ADVERTISEMENT

ದಾರಿ ತಪ್ಪಿಸುತ್ತಿರುವ ಪೊಲೀಸರು: ರೇಣುಕಾಚಾರ್ಯ ತಮ್ಮ ಎಂ.ಪಿ. ರಮೇಶ್‌ ಆರೋಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 20:09 IST
Last Updated 5 ನವೆಂಬರ್ 2022, 20:09 IST
   

ದಾವಣಗೆರೆ: ‘ನಾಲೆಯಲ್ಲಿ ಬಿದ್ದಿದ್ದ ಚಂದ್ರಶೇಖರ್‌ ಅವರ ಕಾರನ್ನು ಪೊಲೀಸರು ಪತ್ತೆ ಹಚ್ಚಿಲ್ಲ. ಊರ ಜನರು ಪತ್ತೆ ಮಾಡಿದ್ದಾರೆ. ಕಾರು ವೇಗವಾಗಿ ಬಂದು ಅಪಘಾತವಾಗಿದೆ ಎಂದು ಈಗ ಹೇಳುವ ಮೂಲಕ ಪೊಲೀಸರು ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಅವರ ತಮ್ಮ ಎಂ.ಪಿ. ರಮೇಶ್‌ ಆರೋಪಿಸಿದ್ದಾರೆ.

ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಪಿ. ರಮೇಶ್, ‘ಪೊಲೀಸರು ಶುದ್ಧ ಸುಳ್ಳು ಹೇಳುತ್ತಿದ್ದಾರೆ. ಚಂದ್ರಶೇಖರ್‌ ಮನೆಯಿಂದ ಹೋಗುವಾಗ ಒಳಉಡುಪು (ಚಡ್ಡಿ) ಇತ್ತು. ಆದರೆ, ಶವ ಸಂಸ್ಕಾರ ಮಾಡುವಾಗ ಒಳಉಡುಪು‌ ಇರಲಿಲ್ಲ. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. ಕಾರಿನ ಹಿಂಭಾಗದ ಇಂಡಿಕೇಟರ್ ಸಹ ಒಡೆದಿದೆ. ಕೈ ಕಟ್ಟಿದ ಸ್ಥಿತಿಯಲ್ಲಿತ್ತು’ ಎಂದು ದೂರಿದರು.

‘ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ ಚಂದ್ರು ಕೊಲೆ ನಡೆದಿರುವುದೂ ಅಷ್ಟೇ ಸತ್ಯ. ನನ್ನ ಸರ್ಕಾರದ ವಿರುದ್ಧ ನಾನೇ ಧ್ವನಿ ಎತ್ತುವುದು ಸರಿಯಲ್ಲ ಎಂದು ಇದುವರೆಗೂ ಸುಮ್ಮನಿದ್ದೆ. ಆದರೆ, ಹೊನ್ನಾಳಿಗೆ ಶುಕ್ರವಾರ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್ ಕುಮಾರ್ ಅವರು ಅತಿವೇಗದ ಅಪಘಾತದಿಂದ ಚಂದ್ರಶೇಖರ್‌ ಮೃತಪಟ್ಟಿದ್ದಾರೆ ಎಂದು ಅವಸರದ ಹೇಳಿಕೆ ನೀಡಿದ್ದಾರೆ. ಇದು ಅಪಘಾತದಿಂದ ಆದ ಸಾವಲ್ಲ. ಇದೊಂದು ಕೊಲೆ ಪ್ರಕರಣ’ ಎಂದು ರೇಣುಕಾಚಾರ್ಯ ಪ್ರತಿಪಾದಿಸಿದರು.

ADVERTISEMENT

ಪೊಲೀಸರಿಗೆ ತರಾಟೆ: ಶಾಸಕ ರೇಣುಕಾಚಾರ್ಯ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ಹೊನ್ನಾಳಿ ಠಾಣೆಗೆ ಹೋಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಅಪಘಾತಕ್ಕೀಡಾಗಿದ್ದ ಕಾರನ್ನು ಠಾಣೆಯ ಆವರಣದಲ್ಲಿ ಮುಚ್ಚಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕಾರಿನ ವಿಡಿಯೊ ಮಾಡಿಕೊಳ್ಳುವ ವಿಚಾರಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ನಾಳೆ ವರದಿ ಬರುವ ನಿರೀಕ್ಷೆ: ‘ಐದು ದಿನಗಳ ಕಾಲ ದೇಹ ನೀರಿನಲ್ಲಿ ಇದ್ದುದರಿಂದ ಸಾವಿನ ಕಾರಣವನ್ನು ಸುಲಭವಾಗಿ ಗುರುತಿಸುವುದು ಕಷ್ಟ. ಮರಣೋತ್ತರ ಪರೀಕ್ಷೆಯ ವರದಿಯು ಸೋಮವಾರ ಸಿಗಲಿದ್ದು, ಆ ಬಳಿಕವೇ ಸಾವಿನ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸ್‌ ಮೂಲಗಳು
ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.