ADVERTISEMENT

ಸಿಇಟಿ: ಚಿನ್ಮಯ್‌ಗೆ 6ನೇ ರ‍್ಯಾಂಕ್‌

10ರ ರ‍್ಯಾಂಕಿಂಗ್‌ ಒಳಗೆ ಅಂಕ ಪಡೆದ ಜಿಲ್ಲೆಯ ಮೊದಲಿಗ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 15:32 IST
Last Updated 21 ಆಗಸ್ಟ್ 2020, 15:32 IST
ಚಿನ್ಮಯ್‌ ಎಸ್. ಭಾರದ್ವಾಜ್
ಚಿನ್ಮಯ್‌ ಎಸ್. ಭಾರದ್ವಾಜ್   

ದಾವಣಗೆರೆ:ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಸರ್‌ ಎಂ.ವಿ. ಕಾಲೇಜಿನ ವಿದ್ಯಾರ್ಥಿ ಚಿನ್ಮಯ್‌ ಎಸ್. ಭಾರದ್ವಾಜ್‌ ಬಿಎಸ್ಸಿ ಅಗ್ರಿಯಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್‌ ಪಡೆದಿದ್ದು, 10ರ ರ‍್ಯಾಂಕಿಂಗ್‌ ಒಳಗೆ ಅಂಕ ಪಡೆದ ಜಿಲ್ಲೆಯ ಮೊದಲಿಗನಾಗಿದ್ದಾನೆ. ‌

ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ಎಂಜಿನಿಯರಿಂಗ್‌ನಲ್ಲಿ 19ನೇ ರ‍್ಯಾಂಕ್‌ ಪಡೆದಿದ್ದಾಳೆ.

ADVERTISEMENT

ಜಿಲ್ಲೆಯ 16 ಕೇಂದ್ರಗಳಲ್ಲಿಪರೀಕ್ಷೆ ನಡೆದಿತ್ತು. ದಾವಣಗೆರೆ ನಗರದ 13, ಚನ್ನಗಿರಿ, ಹೊನ್ನಾಳಿ ಹಾಗೂ ಹರಿಹರದಲ್ಲಿ ತಲಾ ಒಂದು ಕೇಂದ್ರಗಳಲ್ಲಿ 6577 ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು.

‘ಕೊರೊನಾ ಸಂದರ್ಭದಲ್ಲೂ ಆನ್‌ಲೈನ್ ತರಗತಿ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತುಕೊಟ್ಟಿದ್ದೆವು. ಕಾಲೇಜಿನ ಶೈಕ್ಷಣಿಕ ವಾತಾವರಣ ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸರ್‌ ಎಂ.ವಿ. ಕಾಲೇಜಿನ ಕಾರ್ಯದರ್ಶಿ ಶ್ರೀಧರ್‌ ಎಸ್‌.ಜೆ. ಸಂತಸ ವ್ಯಕ್ತಪಡಿಸಿದರು.

ತರಳಬಾಳು ಜಗದ್ಗುರು ಸಂಯುಕ್ತ ಪಿಯು ಕಾಲೇಜು ಸಾಧನೆ

ತರಳಬಾಳು ಜಗದ್ಗುರು ಸಂಯುಕ್ತ ಪಿಯು ಕಾಲೇಜಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿ ದೀಪಕ್ ಎಸ್.ಬಿ. ಎಂಜಿನಿಯರಿಂಗ್‍ನಲ್ಲಿ ರಾಜ್ಯಕ್ಕೆ 1377 ರ‍್ಯಾಂಕ್, ಪಶು ವೈದ್ಯಕೀಯದಲ್ಲಿ 277 ಹಾಗೂ ಬಿಎಸ್ಸಿ ಅಗ್ರಿಯಲ್ಲಿ 424 ರ‍್ಯಾಂಕ್, ಹಾಗೂ ಬಿಫಾರ್ಮ್‌ನಲ್ಲಿ 462 ರ‍್ಯಾಂಕ್ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾನೆ.

ಕಾಲೇಜಿನ 4 ವಿದ್ಯಾರ್ಥಿಗಳು 5000ದೊಳಗೆ ರ‍್ಯಾಂಕ್‌ ಪಡೆದಿದ್ದಾರೆ. ಪದ್ಮ ಕೆ.ಎಸ್‌., ದರ್ಶನ್ ವಿ.‌, ಚಂದನಾ ಕೆ.ಎಸ್‌., 3000 ಹಾಗೂ ಪ್ರಣವ್‌ ವಿ. 4000 ದೊಳಗೆ ರ‍್ಯಾಂಕಿಂಗ್‌ ಪಡೆದಿದ್ದಾರೆ.17 ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಶ್ರೀಕುಮಾರ್‌ ತಿಳಿಸಿದ್ದಾರೆ.

ವೈದ್ಯನಾಗುವ ಕನಸು

ಸಿಇಟಿಯ ಬಿಎಸ್ಸಿ ಅಗ್ರಿಯಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್‌ ಪಡೆದವಿದ್ಯಾರ್ಥಿ ಚಿನ್ಮಯ್‌ ಎಸ್. ಭಾರದ್ವಾಜ್ ವೈದ್ಯನಾಗುವ ಕನಸು ಹೊಂದಿದ್ದಾನೆ.

ತಂದೆ ಯುಬಿಟಿಟಿ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀಧರ ಮೂರ್ತಿ, ತಾಯಿ ವಕೀಲರಾದ ಅನಿತಾ ಎಸ್‌.

‘ನೀಟ್‌ ಪರೀಕ್ಷೆ ಬರೆದು ವೈದ್ಯನಾಗಬೇಕು ಎಂದುಕೊಂಡಿದ್ದೇನೆ. ಅದಕ್ಕೆ ಅಭ್ಯಾಸ ಮಾಡುತ್ತಿದ್ದೇನೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಓದಲು ಸ್ವಲ್ಪ ತೊಂದರೆಯಾಯಿತು. ಆದರೂ ಪ್ರತಿದಿನ ಓದುತ್ತಿದ್ದೆ. ಕಾಲೇಜಿನಲ್ಲಿ ಆನ್‌ಲೈನ್‌ ತರಗತಿ, ಪರೀಕ್ಷೆ, ನೋಟ್ಸ್‌ ನೀಡಿದ್ದು ಸಹಕಾರಿಯಾಯಿತು’ ಎಂದುಚಿನ್ಮಯ್‌ ಸಂತಸ ಹಂಚಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.