ADVERTISEMENT

ಹರಿಹರ: ಬೆಸಿಲಿಕ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಸಡಗರ

ವಿಶೇಷ ಪೂಜಾ ಕಾರ್ಯದೊಂದಿಗೆ ಆಚರಣೆಗೆ ಚಾಲನೆ; ಪ್ರಾರ್ಥನೆ ಸಲ್ಲಿಕೆ

ಟಿ.ಇನಾಯತ್‌ ಉಲ್ಲಾ
Published 25 ಡಿಸೆಂಬರ್ 2025, 4:41 IST
Last Updated 25 ಡಿಸೆಂಬರ್ 2025, 4:41 IST
ಹರಿಹರದ ಆರೋಗ್ಯಮಾತೆ ಬೆಸಿಲಿಕ ಚರ್ಚ್‌ ಬುಧವಾರ ರಾತ್ರಿ ದೀಪಾಲಂಕಾರದಿಂದ ಕಂಗೊಳಿಸಿತು
ಹರಿಹರದ ಆರೋಗ್ಯಮಾತೆ ಬೆಸಿಲಿಕ ಚರ್ಚ್‌ ಬುಧವಾರ ರಾತ್ರಿ ದೀಪಾಲಂಕಾರದಿಂದ ಕಂಗೊಳಿಸಿತು   

ಹರಿಹರ: ಜಗತ್ತಿಗೆ ಸಹೋದರತ್ವ, ಪ್ರೇಮ, ಶಾಂತಿಯ ಸಂದೇಶ ಹೊತ್ತು ತಂದ ಕ್ರೈಸ್ತ ಬಾಂಧವರ ಆರಾಧ್ಯ ದೈವ ಏಸುವಿನ ಜನನದ ಮಹೋತ್ಸವವನ್ನು ಇಲ್ಲಿನ ಆರೋಗ್ಯಮಾತೆ ಬೆಸಿಲಿಕ ಚರ್ಚ್‌ನಲ್ಲಿ ಬುಧವಾರ ಮಧ್ಯರಾತ್ರಿಯಿಂದ ಆಚರಿಸಲಾಗುತ್ತಿದೆ.

ನಡುರಾತ್ರಿ ಕ್ರಿಸ್ತ ಜಯಂತಿಯ ವಿಶೇಷ ಪೂಜಾ ಕಾರ್ಯದೊಂದಿಗೆ ಆಚರಣೆಗೆ ಚಾಲನೆ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿತು. 

ರೈತರ ಸಮೃದ್ಧಿಗೆ ಪ್ರಾರ್ಥನೆ:

‘ಈ ಕ್ರಿಸ್‌ಮಸ್ ಹಬ್ಬದಲ್ಲಿ ಸಕಲ ರೈತರ ಕ್ಷೇಮಾಭಿವೃದ್ಧಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅವರಿಗೆ ಪ್ರಭು ಏಸು ಒಳಿತನ್ನು ಅನುಗ್ರಹಿಸುವುದರ ಜೊತೆಗೆ ಜಗತ್ತಿನಲ್ಲಿ ತಾಂಡವವಾಡುತ್ತಿರುವ ಅಶಾಂತಿ ತೊಲಗಿ, ವಿಶ್ವ ಶಾಂತಿ ನೆಲೆಸಲೆಂದು ಪ್ರಾರ್ಥಿಸಲಾಯಿತು’ ಎಂದು ಪುಣ್ಯಕ್ಷೇತ್ರದ ಪ್ರಧಾನ ಗುರುಗಳಾದ ಫಾದರ್‌ ಜಾರ್ಜ್ ಕೆ.ಎ. ತಿಳಿಸಿದರು.

ADVERTISEMENT

‘ಕ್ರಿಸ್‌ಮಸ್‌ ಕೇವಲ ಒಂದು ಧಾರ್ಮಿಕ ಹಬ್ಬವಲ್ಲ. ಅದು ಪ್ರೀತಿ, ಭ್ರಾತೃತ್ವ ಮತ್ತು ದಯೆಯ ಸಂಕೇತ. ಪ್ರತಿ ವರ್ಷ ಡಿ. 25ರಂದು ಪ್ರಪಂಚದಾದ್ಯಂತ ಏಸು ಕ್ರಿಸ್ತನ ಜನನವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಚಳಿಗಾಲದ ಮೈಕೊರೆವ ಚಳಿಯಲ್ಲೂ ಜನರಲ್ಲಿ ಬೆಚ್ಚಗಿನ ಉತ್ಸಾಹವನ್ನು ತುಂಬುತ್ತಿದೆ’ ಎಂದು ಹೇಳಿದರು.

ಕ್ರಿಸ್‌ಮಸ್ ವಿಶೇಷತೆಗಳು: 

ಕ್ರಿಸ್‌ಮಸ್ ಮರ: ಮನೆಯಲ್ಲಿ ಕ್ರಿಸ್‌ಮಸ್ ಮರವನ್ನು ಇರಿಸಿ, ಅದಕ್ಕೆ ಬಣ್ಣ ಬಣ್ಣದ ದೀಪಗಳು, ನಕ್ಷತ್ರಗಳು ಮತ್ತು ಉಡುಗೊರೆಗಳಿಂದ ಅಲಂಕರಿಸುವುದು ಈ ಹಬ್ಬದ ಮುಖ್ಯ ಆಕರ್ಷಣೆ. ಇದು ನಿತ್ಯಹರಿದ್ವರ್ಣದ ಸಂಕೇತವಾಗಿದ್ದು, ಜೀವನದ ಚೈತನ್ಯವನ್ನು ಪ್ರತಿನಿಧಿಸುತ್ತದೆ.

ನಕ್ಷತ್ರದ ದೀಪಗಳು: ಏಸು ಜನಿಸಿದಾಗ ಆಕಾಶದಲ್ಲಿ ಮೂಡಿದ ನಕ್ಷತ್ರದ ನೆನಪಿಗಾಗಿ ಮನೆಗಳ ಮುಂದೆ ಸುಂದರವಾದ ನಕ್ಷತ್ರದ ಗೂಡುದೀಪಗಳನ್ನು ತೂಗುಹಾಕಲಾಗುತ್ತದೆ.

ಕ್ಯಾರಲ್ ಗಾಯನ: ಗುಂಪು, ಗುಂಪಾಗಿ ಮನೆ, ಮನೆಗೆ ತೆರಳಿ ಏಸುವಿನ ಗುಣಗಾನ ಮಾಡುವ ಹಾಡುಗಳನ್ನು (ಕ್ಯಾರಲ್ಸ್) ಹಾಡುವುದು ಒಂದು ಸುಂದರ ಸಂಪ್ರದಾಯ.

ಸಾಂಟಾ ಕ್ಲಾಸ್: ಕೆಂಪು ಬಟ್ಟೆ ಧರಿಸಿ, ಬಿಳಿ ಗಡ್ಡ ಬಿಟ್ಟ ‘ಸಾಂಟಾ ಕ್ಲಾಸ್’ ಮಕ್ಕಳಿಗೆ ಅಚ್ಚುಮೆಚ್ಚು. ಸಾಂಟಾ ರಾತ್ರೋರಾತ್ರಿ ಬಂದು ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಾನೆ ಎಂಬ ನಂಬಿಕೆ ಮಕ್ಕಳಲ್ಲಿ ಅತೀವ ಸೌಂದರ್ಯ ಮತ್ತು ಕುತೂಹಲ ಮೂಡಿಸುತ್ತದೆ.

ಮಧ್ಯರಾತ್ರಿಯ ಪ್ರಾರ್ಥನೆ: ಡಿ. 24ರ ತಡರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯುತ್ತವೆ. ಎಲ್ಲರೂ ಒಟ್ಟಾಗಿ ಸೇರಿ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

ತಿಂಡಿ– ತಿನಿಸುಗಳ ಸಂಭ್ರಮ: ಹಬ್ಬವೆಂದ ಮೇಲೆ ಸಿಹಿ ಇರಲೇಬೇಕು. ಕ್ರಿಸ್‌ಮಸ್ ಹಬ್ಬದಲ್ಲಿ ಪ್ಲಮ್ ಕೇಕ್, ವೈನ್ ಮತ್ತು ವಿವಿಧ ಬಗೆಯ ಕುಕ್ಕೀಸ್‌ಗಳು ವಿಶೇಷವಾಗಿರುತ್ತವೆ. ಕುಟುಂಬದವರೆಲ್ಲರೂ ಒಟ್ಟಾಗಿ ಕುಳಿತು ಹಬ್ಬದೂಟ ಸವಿಯುವುದು ಈ ದಿನದ ವಿಶೇಷ. ಹಂಚಿ ಉಣ್ಣುವುದು ಸಂತೋಷವನ್ನು ಇಮ್ಮಡಿ ಗೊಳಿಸುತ್ತದೆ.

ಕ್ರಿಸ್‌ಮಸ್ ಹಬ್ಬದ ನಿಜವಾದ ಅರ್ಥ ‘ನೀಡುವುದು’. ಬಡವರಿಗೆ ದಾನ ಮಾಡುವುದು, ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಉಡುಗೊರೆಗಳನ್ನು ನೀಡುವುದು ಈ ಹಬ್ಬದ ಅವಿಭಾಜ್ಯ ಅಂಗ. ಇದು ಮನುಷ್ಯರ ನಡುವೆ ಪ್ರೀತಿಯನ್ನು ಬೆಸೆಯುವ ಸಮಯವೆಂದು ಪ್ರತೀತಿ.

ಕ್ರಿಸ್ತ ಜನಿಸಿದ ಸಂದರ್ಭದ ರೂಪಕವನ್ನು ಬೆಸಿಲಿಕ ಪುಣ್ಯಕ್ಷೇತ್ರದಲ್ಲಿ ರೂಪಿಸಲಾಗಿತ್ತು  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.