ADVERTISEMENT

ಚಿಕ್ಕಗಂಗೂರು ಸರ್ಕಾರಿ ಪ್ರೌಢಶಾಲೆಗೆ ಹೈಟೆಕ್ ಸ್ಪರ್ಶ

ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರ; ವಿವಿಧ ಸೌಲಭ್ಯ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 7:07 IST
Last Updated 19 ಡಿಸೆಂಬರ್ 2025, 7:07 IST
ಚನ್ನಗಿರಿ ತಾಲ್ಲೂಕು ಚಿಕ್ಕಗಂಗೂರು ಗ್ರಾಮದ 53 ವಸಂತಗಳನ್ನುಪೂರೈಸಿರುವ ಸರ್ಕಾರಿ ಪ್ರೌಢಶಾಲೆ ಸಮುದಾಯ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಹೈಟೆಕ್ ಶಾಲೆಯಾಗಿ ಪರಿವರ್ತನೆಯಾಗಿರುವುದು.
ಚನ್ನಗಿರಿ ತಾಲ್ಲೂಕು ಚಿಕ್ಕಗಂಗೂರು ಗ್ರಾಮದ 53 ವಸಂತಗಳನ್ನುಪೂರೈಸಿರುವ ಸರ್ಕಾರಿ ಪ್ರೌಢಶಾಲೆ ಸಮುದಾಯ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಹೈಟೆಕ್ ಶಾಲೆಯಾಗಿ ಪರಿವರ್ತನೆಯಾಗಿರುವುದು.   

ಚಿಕ್ಕಗಂಗೂರು (ಚನ್ನಗಿರಿ): 53 ವಸಂತಗಳನ್ನು ಪೂರೈಸಿದ ಚಿಕ್ಕಗಂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಸಮುದಾಯದ ಸಹಭಾಗಿತ್ವ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಹೈಟೆಕ್ ಶಾಲೆಯಾಗಿ ಪರಿವರ್ತನೆಗೊಂಡಿದೆ.

ಸರ್ಕಾರದ ಅನುದಾನದಿಂದಲೇ ಶಾಲೆ ಅಭಿವೃದ್ಧಿಗೊಳ್ಳಬೇಕು ಎನ್ನುವುದು ಇಂದಿನ ದಿನಮಾನಗಳಲ್ಲಿ ಸಾಧ್ಯವಿಲ್ಲದ ಮಾತು. ಏಕೆಂದರೆ ಸಮಯಕ್ಕೆ ಸರಿಯಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವುದಿಲ್ಲ. ಬದಲಿಗೆ ಸಮುದಾಯದ ಸಹಭಾಗಿತ್ವ ಸಿಕ್ಕರೆ ಅಂತಹ ಶಾಲೆ ಖಾಸಗಿ ಶಾಲೆಯಂತೆ ಹೈಟೆಕ್ ಆಗಲು ಸಾಧ್ಯ ಎನ್ನುವುದನ್ನು ಈ ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮಸ್ಥರು ನಿರೂಪಿಸಿದ್ದಾರೆ. ₹ 11 ಲಕ್ಷ ದೇಣಿಗೆ ನೀಡುವ ಮೂಲಕ ಸರ್ಕಾರಿ ಪ್ರೌಢಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿ ಪರಿವರ್ತಿಸಿ ತೋರಿಸಿದ್ದಾರೆ.

1916ರಲ್ಲಿ ಪ್ರಾರಂಭಗೊಂಡ ಈ ಸರ್ಕಾರಿ ಪ್ರೌಢಶಾಲೆ 53 ವಸಂತಗಳನ್ನು ಪೂರೈಸಿದೆ. ಪ್ರಸ್ತುತ ಈ ಶಾಲೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಮಾಡಲಾಗುತ್ತಿದೆ. ಆ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುತ್ತಿದೆ. 8ರಿಂದ 10ನೇ ತರಗತಿವರೆಗೆ ಒಟ್ಟು 104 ವಿದ್ಯಾರ್ಥಿಗಳು ದಾಖಲಾಗಿದ್ದು, ಆರು ಕಾಯಂ ಶಿಕ್ಷಕರು, ಒಬ್ಬರು ಅತಿಥಿ ಶಿಕ್ಷಕ ಹಾಗೂ ಒಬ್ಬರು ಎಸ್‌ಡಿಎ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ಕೊರಟಿಕೆರೆ, ಹಿರೇಗಂಗೂರು, ಕೆ. ಲಕ್ಷ್ಮೀಸಾಗರ, ಚಿಕ್ಕಗಂಗೂರು ಹಾಗೂ ಬೊಮ್ಮೇನಹಳ್ಳಿ ಗ್ರಾಮಗಳ ಮಕ್ಕಳಿಗೆ ಈ ಪ್ರೌಢಶಾಲೆ ವಿದ್ಯಾ ಕೇಂದ್ರವಾಗಿದೆ.

ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿ ಸಂಘದವರು ನೀಡಿದ ₹ 11 ಲಕ್ಷ ದೇಣಿಗೆ ಹಣದಲ್ಲಿ ಶಾಲೆಯ ಕೊಠಡಿಗಳ ದುರಸ್ತಿ, 20 ಫ್ಯಾನ್, ಶುದ್ಧ ಕುಡಿಯುವ ನೀರಿನ ಘಟಕ, ಯುಪಿಎಸ್ ಸೌಲಭ್ಯ, 10 ಸಿ.ಸಿ.ಟಿ.ವಿ ಕ್ಯಾಮೆರಾ, ಕಂಪ್ಯೂಟರ್, ಡಿಜಿಟಲ್ ಸ್ಮಾರ್ಟ್ ಬೋರ್ಡ್, 104 ವಿದ್ಯಾರ್ಥಿಗಳಿಗೆ ಬ್ಲೇಜರ್ಸ್, ಶಾಲೆಗೆ ಸುಣ್ಣಬಣ್ಣ, ಆಕರ್ಷಕ ಗೋಡೆ ಬರಹ, ಪ್ರವೇಶ ದ್ವಾರ, ಹೊಸ ಗೇಟ್ ಅಳವಡಿಕೆ, ಮಧ್ಯಾಹ್ನದ ಬಿಸಿಯೂಟ ಕೊಠಡಿ ದುರಸ್ತಿ, ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೇಕಾದ ವೇದಿಕೆಯನ್ನು ಕೂಡಾ ಸಿದ್ಧಪಡಿಸಲಾಗಿದೆ.

‘ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಗಳು ಮೂಲ ಸೌಕರ್ಯ ಹಾಗೂ ದಾಖಲಾತಿ ಕೊರತೆಯಿಂದ ನಲುಗಿ ಹೋಗಿವೆ. ಗ್ರಾಮದ ಸರ್ಕಾರಿ ಶಾಲೆಯ ಉಳಿವಿಗೆ ನಮ್ಮ ಶಾಲೆ– ನಮ್ಮ ಹೆಮ್ಮೆ ಯೋಜನೆ ಅಡಿ ಸಮುದಾಯ ಸಹಭಾಗಿತ್ವ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಿದ್ದೇವೆ’ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ.ಕೆ. ಪ್ರಕಾಶ್ ತಿಳಿಸಿದರು.

‘ರಾಜ್ಯ ಮಟ್ಟದ ‘ತೇಜಸ್ಸು’ ಪ್ರವೇಶ ಪರೀಕ್ಷೆಗೆ ತಾಲ್ಲೂಕಿನಿಂದ ಏಕೈಕ ವಿದ್ಯಾರ್ಥಿ ನಮ್ಮ ಶಾಲೆಯ ಎಸ್.ಕೆ. ವಿನಯ್ ಆಯ್ಕೆ ಆಗಿದ್ದಾನೆ. ಅಲ್ಲದೇ ರಾಜ್ಯ ಮಟ್ಟದ ವಿಭಾಗೀಯ ಮಟ್ಟದ ಕಬಡ್ಡಿ ಕ್ರೀಡೆಗೆ ನಮ್ಮ ಶಾಲೆ ಆಯ್ಕೆಯಾಗಿದೆ. ತಾಲ್ಲೂಕು ಮಟ್ಟದ ಹಳೆಯ ವಿದ್ಯಾರ್ಥಿ ಸಂಘ ಪ್ರಶಸ್ತಿ, ಕನ್ನಡ ಶಿಕ್ಷಕರಿಗೆ ರಾಜ್ಯ ಮಟ್ಟದ ‘ಗುರುಶ್ರೀ’ ಪ್ರಶಸ್ತಿ ಸಿಕ್ಕಿರುವುದರಿಂದ ಶಾಲೆಯ ಕೀರ್ತಿ ಹೆಚ್ಚಿದೆ’ ಎಂದು ಶಿಕ್ಷಕ ಪ್ರಸನ್ನಗೌಡ ಹೇಳಿದರು.

ಹಳೆಯ ವಿದ್ಯಾರ್ಥಿಗಳ ಸಂಘ ಶಾಲಾಭಿವೃದ್ಧಿ ಸಮಿತಿ ಶಿಕ್ಷಕರು ಹಾಗೂ ಶಿಕ್ಷಣ ಪ್ರೇಮಿಗಳ ತನು–ಮನ–ಧನ ಸಹಕಾರದಿಂದ ನಮ್ಮ ಸರ್ಕಾರಿ ಪ್ರೌಢಶಾಲೆ ಹೈಟೆಕ್ ಶಾಲೆಯಾಗಿ ಪರಿವರ್ತನೆಯಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತೇವೆ
ಎಚ್.ಆರ್. ಉಮೇಶ್ ಮುಖ್ಯಶಿಕ್ಷಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.