ಚನ್ನಗಿರಿ: ಅತ್ಯುತ್ತಮ ಸಹಕಾರ ಸಂಘ ಎಂಬ ಹೆಗ್ಗಳಿಕೆ ಪಡೆದಿರುವ ತುಮ್ಕೋಸ್ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 89.30ರಷ್ಟು ಮತದಾನವಾಗಿದೆ.
ಪಟ್ಟಣದ ಹೊರ ವಲಯದ ಭದ್ರಾವತಿ ರಸ್ತೆಯ ತರಳಬಾಳು ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಶಾಂತಿಯುತವಾಗಿ ನಡೆಯಿತು.
ಬೆಳಿಗ್ಗೆ 9 ಗಂಟೆಯಿಂದಲೇ ಮತದಾರರು ತಮ್ಮ ವಾಹನಗಳಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಭದ್ರಾವತಿ ರಸ್ತೆಯುದ್ದಕ್ಕೂ ಎಲ್ಲಿ ನೋಡಿದರೂ ಜನರು ಹಾಗೂ ವಾಹನಗಳು ನಿಂತಿರುವ ದೃಶ್ಯ ಕಂಡು ಬಂದಿತು.
ಒಟ್ಟು 15 ಸ್ಥಾನಗಳಿಗೆ 31 ಸ್ಪರ್ಧಿಗಳು ಕಣದಲ್ಲಿದ್ದು, 54 ಬೂತ್‌ಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 13,562 ಮತದಾರ ಪೈಕಿ 12,111 ಮತದಾರರು ಹಕ್ಕು ಚಲಾಯಿಸಿದರು.
ಮೊದಲ ಮತಪಟ್ಟಿಯ ಪ್ರಕಾರ, 9,420 ಜನರು ಮತದಾನದ ಹಕ್ಕು ಹೊಂದಿದ್ದರು. ತುಮ್ಕೋಸ್ ಗುರುತಿನ ಚೀಟಿ ಹೊಂದಿರುವ ಎಲ್ಲ ಸದಸ್ಯರಿಗೂ ಮತದಾನ ಮಾಡುವ ಹಕ್ಕು ನೀಡುವಂತೆ ಕೋರಿ ಎರಡೂ ಬಣದವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶದ ಮೇರೆಗೆ ಮತ್ತೆ 4,142 ಜನರಿಗೆ ಮತದಾನದ ಹಕ್ಕು ನೀಡಲಾಗಿತ್ತು.
ಎಎಸ್‌ಪಿ, ಇಬ್ಬರು ಡಿವೈಎಸ್‌ಪಿ, ನಾಲ್ವರು ಇನ್‌ಸ್ಪೆಕ್ಟರ್, 9 ಪಿಎಸ್ಐ, 17 ಎಎಸ್‌ಐ, 145 ಕಾನ್‌ಸ್ಟೆಬಲ್, ಒಂದು ಕೆಎಸ್ಆರ್‌ಪಿ ತುಕಡಿ, 2 ಡಿಎಆರ್ ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. 90ಕ್ಕಿಂತ ಹೆಚ್ಚು ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಹೈಕೋರ್ಟ್ ಆದೇಶದ ಮೇರೆಗೆ ಮತದಾನ ಮುಕ್ತಾಯಗೊಂಡ ನಂತರ ಮತ ಎಣಿಕೆ ಕಾರ್ಯ ನಡೆಸಿ ಫಲಿತಾಂಶ ಪ್ರಕಟಿಸುತ್ತಿಲ್ಲಮಂಜುಳಾ ಚುನಾವಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.