ: ‘ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಪಬ್ಲಿಕ್‌ ಪರೀಕ್ಷೆ ಜಾರಿಗೊಳಿಸುವುದಾಗಿ ಪ್ರಕಟಿಸಬೇಕಾಗಿತ್ತು. ಶೈಕ್ಷಣಿಕ ವರ್ಷದ ನಡುವೆ ಪಬ್ಲಿಕ್‌ ಪರೀಕ್ಷೆ ಜಾರಿಗೆ ತರುತ್ತೇವೆ ಎಂದು ಹೇಳಿರುವುದು ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಮೇಲೆ ವಿಶಿಷ್ಟವಾದ ಒತ್ತಡ ತಂದಂತಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ತೀರ್ಮಾನವನ್ನು ಈ ವರ್ಷವೇ ತೆಗೆದುಕೊಳ್ಳಬೇಕು. ಆದರೆ, ನಡುವೆ ತೆಗೆದುಕೊಂಡಿರುವುದು ವೈಜ್ಞಾನಿಕ ತೀರ್ಮಾನ ಎನಿಸಿಕೊಳ್ಳುವುದಿಲ್ಲ’ ಎಂದು ಶಿಕ್ಷಣ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

‘7ನೇ ತರಗತಿವರೆಗೆ ಒಂದು ಹಂತ ಹಾಗೂ 8ರಿಂದ 10ನೇ ತರಗತಿವರೆಗೆ ಎರಡನೇ ಹಂತದ ಶಿಕ್ಷಣ ಕೊಡಲಾಗುತ್ತಿದೆ. 7ನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆ ನಡೆಸುವುದರಿಂದ ಮೊದಲ ಹಂತದಲ್ಲೇ ಮಕ್ಕಳು ಸಣ್ಣ ತಯಾರಿ ನಡೆಸಿದಂತಾಗುತ್ತದೆ. ಪಬ್ಲಿಕ್‌ ಪರೀಕ್ಷೆಯನ್ನು ಎದುರಿಸಬಹುದು ಎಂಬ ವಿಶ್ವಾಸ ಮೂಡುತ್ತದೆ. ಎಸ್ಸೆಸ್ಸೆಲ್ಸಿಯಲ್ಲಿ ಪಬ್ಲಿಕ್‌ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘7ನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆ ನಡೆಸುವುದರಿಂದ ಮಕ್ಕಳ ಕಲಿಕಾ ಮಟ್ಟ ಹೇಗಿದೆ ಎಂಬ ಬಗ್ಗೆ ರಾಜ್ಯ ಮಟ್ಟದಲ್ಲಿ ಅಳೆಯಲು ಸಾಧ್ಯವಾಗುತ್ತದೆ. ಕಲಿಕೆಯಲ್ಲಿನ ತಪ್ಪು–ಒಪ್ಪುಗಳನ್ನು ಎಸ್ಸೆಸ್ಸೆಲ್ಸಿಯಲ್ಲಿ ಸರಿ ಮಾಡಿಕೊಳ್ಳಬಹುದಾಗಿದೆ. ಶಿಕ್ಷಣ ಇಲಾಖೆಯು ಒಂದು ವರ್ಷ ಮೊದಲೇ ಈ ಬಗ್ಗೆ ತೀರ್ಮಾನಿಸಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಬ್ಲಿಕ್‌ ಪರೀಕ್ಷೆ ನಡೆಸುವುದು ಹೆಚ್ಚು ಸೂಕ್ತ ಮತ್ತು ವೈಜ್ಞಾನಿಕವಾಗಿರುತ್ತದೆ’ ಎಂಬುದು ಈಶ್ವರಪ್ಪ ಪ್ರತಿಪಾದಿಸಿದರು.

ಕಲಿಕಾ ಮಟ್ಟ ಹೆಚ್ಚಳ: ಈಗಿರುವ ಪರೀಕ್ಷಾ ಪದ್ಧತಿಯಿಂದಾಗಿ ಮಕ್ಕಳಲ್ಲಿನ ಕಲಿಕೆಯ ಗುಣಮಟ್ಟ ಕುಸಿಯುತ್ತಿದೆ. ತಾವು ಹೆಚ್ಚು ಓದಿ, ಸಾಧಿಸಬೇಕು ಎಂಬ ಬದ್ಧತೆಯೂ ಮಕ್ಕಳಲ್ಲಿ ಕಡಿಮೆಯಾಗಿದೆ. ತರಗತಿಯ ಪರೀಕ್ಷೆಯಲ್ಲಿ ಹೇಗೂ ಪಾಸಾಗುತ್ತೇವೆ ಎಂಬ ಮನೋಭಾವ ಬಂದಿದೆ. ಹೀಗಾಗಿ ಪಬ್ಲಿಕ್‌ ಪರೀಕ್ಷೆ ನಡೆಸುವುದು ಒಳ್ಳೆಯದು ಎಂದು ಸಿದ್ಧಗಂಗಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಜಸ್ಟಿನ್‌ ಡಿಸೋಜ ಅವರು ಸರ್ಕಾರದ ನಿಲುವನ್ನು ಬೆಂಬಲಿಸುತ್ತಾರೆ.

‘ಪಬ್ಲಿಕ್‌ ಪರೀಕ್ಷೆಯನ್ನು ಗಂಭೀರವಾಗಿ ನಡೆಸಬೇಕು. ಈ ವರ್ಷ ನಪಾಸು ಮಾಡುವುದಿಲ್ಲ; ಪ್ರಾಯೋಗಿಕವಾಗಿ ನಡೆಸುತ್ತೇವೆ ಎಂದು ಹೇಳಿರುವುದರಿಂದ ಇದರ ಗಂಭೀರತೆಯೇ ಹೋದಂತಾಗಿದೆ. ಈ ಹಂತದಲ್ಲೇ ನಪಾಸು ಮಾಡುವುದಿಲ್ಲ ಎಂದು ಹೇಳಬಾರದಿತ್ತು’ ಎಂಬುದು ಅವರ ಆಕ್ಷೇಪ.

‘ಎಲ್‌.ಕೆ.ಜಿಯಿಂದ 10ನೇ ತರಗತಿಗೆ ಹೋಗಿ ನೇರವಾಗಿ ಪಬ್ಲಿಕ್‌ ಪರೀಕ್ಷೆ ಎದುರಿಸುತ್ತಿರುವುದರಿಂದ ಹಲವು ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. 7ನೇ ತರಗತಿಗೆ ಪರೀಕ್ಷೆ ನಡೆಸುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವುದು ಸಲಭವಾಗಲಿದೆ’ ಎಂದು ಅವರು ಪ್ರತಿಪಾದಿಸಿದರು.

ಎಸ್ಸೆಸ್ಸೆಲ್ಸಿ ಒತ್ತಡ ನಿವಾರಣೆಗೆ ಅನುಕೂಲ

ಎಷ್ಟೋ ಪೋಷಕರು ಎಸ್ಸೆಸ್ಸೆಲ್ಸಿ ಅನುತ್ತೀರ್ಣಗೊಂಡ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಸರಿಯಾಗಿ ಓದುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಆರ್‌ಟಿಇ ಕಾಯ್ದೆ ಹಿನ್ನೆಲೆಯಲ್ಲಿ 9ನೇ ತರಗತಿವರೆಗೂ ಮಕ್ಕಳನ್ನು ಅನುತ್ತೀರ್ಣಗೊಳಿಸುತ್ತಿಲ್ಲ. ಎಷ್ಟೋ ಪೋಷಕರಿಗೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ಮಕ್ಕಳು ಪಾಸಾಗುತ್ತಿದ್ದಾರೆ ಎಂದುಕೊಂಡು ಅವರ ಕಲಿಕಾ ಮಟ್ಟದ ಬಗ್ಗೆ ವಿಚಾರ ಮಾಡುವುದಿಲ್ಲ. 10ನೇ ತರಗತಿಗೆ ಬಂದಾಗ ಮಕ್ಕಳು ಹಾಗೂ ಪೋಷಕರಲ್ಲಿ ಪಬ್ಲಿಕ್‌ ಪರೀಕ್ಷೆ ಬಗ್ಗೆ ಆತಂಕ ಶುರುವಾಗುತ್ತದೆ.

ಎಸ್ಸೆಸ್ಸೆಲ್ಸಿಗೆ ಬಂದ ಕೆಲವು ಮಕ್ಕಳ ಬುದ್ಧಿಮತ್ತತೆ ಬಹಳ ಕಡಿಮೆ ಇರುತ್ತದೆ. 7ನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆ ನಡೆಸುವುದರಿಂದ ಎಸ್ಸೆಸ್ಸೆಲ್ಸಿಯಲ್ಲಿ ಏಕಾಏಕಿ ಪಬ್ಲಿಕ್‌ ಪರೀಕ್ಷೆ ಬರೆಯುವಾಗ ಉಂಟಾಗುವ ಆತಂಕ ನಿವಾರಣೆಯಾಗುತ್ತದೆ. ಮಕ್ಕಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಪರೀಕ್ಷೆ ಬಗ್ಗೆ ಹೆಚ್ಚು ಗಾಂಭೀರ್ಯತೆ ಬರುತ್ತದೆ.

ಮೊದಲಿನಿಂದಲೇ ಮಾನಸಿಕ ಒತ್ತಡ ಎದುರಿಸುವುದನ್ನು ಕಲಿಸಿದರೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸುತ್ತಾರೆ. ಪಠ್ಯದಲ್ಲಿರುವ ವಿಷಯವನ್ನೇ ಈ ಪರೀಕ್ಷೆಯಲ್ಲೂ ಕೇಳುವುದಿಂದ ಪಶ್ನೆಗಳಲ್ಲಿ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ. ಹೀಗಾಗಿ ಮಕ್ಕಳು ಆತಂಕ ಪಡಬೇಕಾಗಿಲ್ಲ. ಓದಿನ ಬಗ್ಗೆ ಗಮನ ನೀಡದೇ ಇದ್ದರೂ ಪಾಸಾಗುತ್ತ ಬರುತ್ತಿರುವ ಮಕ್ಕಳಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಆಗಬಹುದು. ಇಂದು ಮೌಲಿಕವಾದ ಸಾಧನೆ ನಿರೀಕ್ಷಿಸಲಾಗುತ್ತಿದೆ. ಹೀಗಾಗಿ ಮೊದಲಿನಿಂದಲೇ ಓದುವುದನ್ನು ಅಭ್ಯಾಸ ಮಾಡಿಕೊಂಡರೆ ಮಕ್ಕಳಿಗೆ ಸಮಸ್ಯೆ ಆಗುವುದಿಲ್ಲ. ಈ ಎಲ್ಲಾ ದೃಷ್ಟಿಯಿಂದ ನೋಡಿದಾಗ ಪಬ್ಲಿಕ್‌ ಪರೀಕ್ಷೆ ನಡೆಸುವುದು ಯೋಗ್ಯವಾಗಿದೆ.

– ಡಾ. ಎಚ್‌.ಎನ್‌. ಆಶಾ, ಮಕ್ಕಳ ಮನೋರೋಗ ತಜ್ಞೆ, ಎಸ್‌.ಎಸ್‌. ಆಸ್ಪತ್ರೆ

ಮುಂದೆ ಬರುವ ದೊಡ್ಡ ಪರೀಕ್ಷೆಗಳಿಗೆ ಸಿದ್ಧರಾಗಲು ಮಕ್ಕಳನ್ನು ಈಗಿನಿಂದಲೇ ಒಗ್ಗಿಸಲು ಪಬ್ಲಿಕ್‌ ಪರೀಕ್ಷೆ ನಡೆಸುವುದು ಸೂಕ್ತವಾಗಿದೆ. ಪಬ್ಲಿಕ್‌ ಪರೀಕ್ಷೆ ನಡೆಸುವಾಗ ಫ್ಲೆಕ್ಸಿಬಲ್‌ ಅಪ್ರೋಚ್‌ ಇರಲಿ.

- ಡಾ.ಬಿ.ಇ. ರಂಗಸ್ವಾಮಿ, ಅಧ್ಯಕ್ಷ, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕ

ಶೈಕ್ಷಣಿಕ ವರ್ಷದ ನಡುವೆ ಪಬ್ಲಿಕ್‌ ಪರೀಕ್ಷೆ ತೀರ್ಮಾಣ ಕೈಗೊಂಡಿರುವುದು ಮಕ್ಕಳು, ಶಿಕ್ಷಕರಲ್ಲಿ ಮಾನಸಿಕ ಒತ್ತಡ ತರುತ್ತದೆ. ಇದರಿಂದ ಶೈಕ್ಷಣಿಕ ಪ್ರಗತಿ ಹಾಗೂ ಮಾನಸಿಕ ಪ್ರಗತಿಯೂ ಕುಂಠಿತಗೊಳ್ಳುತ್ತದೆ.

- ಡಾ. ಎಂ.ಜಿ. ಈಶ್ವರಪ್ಪ, ಶಿಕ್ಷಣ ತಜ್ಞ

ಜಿಲ್ಲಾ ಅಥವಾ ತಾಲ್ಲೂಕು ಮಟ್ಟದಲ್ಲಿ ಕೇಂದ್ರೀಕೃತ ಮೌಲ್ಯಮಾಪನ ಆಗಲೇಬೇಕು. ಈ ಪರೀಕ್ಷೆಯಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಅನುಕೂಲವಾಗಲಿದೆ.

- ಜಸ್ಟಿನ್‌ ಡಿಸೋಜ, ಮುಖ್ಯಾಧ್ಯಾಪಕಿ, ಸಿದ್ಧಗಂಗಾ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.