ADVERTISEMENT

ಚನ್ನಗಿರಿ: ಮುಗಿಯುತ್ತಿಲ್ಲ ಕ್ರೀಡಾಂಗಣ ಕಾಮಗಾರಿ

ಎಚ್.ವಿ. ನಟರಾಜ್‌
Published 17 ಜೂನ್ 2025, 6:26 IST
Last Updated 17 ಜೂನ್ 2025, 6:26 IST
ಚನ್ನಗಿರಿ ಪಟ್ಟಣದಲ್ಲಿ 3 ವರ್ಷಗಳಿಂದ ನಿರ್ಮಾಣಗೊಳ್ಳುತ್ತಿರುವ ಒಳಾಂಗಣ ಕ್ರೀಡಾಂಗಣ ಕಟ್ಟಡ 
ಚನ್ನಗಿರಿ ಪಟ್ಟಣದಲ್ಲಿ 3 ವರ್ಷಗಳಿಂದ ನಿರ್ಮಾಣಗೊಳ್ಳುತ್ತಿರುವ ಒಳಾಂಗಣ ಕ್ರೀಡಾಂಗಣ ಕಟ್ಟಡ    

ಚನ್ನಗಿರಿ: ತಾಲ್ಲೂಕಿನ ಕ್ರೀಡಾಪಟುಗಳ ಅನುಕೂಲಕ್ಕಾಗಿ 2022– 23ರಲ್ಲಿ ಆರಂಭಗೊಂಡ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ 3 ವರ್ಷಗಳಾದರೂ ಮುಕ್ತಾಯಗೊಂಡಿಲ್ಲ. ಇದರಿಂದ ಕ್ರೀಡಾಪಟುಗಳ ಉತ್ಸಾಹಕ್ಕೆ ನೀರು ಎರಚಿದಂತಾಗಿದೆ.

ತಾಲ್ಲೂಕು ಕೇಂದ್ರವಾದ ಚನ್ನಗಿರಿ ಪಟ್ಟಣದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ಇಲ್ಲದ್ದರಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವಧಿಯಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕಾಗಿ ₹ 3 ಕೋಟಿ ಅನುದಾನದ ಪೈಕಿ ಮೊದಲ ಹಂತದಲ್ಲಿ ₹ 2 ಕೋಟಿ ಅನುದಾನ ಬಿಡುಗಡೆಯಾಗಿತ್ತು.

ಕ್ರೀಡಾಂಗಣ ನಿರ್ಮಾಣದ ಗುತ್ತಿಗೆಯನ್ನು ನಿರ್ಮಿತಿ ಕೇಂದ್ರ ಪಡೆದುಕೊಂಡು ಮೊದಲ ಹಂತದಲ್ಲಿ ಬಿಡುಗಡೆಯಾದ ₹ 2 ಕೋಟಿ ಅನುದಾನದಲ್ಲಿ ಕಟ್ಟಡ ನಿರ್ಮಿಸಿತ್ತು. ನಂತರ ಅಗತ್ಯ ಅನುದಾನ ಬಿಡುಗಡೆ ಆಗದ್ದರಿಂದ ಒಂದು ವರ್ಷ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ 3 ವರ್ಷಗಳ ನಂತರ ಬಾಕಿ ಇರುವ ₹ 1 ಕೋಟಿ ಅನುದಾನ 2024– 25ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದು, ಉಳಿದ ಕಾಮಗಾರಿ ಆರಂಭವಾಗಿದೆ.

ADVERTISEMENT

‘ನಮ್ಮ ತಾಲ್ಲೂಕು ಕ್ರೀಡೆಗಳಿಗೆ ಹೆಸರುವಾಸಿ. ವಾಲಿಬಾಲ್, ಕೊಕ್ಕೊ, ಬಾಡಿ ಬಿಲ್ಡಿಂಗ್, ಕಬಡ್ಡಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿದ್ದಾರೆ. ಸ್ಥಳೀಯ ಕ್ರೀಡಾಪಟುಗಳಿಗೆ ಲಭಿಸಬೇಕಿದ್ದ ಕ್ರೀಡಾಂಗಣ ಸಿಕ್ಕಿಲ್ಲ. ಇದರಿಂದ ಯುವಜನತೆಗೆ ಭ್ರಮನಿರಸನ ಆಗಿದೆ’ ಎಂದು ಹಿರಿಯ ಕ್ರೀಡಾಪಟು ಸಿ.ಆರ್. ಅಣ್ಣಪ್ಪ ಬೇಸರ ವ್ಯಕ್ತಪಡಿಸಿದರು.

‘ಕ್ರೀಡಾ ತರಬೇತಿಗೆ ದಾವಣಗೆರೆ, ಶಿವಮೊಗ್ಗ ನಗರಗಳಿಗೆ ಹೋಗಬೇಕು. ಶೀಘ್ರವೇ ಕ್ರೀಡಾಂಗಣವನ್ನು ತರಬೇತಿಗೆ ನೀಡಲು ಮುಂದಾಗಬೇಕು’ ಎಂಬುದು ಹಿರಿಯ ಕ್ರೀಡಾಪಟು ಅಪ್ರೋಜ್ ಖಾನ್ ಆಗ್ರಹ.

ಎರಡು ತಿಂಗಳಲ್ಲಿ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ನಂತರ ಕ್ರೀಡಾಂಗಣದೊಳಗೆ ವಿವಿಧ ಕ್ರೀಡೆಗಳ ಕೋರ್ಟ್‌ಗಳನ್ನು ನಿರ್ಮಿಸಲಾಗುವುದು. ಕ್ರೀಡಾ ಪರಿಕರಗಳಿಗೆ ₹ 1.50 ಕೋಟಿ ಅನುದಾನ ಬಿಡುಗಡೆಗೆ ಈಗಾಗಲೇ ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರ ಅನುದಾನ ಬಿಡುಗಡೆಯಾಗಲಿದ್ದು, ಉಳಿದ ಕಾಮಗಾರಿಯನ್ನು ಮುಕ್ತಾಯಗೊಳಿಸಿ ಕ್ರೀಡಾಂಗಣ ಲೋಕಾರ್ಪಣೆ ಮಾಡಲಾಗುವುದು ಎಂದು ತಾಲ್ಲೂಕು ಕ್ರೀಡಾಧಿಕಾರಿ ಜೆ. ರಾಮಲಿಂಗಪ್ಪ ತಿಳಿಸಿದರು.

ಬಣ್ಣ ಬಳಿಯುವುದೂ ಸೇರಿ ಎರಡು ತಿಂಗಳೊಳಗೆ ಕ್ರೀಡಾಂಗಣದ ಮಿಕ್ಕ ಕಾಮಗಾರಿ ಮುಕ್ತಾಯಗೊಳಿಸಿ ಕ್ರೀಡಾ ಇಲಾಖೆಗೆ ಕಟ್ಟಡ ಹಸ್ತಾಂತರಿಸಲಾಗುವುದು
ಗಿರೀಶ್ ನಿರ್ಮಿತಿ ಕೇಂದ್ರದ ಎಇಇ ಚನ್ನಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.