ADVERTISEMENT

ಸಾಮರ್ಥ್ಯಕ್ಕೆ ತಕ್ಕಂತೆ ಕೋರ್ಸ್‌ ಆಯ್ಕೆ ಮಾಡಿಕೊಳ್ಳಿ

ಬಿ.ಎಸ್.ಸಿ ಪ್ರಥಮ ದರ್ಜೆ ಕಾಲೇಜಿನ ಬಿ.ಸಿ. ಶಿವಕುಮಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 3:03 IST
Last Updated 6 ಏಪ್ರಿಲ್ 2021, 3:03 IST
ದಾವಣಗೆರೆಯ ಎಸ್‌ಬಿಸಿ ಕಾಲೇಜಿನಲ್ಲಿ ಆಯೋಜಿಸಿದ್ದ ದ್ವೀತಿಯ ಪಿಯುಸಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಪೂರ್ವಸಿದ್ಧತಾ ಕಾರ್ಯಾಗಾರದಲ್ಲಿ ಕಾಲೇಜಿನ ಅಧ್ಯಕ್ಷರಾದ ಬಿ.ಸಿ. ಶಿವಕುಮಾರ್ ಮಾತನಾಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಎಸ್‌ಬಿಸಿ ಕಾಲೇಜಿನಲ್ಲಿ ಆಯೋಜಿಸಿದ್ದ ದ್ವೀತಿಯ ಪಿಯುಸಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಪೂರ್ವಸಿದ್ಧತಾ ಕಾರ್ಯಾಗಾರದಲ್ಲಿ ಕಾಲೇಜಿನ ಅಧ್ಯಕ್ಷರಾದ ಬಿ.ಸಿ. ಶಿವಕುಮಾರ್ ಮಾತನಾಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಯಾವುದೇ ವಿಷಯದಲ್ಲಿ ಯಶಸ್ಸು ಪಡೆಯಬೇಕಾದರೆ ಆ ವಿಷಯದಲ್ಲಿ ಆಳವಾದ ಜ್ಞಾನ ಹಾಗೂ ಆಸಕ್ತಿ ಮುಖ್ಯ ಎಂದು ಬಿ.ಎಸ್.ಸಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್ ಅಭಿಪ್ರಾಯಪಟ್ಟರು.

ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಸೋಮವಾರ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿಜ್ಞಾನ ವಿಷಯದಲ್ಲಿ ಉತ್ತಮ ಭವಿಷ್ಯ ಇದೆ ಎಂದು ಹೆಚ್ಚಿನ ವಿದ್ಯಾರ್ಥಿಗಳು ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಸಿಗದೇ ಇದ್ದಾಗ ಮಾತ್ರ ವಾಣಿಜ್ಯ ಹಾಗೂ ಕಲೆ ವಿಷಯಗಳನ್ನು ಆಯ್ಕೆ ಮಾಡುತ್ತಾರೆ. ವಿಜ್ಞಾನ ವಿಷಯಕ್ಕೆ ಹಾಕುವ ಹೆಚ್ಚಿನ ಶ್ರಮವನ್ನು ವಾಣಿಜ್ಯ ಹಾಗೂ ಕಲೆಗೆ ಹಾಕಿದರೆ ಬೇಗ ಯಶಸ್ಸು ಪಡೆಯಬಹುದು’ ಎಂದು ಹೇಳಿದರು.

ADVERTISEMENT

‘ಮಕ್ಕಳು ಏನು ಓದಬೇಕೆಂದು ಹೆಚ್ಚಿನದಾಗಿ ತಂದೆ-ತಾಯಿಗಳೇ ನಿರ್ಧಾರ ಮಾಡುತ್ತಾರೆ. ಇದು ಸರಿಯಲ್ಲ. ಮಕ್ಕಳ ಸಾಮರ್ಥ್ಯ ಏನು ಎಂಬುದನ್ನು ನಿರ್ಧರಿಸಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಹಾಗಾದಾಗ ಯಶಸ್ಸು ಸುಲಭವಾಗಿ ದೊರೆಯಲಿದೆ’ ಎಂದು ಪ್ರತಿಪಾದಿಸಿದರು.

‘ದೇಶದಲ್ಲಿರುವ ಐಎಎಸ್ ಅಧಿಕಾರಿಗಳ ಪೈಕಿ ಬಹುಪಾಲು ಬಡ ರಾಜ್ಯ ಎನಿಸಿಕೊಂಡಿರುವ ಬಿಹಾರದವರೇ ಆಗಿದ್ದು, ಇದಕ್ಕೆ ಕಾರಣ ಅಲ್ಲಿ ಹೆಚ್ಚು ಮೆಡಿಕಲ್ ಓದುವವರ ಸಂಖ್ಯೆ ಕಡಿಮೆ. ಅವರೇನಿದ್ದರೂ ಕಲೆ, ವಾಣಿಜ್ಯ ಆಯ್ಕೆ ಮಾಡಿಕೊಂಡು ಐಎಎಸ್ ಆಗುತ್ತಾರೆ. ಯಶಸ್ಸು ಯಾವ ಕ್ಷೇತ್ರದಲ್ಲಿಯೇ ಆಗಬಹುದು ಅದಕ್ಕೆ ಪರಿಶ್ರಮ ಮುಖ್ಯ’ ಎಂದು
ತಿಳಿಸಿದರು.

‘ಅಂಕಪಟ್ಟಿ ವಿಸಿಟಿಂಗ್ ಕಾರ್ಡ್ ಇದ್ದಹಾಗೆ. ನಾವು ಯಶಸ್ಸು ಕಾಣಬೇಕೆಂದರೆ ಸಂವಹನ ಕೌಶಲ ಮುಖ್ಯ. ಅದು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುತ್ತದೆ. ‘ಕಂಪನಿ ಸೆಕ್ರಟರಿ’ ಕೋರ್ಸ್ ಬಹಳ ಜನಕ್ಕೆ ಗೊತ್ತಿಲ್ಲ. ಅದರಲ್ಲೂ ತುಂಬಾ ಅವಕಾಶಗಳಿವೆ. ಯಾವುದೇ ವಿದ್ಯೆಯಾಗಲೀ ಕಲಿಯಲು ಆಸಕ್ತಿ ಇರಬೇಕು. ಮುಖ್ಯವಾಗಿ ನಿಮ್ಮ ಮೇಲೆ ನಿಮಗೆ ನಂಬಿಕೆ ಬಂದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ’
ಎಂದರು.

ಕಾಲೇಜು ಪ್ರಾಂಶುಪಾಲ ಡಾ. ಕೆ. ಷಣ್ಮುಖ ಮಾತನಾಡಿ, ‘ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಬೇಕೆಂದರೆ ಹಳೇ ಪ್ರಶ್ನೆ ಪತ್ರಿಕೆಗಳನ್ನು ತಿರುವಿ ಹಾಕಬೇಕು, ಪ್ರಾಯೋಗಿಕ ಮತ್ತು ವೈಜ್ಞಾನಿಕವಾಗಿ ಅಭ್ಯಾಸ ಮಾಡಬೇಕು. ಉತ್ತರ ಬರೆಯುವ ವಿಧಾನ ಮುಖ್ಯ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಪಿಯು ಕಾಲೇಜು ನಿರ್ದೇಶಕ ಡಾ. ಡಿ.ಎಸ್. ಜಯಂತ್, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗುರುಪ್ರಸಾದ್, ಪ್ರಾಂಶುಪಾಲರಾದ ರಾಜಶೇಖರ್, ಗುರುಮೂರ್ತಿ ಉಪಸ್ಥಿತರಿದ್ದರು. ಚಿನ್ಮಯಿ ಪ್ರಾರ್ಥಿಸಿದರು, ಡಾ. ಕೆ. ಮಂಜುನಾಥ್ ಸ್ವಾಗತಿಸಿದರು. ಪ್ರಸನ್ನ ರೆಡ್ಡಿ ವಂದಿಸಿದರು. ಡಾ. ಭಾಗ್ಯಶ್ರೀ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.