ಚನ್ನಗಿರಿ: ಪಟ್ಟಣದಲ್ಲಿ ಎರಡು ವರ್ಷಗಳ ಹಿಂದೆ ಸುಸಜ್ಜಿತವಾದ ಸಂತೆ ಮಾರುಕಟ್ಟೆ ನಿರ್ಮಿಸಿದ್ದರೂ ವ್ಯಾಪಾರಿಗಳು ಅದನ್ನು ಬಳಸದೇ ರಸ್ತೆ ಬದಿಯಲ್ಲಿಯೇ ತರಕಾರಿ, ದಿನಸಿ ಮುಂತಾದ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದು, ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದೆ.
ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಜನರು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಅನೇಕ ವರ್ಷಗಳಿಂದ ಪ್ರತಿ ಶುಕ್ರವಾರ ಪಟ್ಟಣದಲ್ಲಿ ವಾರದ ಸಂತೆ ನಡೆಯುತ್ತದೆ. ತಾಲ್ಲೂಕಿನಲ್ಲಿ ಈ ಸಂತೆಯೇ ಅತ್ಯಂತ ದೊಡ್ಡದು ಎಂಬ ಪ್ರತೀತಿಯೂ ಇದೆ. ಪ್ರತಿ ವಾರ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಸಾವಿರಾರು ಜನರೂ ಸೇರಿದಂತೆ ಸಂತೆಗೆ ಇಲ್ಲಿಗೇ ಬರುತ್ತಾರೆ. ಇಕ್ಕಟ್ಟಿನ ಸ್ಥಳದಲ್ಲಿ ಸಂತೆ ನಡೆಯುತ್ತಿರುವುದರಿಂದ ಜನರಿಗೆ ಕಿರಿಕಿರಿಯಾಗುತ್ತಿದೆ. ಜನರು ಓಡಾಡುವ ರಸ್ತೆ ಬದಿಯಲ್ಲಿಯೇ ವ್ಯಾಪಾರಿಗಳು ಗುಡಾರ ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಸುವುದರಿಂದ ಗ್ರಾಹಕರು ರಸ್ತೆಯಲ್ಲಿ ನಿಂತುಕೊಂಡೇ ಅಗತ್ಯ ವಸ್ತುಗಳನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.
ಇಂತಹ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ಶಾಸಕರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರ ಪ್ರಯತ್ನದಿಂದ 2021ರಲ್ಲಿ ಎಪಿಎಂಸಿಯಿಂದ ₹ 2.50 ಕೋಟಿ ಅನುದಾನ ಬಿಡುಗಡೆ ಮಾಡಿಸಿ 160 ವ್ಯಾಪಾರಿಗಳು, ವಿವಿಧ ಪ್ರಕಾರಗಳ ಅಂಗಡಿ ಇಟ್ಟುಕೊಳ್ಳಲು ಅನುಕೂಲ ಆಗುವಂತಹ ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಿಸಲಾಗಿತ್ತು. ಸಂತೆ ಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ದ್ವಿಚಕ್ರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಯಂತಹ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.
ಆದರೂ ವಿವಿಧ ಕಾರಣಗಳಿಗಾಗಿ ಸುಸಜ್ಜಿತ ಮಾರುಕಟ್ಟೆ ಸ್ಥಳದಲ್ಲಿ ಅಂಗಡಿ ಇಡಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ವ್ಯಾಪಾರಿಗಳ ಮನವೊಲಿಸುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ಹಾಗಾಗಿ ಸುಸಜ್ಜಿತ ಸಂತೆ ಮಾರುಕಟ್ಟೆ ಸದುಪಯೋಗವಾಗದೇ ಹಾಳು ಬಿದ್ದಿದೆ ಎಂದು ಗ್ರಾಹಕರು ದೂರುತ್ತಾರೆ.
‘ಪ್ರತಿ ದಿನ ಸಂಜೆಯಾದರೆ ಮಾರುಕಟ್ಟೆ ಸ್ಥಳದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಕಿಡಿಗೇಡಿಗಳು ಮದ್ಯಪಾನ ಮಾಡಲು ಉಪಯೋಗಿಸುತ್ತಾರೆ. ಇನ್ನು ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ಸಂತೆ ಮಾಡುವುದು ತುಂಬಾ ಪ್ರಯಾಸವಾಗಿದೆ. ಪುರಸಭೆ ಅಧಿಕಾರಿಗಳು ಮಾರುಕಟ್ಟೆ ಸ್ಥಳದಲ್ಲೇ ಸಂತೆ ನಡೆಯುವಂತೆ ಮಾಡಿ ಗ್ರಾಹಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು’ ಎನ್ನುತ್ತಾರೆ ಗ್ರಾಹಕರಾದ ಮಂಜಮ್ಮ, ಗಿರಿಜಮ್ಮ.
ಸದಾ ಕತ್ತಲು; ಇಕ್ಕಟ್ಟು ಜಾಗ
ಸಂತೆ ಮಾರುಕಟ್ಟೆ ಸ್ಥಳದಲ್ಲಿ ವ್ಯಾಪಾರಿಗಳಿಗೆ ಅಂಗಡಿ ಇಟ್ಟುಕೊಳ್ಳಲು ಜಾಗ ಕಡಿಮೆಯಾಗುತ್ತದೆ. ಅಲ್ಲದೇ ಈ ಸ್ಥಳದಲ್ಲಿ ಸದಾ ಕತ್ತಲು ಇರುವುದರಿಂದ ವ್ಯಾಪಾರ ವಹಿವಾಟು ನಡೆಸಲು ತೊಂದರೆಯಾಗುತ್ತಿದೆ. ಹಾಗಾಗಿ ಮಾರುಕಟ್ಟೆ ಸ್ಥಳದಲ್ಲಿ ವ್ಯಾಪಾರ ಮಾಡಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆಯನ್ನು ಪುರಸಭೆಯವರು ಬಗೆಹರಿಸಿದರೆ ಮಾರುಕಟ್ಟೆ ಸ್ಥಳದಲ್ಲೇ ವ್ಯಾಪಾರ ಮಾಡಲು ಸಿದ್ಧರಿದ್ದೇವೆ.
– ಮನ್ಸೂರ್ ಬೇಗ್ ತರಕಾರಿ ವ್ಯಾಪಾರಿ
ಬೆಳಕಿನ ವ್ಯವಸ್ಥಗೆ ಪ್ರಸ್ತಾವ
ಸಂತೆ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರೂ ವ್ಯಾಪಾರಸ್ಥರು ಜಾಗದ ಕೊರತೆ ಎಂದು ಹೇಳುತ್ತಾರೆ. ಬೆಳಕು ಸಾಕಾಗುವುದಿಲ್ಲ ಎಂಬ ಕಾರಣದಿಂದ ರಸ್ತೆ ಬದಿಯಲ್ಲಿಯೇ ಅಂಗಡಿ ಇಟ್ಟಿರುತ್ತಾರೆ. ವರ್ಷದಿಂದ ವ್ಯಾಪಾರಿಗಳ ಮನವೊಲಿಸಲು ಪ್ರಯತ್ನಪಟ್ಟರೂ ಸಫಲವಾಗುತ್ತಿಲ್ಲ. ಬೆಳಕಿನ ವ್ಯವಸ್ಥೆ ಕಲ್ಪಿಸಲು ಅಗತ್ಯ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಸ್ಥಳದಲ್ಲೇ ಸಂತೆ ನಡೆಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
– ಕೃಷ್ಣ ಡಿ. ಕಟ್ಟಿಮನಿ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.