ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಅತ್ಯಂತ ಶ್ರದ್ಧಾ, ಭಕ್ತಿಯಿಂದ ಶುಕ್ರವಾರ ಗೌರಿ ಹಬ್ಬ ಆಚರಿಸಲಾಯಿತು.
ಬೆಳಿಗ್ಗೆಯೇ ಮನೆಗಳಲ್ಲಿ ಮಹಿಳೆಯರು ಮಡಿ ಬಟ್ಟೆ ಧರಿಸಿ ಗೌರಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಹಬ್ಬದ ದಿನ ಪೂಜೆಯ ನಂತರ ತಟ್ಟೆ ಅಥವಾ ಬಿದಿರಿನ ಮೊರಗಳಲ್ಲಿ ಬಾಗಿನ ಸಲ್ಲಿಸುವುದು ಸಂಪ್ರದಾಯ. ತಟ್ಟೆ ಅಥವಾ ಮೊರಗಳಿಗೆ ಅರಿಶಿನ, ಕುಂಕುಮ, ಬಾಚಣಿಗೆ, ಕನ್ನಡಿ, ಕಣ್ಣಕಪ್ಪು ಹಾಗೂ ಎಲ್ಲ ರೀತಿಯ ತರಕಾರಿ, ಹಣ್ಣು ಹಂಪಲುಗಳು, ರವಿಕೆ ಅಥವಾ ಸೀರೆ, ಕರ್ಜಿಕಾಯಿ ಮುಂತಾದವನ್ನು ಇಟ್ಟು ಮುತ್ತೈದೆಯರಿಗೆ ಬಾಗಿನ ಸಲ್ಲಿಸಿ, ಆಶೀರ್ವಾದ ಪಡೆದುಕೊಳ್ಳುತ್ತಾರೆ.
ನಂತರ ಮನೆಯಲ್ಲಿ ಎಲ್ಲರೂ ಕುಳಿತು ಭಕ್ಷ್ಯ ಭೋಜನ ಸವಿದರು. ಬಾಲಕಿಯರು ಕೂಡಾ ಕಿರು ಬಾಗಿನ ನೀಡಿ ಹಿರಿಯರ ಆಶೀರ್ವಾದ ಪಡೆದರು. ಹಬ್ಬದ ಅಂಗವಾಗಿ ಹೂವು ಹಣ್ಣುಗಳ ಬೆಲೆ ಗಗನಕ್ಕೇರಿದರೂ ಜನ ಅನಿವಾರ್ಯವಾಗಿ ಇವುಗಳನ್ನು ಖರೀದಿಸಿ ಹಬ್ಬ ಆಚರಿಸಿದರು. ಈ ಬಾರಿ ಮುಂಗಾರು ಹಂಗಾಮಿನ ಮಳೆ ಉತ್ತಮವಾಗಿರುವುದರಿಂದ ಮನೆಗಳಲ್ಲಿ ಹಬ್ಬದ ಸಡಗರ ಹೆಚ್ಚಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.