ADVERTISEMENT

ಬಾಲಕಿ ಮದುವೆಗೆ ತಡೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 10:48 IST
Last Updated 21 ಜನವರಿ 2020, 10:48 IST

ದಾವಣಗೆರೆ: ನಗರದ ವಾರ್ಡ್ ಒಂದರಲ್ಲಿ ಬಾಲಕಿ ಮದುವೆಯನ್ನು ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ಸಂಸ್ಥೆ, ಅಜಾದ್ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕರು ಭಾನುವಾರ ತಡೆದಿದ್ದಾರೆ.

15 ವರ್ಷ 6 ತಿಂಗಳ ಬಾಲಕಿಯ ವಿವಾಹವನ್ನು ನಗರದ ಎಸ್.ಎಸ್.ಎಂ. ನಗರದ ಯುವಕನೊಂದಿಗೆ ಮಾಡಲು ಹೊರಟಿದ್ದರು. ಅಪರಿಚಿತ ವ್ಯಕ್ತಿಯೊಬ್ಬರು ಮಕ್ಕಳ ಸಹಾಯವಾಣಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾದ ಸಿಬ್ಬಂದಿ ಮದುವೆ ತಡೆದಿದ್ದಾರೆ.

ಕೊಲ್ಯಾಬ್ ಸಂಯೋಜಕ ಟಿ.ಎಂ. ಕೊಟ್ರೇಶ್, ತಂಡದ ಸದಸ್ಯ ರವಿ.ಬಿ. ಆಜಾದ್ ನಗರ ಠಾಣಿಯ ಎಸ್‌ಐ ಕೆ.ಎನ್. ಶೈಲಜಾ, ಎಎಸ್‌ಐ ಓಂಕಾರನಾಯ್ಕ್ , ಕಾನ್‌ಸ್ಟೆಬಲ್ ಮಾಲತೇಶ, ಅಂಗನವಾಡಿ ಮೇಲ್ವಿಚಾರಕಿ ಸುಧಾ ಎಂ. ಅವರು ಮದುವೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಮನೆಯವರ ಮನವೊಲಿಸಿದರೂ ಅವರು ಒಪ್ಪಲಿಲ್ಲ.

ADVERTISEMENT

ಬಾಲ್ಯವಿವಾಹ ಕಾನೂನು ಪ್ರಕಾರ ತಪ್ಪು. ಮದುವೆ ಮಾಡಿದ್ದೇ ಆದಲ್ಲಿ ₹1 ಲಕ್ಷ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆಯಾಗುತ್ತದೆ ಎಂದು ಸ್ಥಳೀಯ ಮುಖಂಡರ ಸಮ್ಮಖದಲ್ಲಿ ಮನವರಿಕೆ ಮಾಡಿಕೊಟ್ಟ ನಂತರ ಮದುವೆ ನಿಲ್ಲಿಸಲು ಒಪ್ಪಿಕೊಂಡರು. 18 ವರ್ಷ ಆಗುವವರೆಗೆ ಮದುವೆ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಪತ್ರವನ್ನು ಪೋಷಕರಿಂದ ಬರೆಸಿಕೊಂಡರು.

‘ಬಾಲಕಿಯ ತಾಯಿಗೆ ನಾಲ್ಕು ಹೆಣ್ಣು ಮಕ್ಕಳಿದ್ದು, ಬಡತನದ ಕಾರಣದಿಂದ ಮದುವೆ ಮಾಡಲು ಹೊರಟಿದ್ದರು. ನಾವು ಬಾಲಕಿಯ ತಾಯಿಗೆ ಬುದ್ಧಿವಾದ ಹೇಳಿ ಮದುವೆಯನ್ನು ತಡೆದೆವು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.