ADVERTISEMENT

ಮಕ್ಕಳನ್ನು ದುಡಿಮೆಗೆ ಹಚ್ಚದೆ ಶಾಲೆಗೆ ಕಳಿಸಿ: ಉಮಾ ಪ್ರಶಾಂತ್

ಜನ ಸಂಪರ್ಕ ಸಭೆಯಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:49 IST
Last Updated 24 ಜೂನ್ 2025, 15:49 IST
ಹರಿಹರ: ಹರಿಹರದ ಎ.ಕೆ.ಕಾಲೋನಿಯಲ್ಲಿ ಸೋಮವಾರ ಅಯೋಜಿಸಿದ್ದ ಬೀಟ್ ಜನ ಸಂಪರ್ಕ ಸಭೆಯಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ಭಾಗವಹಿಸಿ ಮಾತನಾಡಿದರು. ಪಿಐ ರಾಜೇಸಾಬ್ ಫಕ್ರುದ್ದೀನ್ ದೇಸಾಯಿ ಇದ್ದರು.
ಹರಿಹರ: ಹರಿಹರದ ಎ.ಕೆ.ಕಾಲೋನಿಯಲ್ಲಿ ಸೋಮವಾರ ಅಯೋಜಿಸಿದ್ದ ಬೀಟ್ ಜನ ಸಂಪರ್ಕ ಸಭೆಯಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ಭಾಗವಹಿಸಿ ಮಾತನಾಡಿದರು. ಪಿಐ ರಾಜೇಸಾಬ್ ಫಕ್ರುದ್ದೀನ್ ದೇಸಾಯಿ ಇದ್ದರು.   

ಹರಿಹರ: ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ನೀಡುತ್ತಿರುವ ಸಾಕಷ್ಟು ಸೌಲಭ್ಯಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ನಗರದ ಎ.ಕೆ.ಕಾಲೊನಿಯ ಭಜನಾ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಬೀಟ್ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಪಡೆದ ವ್ಯಕ್ತಿ ಸಹಜವಾಗಿ ಪ್ರಜ್ಞಾವಂತಿಕೆ ಪಡೆಯುತ್ತಾರೆ. ಜೊತೆಗೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ದಾರಿಯಾಗುತ್ತದೆ’ ಎಂದರು.

ADVERTISEMENT

‘ವಾರ ಅಥವಾ ತಿಂಗಳಿಗೊಮ್ಮೆ ಕೂಲಿ ಸಿಗುತ್ತದೆ ಎಂಬ ಕಾರಣಕ್ಕೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸಬಾರದು. ಕುಟುಂಬದಲ್ಲಿ ಎಷ್ಟೇ ಕಷ್ಟವಿದ್ದರೂ ಮಕ್ಕಳನ್ನು ಕೆಲಸಕ್ಕೆ ಕಳುಹಿಸಬಾರದು. ಶಿಕ್ಷಣ ಮತ್ತು ವಸತಿ ಉಚಿತ ಇರುವ ಸರ್ಕಾರದ ವಸತಿಯುತ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳನ್ನು ಸೇರಿಸಿ, ದುರ್ಬಲ ವರ್ಗದವರ ಏಳಿಗೆಗಾಗಿಯೇ ಇರುವ ಸರ್ಕಾರದ ಯೋಜನೆಗಳನ್ನು ಉಪಯೋಗಿಸಿ ಉನ್ನತಿ ಸಾಧಿಸಬೇಕು’ ಎಂದು ಹೇಳಿದರು.

‘ಶಿಕ್ಷಣ ಸಂಸ್ಥೆಗಳಿರುವ ರಸ್ತೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಬಾರಿಕೇಡ್ ಅಳವಡಿಸಲಾಗಿದೆ. ಅಕ್ರಮ ಮದ್ಯ ಮಾರಾಟದ ಬಗ್ಗೆ ಹಲವು ದೂರುಗಳಿದ್ದು, ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಠಾಣೆ ಪಿಐ ರಾಜೇಸಾಬ್ ಫಕ್ರುದ್ದೀನ್ ದೇಸಾಯಿ ಹೇಳಿದರು.

‘ಕಾಲೊನಿಯಲ್ಲಿರುವ ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲ’ ಎಂದು ಸಭೆಯಲ್ಲಿ ಹಲವರು ದೂರಿದಾಗ, ಉಮಾ ಪ್ರಶಾಂತ್ ಅವರು ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರನ್ನು ಸ್ಥಳಕ್ಕೆ ಕರೆಯಿಸಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ತಾಕೀತು ಮಾಡಿದರು.

ನಗರ ಹಾಗೂ ಗ್ರಾಮೀಣ ಭಾಗದ ಹಲವೆಡೆ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ, ಇದು ಜನ ಸಾಮಾನ್ಯರಿಗೆ ಹಾಗೂ ನೆರೆ, ಹೊರೆಯ ನಿವಾಸಿಗಳಿಗೆ ಕಿರಿ, ಕಿರಿ ಉಂಟು ಮಾಡುತ್ತಿದೆ ಎಂದು ಮಂಜುನಾಥ ಕೊಪ್ಪಳ ದೂರಿದರು.

ಈ ಸಭೆಯಲ್ಲಿ ಪಿಎಸ್‌ಐ ಶ್ರೀಪತಿ ಗಿನ್ನಿ, ಕಾಂಗ್ರೆಸ್ ಮುಖಂಡ ಸಂತೋಷ್ ನೋಟದವರ್, ಕಾಲೊನಿಯ ಹಿರಿಯರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.