ಚನ್ನಗಿರಿ: ಚನ್ನಗಿರಿ ತಾಲ್ಲೂಕನ್ನು ಅಡಿಕೆ ನಾಡು ಎಂದು ಕರೆಯಲಾಗುತ್ತದೆ. ಇಲ್ಲಿನ 70 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ವ್ಯಾಪಿಸಿದೆ. ಈ ನಡುವೆ, ಅಡಿಕೆ ಹೊರತುಪಡಿಸಿ ಸಮಗ್ರಕೃಷಿ ಪರಿಕಲ್ಪನೆಯ ಮೂಲಕ ರೈತರು ಅಧಿಕ ಲಾಭ ಗಳಿಸಬಹುದು ಎಂಬುದಕ್ಕೆ ತಾಲ್ಲೂಕಿನ ನೀತಿಗೆರೆ ಗ್ರಾಮದ ನಿವೃತ್ತ ವಲಯ ಅರಣ್ಯಾಧಿಕಾರಿ ವೀರೇಶ್ ನಾಯ್ಕ ನಿದರ್ಶನವಾಗಿ ಕಾಣುತ್ತಾರೆ.
ತಮ್ಮ 8 ಎಕರೆ ಕೃಷಿ ಪ್ರದೇಶದಲ್ಲಿ ಸಮಗ್ರ ಕೃಷಿ ಮಾಡುತ್ತಿರುವ ಅವರು ರೈತರಿಗೆ ಮಾದರಿಯಾಗಿದ್ದಾರೆ. ಮೀನು, ಕೋಳಿ, ಕುರಿ, ಮೊಲ, ಜೇನು ಸಾಕಾಣಿಕೆ, ಹೈನುಗಾರಿಕೆ ಜತೆಗೆ ಸೀತಾಫಲ, ಮಾವು, ಚರ್ರಿ ಮುಂತಾದ ಹಲವು ಬಗೆಯ ಹಣ್ಣಿನ ಗಿಡಗಳನ್ನು ನೆಟ್ಟಿದ್ದು, ಮುಂದಿನ ದಿನಗಳಲ್ಲಿ ಅವು ಹೆಚ್ಚು ಆದಾಯ ತಂದು ಕೊಡುವ ವಿಶ್ವಾಸದಲ್ಲಿ ಅವರಿದ್ದಾರೆ. ಬಹುವಿಧದ ಕೃಷಿಯಿಂದ ಗ್ರಾಮದ 50ಕ್ಕೂ ಹೆಚ್ಚು ಕೃಷಿ ಕಾರ್ಮಿಕರಿಗೆ ಕೆಲಸ ನೀಡಿ ಯುವಕರಿಗೆ ಆಸರೆಯಾದ್ದಾರೆ.
ವೀರೇಶ್ ನಾಯ್ಕ ಅವರ ಜಮೀನಿನಲ್ಲಿ ಈಗ ಹೆಚ್ಚು ಸುದ್ದಿ ಮಾಡುತ್ತಿರುವುದು ಬಣ್ಣಬಣ್ಣದ ಕ್ಯಾಪ್ಸಿಕಂ. ಅವರು 1 ಎಕರೆಯಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಕ್ಯಾಪ್ಸಿಕಂ ಬೆಳೆ ಬೆಳೆದಿದ್ದಾರೆ. ಇದಕ್ಕಾಗಿ ಸುಸಜ್ಜಿತವಾದ ಪಾಲಿಹೌಸ್ ನಿರ್ಮಿಸಿ, ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದಾರೆ. ಕ್ಯಾಪ್ಸಿಕಂ ಕಟಾವಿಗೆ ಬಂದಿದ್ದು, ಪ್ರತಿವಾರ 2 ರಿಂದ 3 ಕ್ವಿಂಟಲ್ ಫಸಲನ್ನು ಚೆನ್ನೈ ಮೂಲಕ ಉತ್ತರ ಕೊರಿಯಾ, ಅಮೆರಿಕ ಮತ್ತು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದಾರೆ. ₹200ರಂತೆ ಪ್ರತಿ ಕೆ.ಜಿ. ಕ್ಯಾಪ್ಸಿಕಂ ಮಾರಾಟ ಮಾಡಲಾಗುತ್ತಿದೆ.
ಕ್ಯಾಪ್ಸಿಕಂ ಬೆಳೆ ಬೆಳೆಯಲು ಈವರೆಗೆ ₹4.5 ಲಕ್ಷ ವೆಚ್ಚ ಮಾಡಿದ್ದು, ಅದು ಈಗಾಗಲೇ ₹10 ಲಕ್ಷ ಆದಾಯ ತಂದುಕೊಟ್ಟಿದೆ. ಬೆಳೆಯಿಂದ ಒಟ್ಟಾರೆ ₹30 ಲಕ್ಷದಿಂದ ₹35 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ವೀರೇಶ್ ನಾಯ್ಕ.
ಮೀನು ಸಾಕಾಣಿಕೆ ಮಾಡಲು 1 ಎಕರೆ ಪ್ರದೇಶದಲ್ಲಿ ಒಂದು ಮಿನಿ ಕೆರೆಯನ್ನು ನಿರ್ಮಿಸಿದ್ದಾರೆ. ಅದಕ್ಕೆ ಸೂಳೆಕೆರೆಯಿಂದ ನೀರು ಹರಿದು ಬರುವಂತೆ ಮಾಡಲು ಪೈಪ್‌ಲೈನ್ ಅಳವಡಿಸಲಾಗಿದೆ. ಹಾಗೆಯೇ ಮಳೆಯ ನೀರು ಕೂಡಾ ಕೆರೆಗೆ ಹರಿದುಬರುವಂತೆ ವಿನ್ಯಾಸ ಮಾಡಲಾಗಿದೆ. ಕೆರೆಗೆ ಗೌರಿ, ಕಾಟ್ಲಾ ತಳಿಯ 10,000 ಮೀನು ಮರಿಗಳನ್ನು ಬಿಡಲಾಗಿದೆ.
ವೀರೇಶ್ ಅವರು ತಮ್ಮ ಸಮಗ್ರ ಕೃಷಿ ಪದ್ಧತಿಯಲ್ಲಿ ಮಳೆ ನೀರು ಸಂಗ್ರಹಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ. ಮಳೆಯ ನೀರನ್ನು ಸಂಗ್ರಹಿಸಲು 80x80 ಅಳತೆಯ ತೊಟ್ಟಿ ನಿರ್ಮಿಸಲಾಗಿದೆ. ಇಲ್ಲಿ ಸಂಗ್ರಹವಾಗುವ ಮಳೆಯ ನೀರನ್ನು ಶುದ್ಧೀಕರಿಸಿ, ಬೆಳೆಗಳಿಗೆ ಹರಿಸಲು ಮೋಟಾರ್ ಅಳವಡಿಸಲಾಗಿದೆ. ರೈತರು ಆರ್ಥಿಕವಾಗಿ ಸಬಲರಾಗಲು ಹೆಚ್ಚಾಗಿ ಅಡಿಕೆ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚಿನ ಆದಾಯ ತಂದುಕೊಡುವ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಮಾಡಲು ರೈತರು ಮುಂದಾಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.