
ಚನ್ನಗಿರಿ: ‘ಆಧುನಿಕತೆಯ ಭರಾಟೆಯಲ್ಲಿ ಜನರು ಭಕ್ತಿ, ಧ್ಯಾನಗಳಿಂದ ದೂರವಾಗುತ್ತಿದ್ದಾರೆ. ಪಾದಯಾತ್ರೆಯಿಂದ ಮನಸ್ಸಿನ ಜತೆಗೆ ಶರೀರವೂ ಸುಸ್ಥಿತಿಗೆ ಬರುತ್ತದೆ’ ಎಂದು ಕೇದಾರಲಿಂಗ ಹಿರೇಮಠದ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಹಿರೇಮಠದಲ್ಲಿ ಶನಿವಾರ ಸಂಜೆ ನಡೆದ 27ನೇ ವರ್ಷದ ಕೊಟ್ಟೂರು ಬಸವೇಶ್ವರ ಪಾದಯಾತ್ರಿಗಳ ಬೀಳ್ಕೊಡುಗೆ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.
‘ಆಧ್ಮಾತ್ಮಿಕ ಚಿಂತನೆಯ ಕಡೆಗೆ ಸಾಗಲು, ಸತ್ಕಾರ್ಯಗಳನ್ನು ಮಾಡಲು ಪಾದಯಾತ್ರೆ ಅಗತ್ಯ. ಈ ಅವಧಿಯಲ್ಲಿ ನಮ್ಮ ಪಂಚೇಂದ್ರಿಯಗಳ ಮೇಲೆ ನಿಗ್ರಹ ಸಾಧ್ಯವಾಗುತ್ತದೆ. ಪಾದಯಾತ್ರೆಯ ವೇಳೆ ಎದುರಾಗುವ ಗ್ರಾಮಗಳಲ್ಲಿ ದಾಸೋಹ ಮಾಡುವ ಮೂಲಕ ಪ್ರೀತಿ, ವಿಶ್ವಾಸ, ಸಂಬಂಧಗಳ ಬೆಸುಗೆ ಮೂಡಿಸುತ್ತದೆ’ ಎಂದರು.
‘ಸಾಮಾಜಿಕ ಹಾಗೂ ಧರ್ಮ ಜಾಗೃತಿ ಮಾಡಿದ್ದ, ಎಲ್ಲ ಧರ್ಮದವವರ ಪ್ರೀತಿ ಹೊಂದಿದ್ದ ಪಂಚಗಣಾಧೀಶರಲ್ಲಿ ಕೊಟ್ಟೂರೇಶ್ವರರು ಒಬ್ಬರು. ಸಾಮಾನ್ಯ ವ್ಯಕ್ತಿಯಾಗಿ ಪವಾಡಗಳ ಮೂಲಕ ದೈವತ್ವಕ್ಕೆ ಏರಿದರು’ ಎಂದು ಶಿಕ್ಷಕ ಎಂ.ಬಿ. ನಾಗರಾಜ್ ಕಾಕನೂರು ಹೇಳಿದರು.
ಪಾದಯಾತ್ರೆ ಸಮಿತಿ ಅಧ್ಯಕ್ಷ ಬಸವರಾಜ್ ಕೋರಿ, ಜ್ಯೋತಿ ಕೋರಿ, ಕಿರಣ್ ಕೋರಿ, ದೀಪಕ್, ಮಹಾಂತೇಶ್ ಶಾಸ್ತ್ರಿ, ಜಿ.ಎಸ್. ನೀಲಕಂಠ ಶಾಸ್ತ್ರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.