ADVERTISEMENT

ಕ್ರಿಸ್‌ಮಸ್‌ ಸಂಭ್ರಮ: ಯೇಸು ಸ್ಮರಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 1:50 IST
Last Updated 26 ಡಿಸೆಂಬರ್ 2021, 1:50 IST
ಕ್ರಿಸ್‌ಮಸ್ ಅಂಗವಾಗಿ ದಾವಣಗೆರೆಯ ಸಂತ ಥೋಮಸರ ಚರ್ಚ್‌ನಲ್ಲಿ ಕ್ರೈಸ್ತರು ಶನಿವಾರ ಪ್ರಾರ್ಥನೆ ಸಲ್ಲಿಸಿದರು.
ಕ್ರಿಸ್‌ಮಸ್ ಅಂಗವಾಗಿ ದಾವಣಗೆರೆಯ ಸಂತ ಥೋಮಸರ ಚರ್ಚ್‌ನಲ್ಲಿ ಕ್ರೈಸ್ತರು ಶನಿವಾರ ಪ್ರಾರ್ಥನೆ ಸಲ್ಲಿಸಿದರು.   

ದಾವಣಗೆರೆ: ಜಿಲ್ಲೆಯಲ್ಲಿ ಕ್ರೈಸ್ತರು ಕ್ರಿಸ್‌ಮಸ್ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಚರಿಸಿದರು.

ಶನಿವಾರ ಬೆಳಿಗ್ಗೆ ಚರ್ಚ್‌ಗಳಲ್ಲಿ ಪ್ರಾರ್ಥನೆ, ಕ್ರಿಸ್‌ಮಸ್ ಗೀತೆಗಳ ಗಾಯನ, ಮನೆ ಮನೆಗಳಲ್ಲಿ ಯೇಸುವಿನ ಸ್ಮರಣೆ ಮಾಡಲಾಯಿತು. ಕೇಕ್ ಹಂಚುವ ಮೂಲಕ ಶುಭಾಶಯ ಕೋರಲಾಯಿತು.

ನಗರದ ಪಿ.ಜೆ. ಬಡಾವಣೆಯ ಸಂತ ಥಾಮಸರ ಚರ್ಚ್‌ ಆವರಣ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿತ್ತು. ವಿವಿಧೆಡೆಯಿಂದ ಬಂದಿದ್ದ ಯೇಸುವಿನ ಭಕ್ತರು ಹಬ್ಬದ ಕಳೆಯನ್ನು ಹೆಚ್ಚಿಸಿದ್ದರು. ಚರ್ಚ್‌ ಒಳಗೆ ಬರುವವರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು.

ADVERTISEMENT

ಚರ್ಚ್‌ ಮುಂಭಾಗ ಮಕ್ಕಳು ಕೈಯಲ್ಲಿ ಬಲೂನ್ ಹಿಡಿದು ಟೋಪಿ ಧರಿಸಿ ಸಂಭ್ರಮಿಸಿದರು. ಕೆಲವು ಮಕ್ಕಳು ಸಾಂತಾಕ್ಲಾಸ್ ವೇಷದಲ್ಲಿ ಮಿಂಚಿದರು. ಸ್ನೇಹಿತರು, ಬಂಧುಗಳ ಸಮೇತ ಮನೆ ಮನೆಮಂದಿಯೆಲ್ಲಾ ಚರ್ಚ್‌ಗೆ ಬಂದು ಹಬ್ಬವನ್ನು ಸಂಭ್ರಮಿಸಿದರು.

ಚರ್ಚ್‌ನ ಒಳಗಡೆ ಕ್ರಿಸ್‌ಮಸ್ ಗೀತೆಗಳ ಗಾಯನ ಮೊಳಗಿದರೆ, ಹೊರಗಡೆ ಭಕ್ತರು ಮೇಣದ ಬತ್ತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‌ನ ಪಕ್ಕದಲ್ಲಿಯೇ ಯೇಸು ಕ್ರಿಸ್ತರ ಜೀವನದ ಘಟನಾವಳಿಗಳ ಚಿತ್ರಣ ಕುರಿತ ಗೋದಲಿಯನ್ನು ಸಾರ್ವಜನಿಕರು ವೀಕ್ಷಿಸಿ ಸಂಭ್ರಮಿಸಿದರು.

ಸಂತ ಥಾಮಸರ ಚರ್ಚ್‌ಗೆ ಭಕ್ತರು ಹೊಸದಾಗಿ ಕೊಡುಗೆ ನೀಡಿರುವ ಮೂರು ಶಿಲುಬೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಚರ್ಚ್‌ನ ಮುಂದೆ ಯುವಕರು ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ದೇವಾಲಯದ ಧರ್ಮಗುರು ಫಾದರ್ ಆಂಥೋನಿ ನಜೆರತ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.