ADVERTISEMENT

ಇವಿ ವಾಹನಗಳತ್ತ ಜನರ ಒಲವು | ಪರಿಸರಕ್ಕೆ ಪೂರಕ; ಜನಸಾಮಾನ್ಯರಿಗೆ ‘ವರ’

ಜಿ.ಶಿವಕುಮಾರ
Published 30 ಡಿಸೆಂಬರ್ 2024, 7:02 IST
Last Updated 30 ಡಿಸೆಂಬರ್ 2024, 7:02 IST
ದಾವಣಗೆರೆಯಲ್ಲಿ ಯುವತಿಯೊಬ್ಬರು ಎಲೆಕ್ಟ್ರಿಕ್ ವಾಹನದಲ್ಲಿ ಸಂಚರಿಸುತ್ತಿರುವುದು –ಪ್ರಜಾವಾಣಿ ಚಿತ್ರಗಳು/ಸತೀಶ್ ಬಡಿಗೇರ
ದಾವಣಗೆರೆಯಲ್ಲಿ ಯುವತಿಯೊಬ್ಬರು ಎಲೆಕ್ಟ್ರಿಕ್ ವಾಹನದಲ್ಲಿ ಸಂಚರಿಸುತ್ತಿರುವುದು –ಪ್ರಜಾವಾಣಿ ಚಿತ್ರಗಳು/ಸತೀಶ್ ಬಡಿಗೇರ   

ದಾವಣಗೆರೆ: ಪರಿಸರಕ್ಕೆ ಪೂರಕ ಹಾಗೂ ಜನಸಾಮಾನ್ಯರ ಪಾಲಿಗೆ ‘ವರ’ವಾಗಿ ಪರಿಣಮಿಸುತ್ತಿರುವ ವಿದ್ಯುತ್‌ ಚಾಲಿತ (ಇವಿ) ವಾಹನಗಳತ್ತ ನಾಗರಿಕರ ಒಲವು ದಿನೇ ದಿನೇ ಹೆಚ್ಚುತ್ತಿದೆ. ನಗರ ಮತ್ತು ಪಟ್ಟಣಗಳಲ್ಲಷ್ಟೇ ಅಲ್ಲದೆ ಹಳ್ಳಿಗಾಡಿನಲ್ಲೂ ಇವಿ ವಾಹನಗಳ ಓಡಾಟ ಶುರುವಾಗಿರುವುದು ಇದಕ್ಕೊಂದು ನಿದರ್ಶನ. 

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಗಗನಮುಖಿಯಾಗಿದೆ. ಇವುಗಳ ದರ ಏರಿಕೆ ಬಿಸಿಯಿಂದ ರೋಸಿ ಹೋಗಿರುವ ಜನ, ಕಡಿಮೆ ಇಂಧನ ವೆಚ್ಚ ಹಾಗೂ ಬಳಕೆದಾರರ ಸ್ನೇಹಿಯೂ ಆಗಿರುವ ಎಲೆಕ್ಟ್ರಿಕ್‌ ವಾಹನಗಳತ್ತ ಚಿತ್ತ ಹರಿಸುತ್ತಿದ್ದಾರೆ. 

ಪೆಟ್ರೋಲ್‌ ಹಾಗೂ ಡೀಸೆಲ್‌ ಚಾಲಿತ ವಾಹನಗಳಿಗೆ ಹೋಲಿಸಿದರೆ ವಿದ್ಯುತ್‌ ಚಾಲಿತ ವಾಹನಗಳ ಖರೀದಿ ದರ ತುಸು ಹೆಚ್ಚು. ಆದರೆ, ಖರೀದಿಸಿದ ನಂತರ ತಗಲುವ ವೆಚ್ಚ ತುಂಬಾ ಕಡಿಮೆ. ಬಸ್‌, ಆಟೊ, ಕಾರು ಹಾಗೂ ವಾಣಿಜ್ಯ ಬಳಕೆಗಾಗಿ ಎಲೆಕ್ಟ್ರಿಕ್‌ ವಾಹನ ಕೊಂಡುಕೊಂಡರೆ ತೆರಿಗೆ ಕಟ್ಟುವ ಪ್ರಮೇಯವೂ ಎದುರಾಗುವುದಿಲ್ಲ.

ADVERTISEMENT

₹20 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್‌ ವಾಹನಗಳ ಮೇಲೆ ಶೇ 10ರಷ್ಟು ತೆರಿಗೆ ವಿಧಿಸಲು ರಾಜ್ಯ ಸರ್ಕಾರ ಈ ಮೊದಲು ತೀರ್ಮಾನಿಸಿತ್ತು. ಆದರೆ ಈಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ತೆರಿಗೆ ಪ್ರಸ್ತಾವನೆ ಕೈಬಿಡುವ ನಿರ್ಧಾರ ಪ್ರಕಟಿಸಿದೆ. 

ದೇಶದಲ್ಲಿ 2030ರ ವೇಳೆಗೆ ದೈನಂದಿನ ಬಳಕೆಗಾಗಿಯೇ 7 ಮಿಲಿಯನ್‌ (70 ಲಕ್ಷ) ಬ್ಯಾರೆಲ್‌ ಪೆಟ್ರೋಲಿಯಂ ಉತ್ಪನ್ನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಕಡಿವಾಣ ಹಾಕಲು ಈಗಿನಿಂದಲೇ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕೆಂದು ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಬಸ್‌, ಟ್ರಕ್‌ಗಳಂತಹ ಭಾರಿ ವಾಹನಗಳ (ಇವಿ) ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ತಿಳಿಸಿದ್ದಾರೆ. 

ಭಾರತವು ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದ್ದು, ಇಲ್ಲಿನ ಜಿಡಿಪಿಗೆ ಸಾರಿಗೆ ಕ್ಷೇತ್ರದ ಕೊಡುಗೆ ಶೇ 6.9ರಷ್ಟಿದೆ. ಸದ್ಯ ಈ ಕ್ಷೇತ್ರವು ಪೆಟ್ರೋಲಿಯಂ ಉತ್ಪನ್ನಗಳ ಮೇಲೇ ಹೆಚ್ಚು ಅವಲಂಬಿತವಾಗಿದೆ. ಈ ಕಾರಣದಿಂದಾಗಿಯೇ ಇಲ್ಲಿನ ಹಲವು ನಗರಗಳು ವಿಶ್ವದ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಸ್ಥಾನವನ್ನೂ ಪಡೆದಿವೆ. ಈಗಿರುವ ವಾಹನಗಳಲ್ಲಿ ಶೇ 30ರಷ್ಟಾದರೂ ಎಲೆಕ್ಟ್ರಿಕ್‌ ವಾಹನಗಳು ರಸ್ತೆಗೆ ಇಳಿಯಬೇಕು. ಹೀಗಾದಲ್ಲಿ ಇಂಧನ ಬಳಕೆ ಪ್ರಮಾಣ ಶೇ 15ರಷ್ಟು ತಗ್ಗುವುದಲ್ಲದೆ, ₹1 ಲಕ್ಷ ಕೋಟಿ ಮೊತ್ತವೂ ಉಳಿತಾಯವಾಗಲಿದೆ ಎಂದೂ ತಜ್ಞರು ಹೇಳಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದಂತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದಿಸೆಯಲ್ಲಿ ಹಲವು ಪ್ರೋತ್ಸಾಹಕ ಕ್ರಮಗಳನ್ನು ಕೈಗೊಂಡಿವೆ. ‘ಇವಿ ಎಕ್ಸ್‌ಪೋ’, ‘ಇವಿ ಡ್ರೈವ್‌’ನಂತಹ ಕಾರ್ಯಕ್ರಮಗಳ ಮೂಲಕ ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದಕರು, ಪೂರೈಕೆದಾರರು ಮತ್ತು ಬಳಕೆದಾರರನ್ನು ಒಂದೇ ಸೂರಿನಡಿ ತಂದು ಪರಸ್ಪರ ಸಮನ್ವಯ ಸಾಧಿಸಲು ಮುಂದಾಗಿವೆ. 

ಈಗ ಜನರೂ ಜಾಗೃತರಾಗುತ್ತಿದ್ದು, ಇವಿ ಸ್ಕೂಟರ್‌, ಆಟೊ ಹಾಗೂ ಕಾರುಗಳ ಖರೀದಿಗೆ ಒಲವು ತೋರುತ್ತಿದ್ದಾರೆ. ರಾಜ್ಯದಲ್ಲಿ 2023ರ ಏಪ್ರಿಲ್‌ 1 ರಿಂದ ನವೆಂಬರ್‌ 30ರವರೆಗೆ 8.41 ಲಕ್ಷ ಇವಿ ಸ್ಕೂಟರ್‌ ಹಾಗೂ 1.84 ಲಕ್ಷದಷ್ಟು ನಾಲ್ಕು ಚಕ್ರದ ವಾಹನಗಳ ನೋಂದಣಿಯಾಗಿತ್ತು. 2024ರಲ್ಲಿ ಇದೇ ಅವಧಿಯಲ್ಲಿ ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆ 8.42 ಲಕ್ಷಕ್ಕೆ ಏರಿದೆ. ರಾಜ್ಯದಲ್ಲಿ ಸದ್ಯ ಅಂದಾಜು 3.5 ಕೋಟಿ ವಾಹನಗಳಿದ್ದು, ಇವುಗಳಲ್ಲಿ ಇವಿ ವಾಹನಗಳ ಪ್ರಮಾಣ ಶೇ 10 ರಷ್ಟಿದೆ. 

ದಾವಣಗೆರೆ ಜಿಲ್ಲೆಯಲ್ಲಿಯೂ ಇವಿ ವಾಹನ ಬಳಕೆದಾರರ ಸಂಖ್ಯೆ ಏರುಮುಖವಾಗಿದೆ. ಓಲಾ, ಏಥರ್‌, ಟಿವಿಎಸ್‌ (ಐ ಕ್ಯೂಬ್‌) ಹಾಗೂ ಹೀರೊ (ವಿಡಾ ವಿ1 ಪ್ರೊ), ಬಜಾಜ್‌ (ಚೇತಕ್‌) ಕಂಪನಿಗಳ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.  

ದಾವಣಗೆರೆಯಲ್ಲಿ ವ್ಯಕ್ತಿಗಳಿಬ್ಬರು ಎಲೆಕ್ಟ್ರಿಕ್ ವಾಹನದಲ್ಲಿ ಸಂಚರಿಸುತ್ತಿರುವುದು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ

‘ಶುರುವಿನಲ್ಲಿ ಕೆಲ ಲೋಕಲ್‌ ಕಂಪನಿಗಳ ದ್ವಿಚಕ್ರ ವಾಹನಗಳು ಕಾರ್ಯಾಚರಣೆಗೆ ಇಳಿದಿದ್ದವು. ಆದ್ದರಿಂದ ಸ್ಕೂಟರ್‌ಗಳಿಗೆ ಬೆಂಕಿ ಹೊತ್ತಿಕೊಳ್ಳುವ, ಬ್ಯಾಟರಿ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ ಎಂಬಂತಾಗಿತ್ತು. ಇದರಿಂದ ಜನರೂ ಇವಿ ಸ್ಕೂಟರ್‌ಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಟಿವಿಎಸ್‌, ಹೀರೊ, ಬಜಾಜ್‌ನಂತಹ ಪ್ರತಿಷ್ಠಿತ ಕಂಪನಿಗಳು ಗುಣಮಟ್ಟದ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಇವು ಗ್ರಾಹಕರಲ್ಲಿನ ಭೀತಿಯನ್ನು ಹೋಗಲಾಡಿಸಿ ಅವರಲ್ಲಿ ಹೊಸ ಭರವಸೆ ಮೂಡಿಸಿವೆ’ ಎಂದು ದಾವಣಗೆರೆಯ ಅಕ್ಷಯ ಟಿವಿಎಸ್‌ನ ಜನರಲ್‌ ಮ್ಯಾನೇಜರ್‌ ಸಂಜೀವ್‌ ಅಂಗಡಿ ಹೇಳುತ್ತಾರೆ. 

ದಾವಣಗೆರೆಯ ರಸ್ತೆಯೊಂದರಲ್ಲಿ ಸಾಗಿದ ಎಲೆಕ್ಟ್ರಿಕ್‌ ಕಾರು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ

‘ಆರಂಭದಲ್ಲಿ ಸ್ಕೂಟರ್‌ಗಳ ಮಾರಾಟ ಪ್ರಮಾಣ ಕಡಿಮೆ ಇತ್ತು. ಈಗ ಜಿಲ್ಲೆಯಲ್ಲಿ ಪ್ರತಿ ತಿಂಗಳು ಒಟ್ಟಾರೆ 300 ರಿಂದ 350 ಇವಿ ಸ್ಕೂಟರ್‌ಗಳು ಮಾರಾಟ ಆಗುತ್ತಿವೆ. ಇವುಗಳನ್ನು ಚಾರ್ಜ್‌ ಮಾಡಲು ಚಾರ್ಜಿಂಗ್‌ ಕೇಂದ್ರಗಳಿಗೇ ಹೋಗಬೇಕೆಂದಿಲ್ಲ. ಮನೆಯಲ್ಲಿನ ನಾರ್ಮಲ್‌ ಪ್ಲಗ್‌ ಮೂಲಕವೇ ಚಾರ್ಜ್‌ ಮಾಡಿಕೊಳ್ಳಬಹುದು. ಈ ಕಾರಣದಿಂದಾಗಿಯೇ ಜನ ಇವಿ ಸ್ಕೂಟರ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ’ ಎಂದೂ ತಿಳಿಸಿದರು. 

ದಾವಣಗೆರೆಯಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಚಾರ್ಜಿಂಗ್‌ ಮಾಡುತ್ತಿರುವುದು  –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ದಾವಣಗೆರೆಯ ರಸ್ತೆಯೊಂದರ ಬದಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ನಿಲುಗಡೆ ಮಾಡಿರುವುದು–ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ಇವಿ ವಾಹನಗಳು ಪರಿಸರ ಸ್ನೇಹಿ ಹಾಗೂ ಬಳಕೆದಾರರ ಸ್ನೇಹಿಯೂ ಆಗಿವೆ. ಜಿಲ್ಲೆಯ 21 ಸ್ಥಳಗಳಲ್ಲಿ ಚಾರ್ಜಿಂಗ್‌ ಸ್ಟೇಷನ್‌ ಆರಂಭಿಸಿದರೆ ವಾಹನ ಬಳಕೆದಾರರಿಗೆ ಹೆಚ್ಚು ಅನುಕೂಲವಾಗಲಿದೆ. 
ಚಿರಂಜೀವಿ ಎಂಸಿಸಿ ‘ಎ’ ಬ್ಲಾಕ್‌ ನಿವಾಸಿ ದಾವಣಗೆರೆ 
ಪೆಟ್ರೋಲ್‌ ಬಂಕ್‌ಗಳ ಹಾಗೆ ಅಲ್ಲಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳೂ ತಲೆ ಎತ್ತಬೇಕು. ಅವುಗಳಲ್ಲಿ ದಿನದ 24 ಗಂಟೆಯೂ ಚಾರ್ಜಿಂಗ್‌ ವ್ಯವಸ್ಥೆ ಲಭ್ಯವಾಗಬೇಕು. ಆಗ ಇವಿ ವಾಹನಗಳನ್ನು ಖರೀದಿಸುವವರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ.
ಸ್ಟೀವನ್‌ ಕುಂದುವಾಡ ನಿವಾಸಿ 

ಜಿಲ್ಲೆಯ 21 ಕಡೆ ಚಾರ್ಜಿಂಗ್‌ ಸ್ಟೇಷನ್‌ 

ಇವಿ ಚಾರ್ಜಿಂಗ್‌ ಕೇಂದ್ರಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಸದ್ಯ ಕರ್ನಾಟಕ ಅಗ್ರ ಸ್ಥಾನ ಹೊಂದಿದೆ. ರಾಜ್ಯದಲ್ಲಿ ಒಟ್ಟು 5765 ಪಾಯಿಂಟ್‌ಗಳಿವೆ. ಈ ಪೈಕಿ ಬೆಂಗಳೂರಿನಲ್ಲೇ 4462 ಇವೆ.  ಬೆಸ್ಕಾಂ ವಿವಿಧ ಖಾಸಗಿ ಸಂಸ್ಥೆಗಳು ಹಾಗೂ ವಾಹನ ತಯಾರಿಕಾ ಕಂಪನಿಗಳು ಇವುಗಳನ್ನು ನಿರ್ಮಿಸಿವೆ. ಮುಂದಿನ ದಿನಗಳಲ್ಲಿ ಮತ್ತೆ 2500 ಚಾರ್ಜಿಂಜ್‌ ಪಾಯಿಂಟ್‌ಗಳನ್ನು ಆರಂಭಿಸುವುದಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 21 ಸ್ಥಳಗಳಲ್ಲಿ ಚಾರ್ಜಿಂಗ್‌ ಪಾಯಿಂಟ್‌ ಸ್ಥಾಪಿಸಲು ನಿರ್ಧರಿಸಲಾಗಿದೆ. 

ಜಿಲ್ಲಾಧಿಕಾರಿ ಕಚೇರಿ ತಾಲ್ಲೂಕು ಕಚೇರಿ ಜಿಲ್ಲಾ ಪಂಚಾಯಿತಿ ಮಿನಿ ವಿಧಾನಸೌಧ ಸರ್ಕಾರಿ ಆಸ್ಪತ್ರೆ ಬಸ್‌ ನಿಲ್ದಾಣ ಹೀಗೆ ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ಸದ್ಯ ಖಾಲಿ ಇರುವ 30X40 ವಿಸ್ತೀರ್ಣದ ಜಾಗಗಳಲ್ಲಿ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. 90 ಕಿಲೊ ವ್ಯಾಟ್‌ ಸಾಮರ್ಥ್ಯದ ಈ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ಬಳಕೆದಾರರ ಹಿತದೃಷ್ಟಿಯಿಂದ ಅನಿರೀಕ್ಷಿತ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅವಧಿಯಲ್ಲೂ ಇಲ್ಲಿ ನಿರಂತರವಾಗಿ ವಿದ್ಯುತ್‌ ಪೂರೈಸಲು ಚಿಂತಿಸಲಾಗಿದೆ. 

‘ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಸರ್ವೆ ನಡೆಸಿ ಚಾರ್ಜಿಂಗ್‌ ಪಾಯಿಂಟ್‌ ಆರಂಭಿಸಲು 21 ಸ್ಥಳಗಳನ್ನು ಗುರುತಿಸಲಾಗಿದೆ. ಸರ್ಕಾರದ ಮುಂದಿನ ಆದೇಶದ ನಂತರ ಇವುಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತದೆ’ ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಎ.ಕೆ.ತಿಪ್ಪೇಸ್ವಾಮಿ ‘‍ಪ್ರಜಾವಾಣಿ’ಗೆ ತಿಳಿಸಿದರು. ‘ಬೆಸ್ಕಾಂ ವತಿಯಿಂದಲೇ ದಾವಣಗೆರೆಯ ಕಚೇರಿ ಬಳಿ ಪ್ರಾಯೋಗಿಕವಾಗಿ ಚಾರ್ಜಿಂಗ್‌ ಸ್ಟೇಷನ್‌ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಇಬ್ಬರು ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದೇವೆ. ಇನ್ನೊಂದು ತಿಂಗಳಲ್ಲಿ ಇದು ಕಾರ್ಯಾರಂಭವಾಗಲಿದೆ’ ಎಂದರು.  ‘ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌)ನಿಂದ ಜಿಲ್ಲೆಯಲ್ಲಿ ಒಟ್ಟು 13 ಕಡೆ ಚಾರ್ಜಿಂಗ್‌ ಸ್ಟೇಷನ್‌ ಆರಂಭಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು. 

ದಾವಣಗೆರೆಯ ರಸ್ತೆಯೊಂದರಲ್ಲಿ ಸಾಗಿದ ಎಲೆಕ್ಟ್ರಿಕ್‌ ಆಟೊ –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ

ಬ್ಯಾಟರಿ ಬದಲಾವಣೆಗೆ ‘ಕಿಯೋಸ್ಕ್‌’ ವ್ಯವಸ್ಥೆ

  ‘ಹೀರೊ ಕಂಪನಿಯ ಇವಿ ಸ್ಕೂಟರ್‌ಗಳಲ್ಲಿ ಗಾಡಿಯಿಂದ ಬ್ಯಾಟರಿ ಹೊರತೆಗೆದು ಅದನ್ನು ಚಾರ್ಜ್‌ ಮಾಡಿ ಮತ್ತೆ ಅಳವಡಿಸಿಕೊಳ್ಳಬಹುದಾದ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಬ್ಯಾಟರಿ ಬದಲಾವಣೆಗಾಗಿ ‘ಕಿಯೋಸ್ಕ್‌’ ವ್ಯವಸ್ಥೆ ಜಾರಿಗೆ ತರುವ ಆಲೋಚನೆಯೂ ಇದೆ’ ಎಂದು ದಾವಣಗೆರೆಯ ಪ‍್ರಕಾಶ್‌ ಮೋಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಘುನಂದನ್‌ ಅಂಬರ್‌ಕರ್‌ ತಿಳಿಸಿದರು. ‘ಅಡುಗೆ ಅನಿಲದ ಸಿಲಿಂಡರ್‌ ಖಾಲಿ ಆದ ಬಳಿಕ ನಾವು ಖಾಲಿ ಸಿಲಿಂಡರ್‌ ನೀಡಿ ಭರ್ತಿಯಾಗಿರುವ ಸಿಲಿಂಡರ್‌ ಪಡೆಯುತ್ತೇವೆ. ಅದೇ ರೀತಿ ಹೀರೊ ಕಂಪನಿಯ ಸ್ಕೂಟರ್‌ ಬಳಕೆದಾರರು ಚಾರ್ಜ್‌ ಖಾಲಿಯಾದ ಬ್ಯಾಟರಿಯನ್ನು ‘ಕಿಯೋಸ್ಕ್‌’ ಕೇಂದ್ರದಲ್ಲಿ ಕೊಟ್ಟು ಅದಕ್ಕೆ ಬದಲಾಗಿ ಚಾರ್ಜ್‌ ಆಗಿರುವ ಬ್ಯಾಟರಿ ಪಡೆಯಬಹುದು. ಇದಕ್ಕೆ ಇಂತಿಷ್ಟ ದರ ನಿಗದಿಪಡಿಸಲಾಗುತ್ತದೆ. ಇದರಿಂದ ಗ್ರಾಹಕರ ಸಮಯ ಉಳಿತಾಯವಾಗಲಿದೆ. ದೂರದ ಊರುಗಳಿಗೆ ಯಾವುದೇ ಆತಂಕವಿಲ್ಲದೇ ಪ್ರಯಾಣ ಮಾಡಬಹುದು’ ಎಂದು ಮಾಹಿತಿ ನೀಡಿದರು. 

‘ಇವಿ ಮಿತ್ರ’ ಆ್ಯಪ್‌

ಬೆಂಗಳೂರಿನಂತಹ ಮಹಾನಗರದಲ್ಲಿ ಇವಿ ಚಾರ್ಜಿಂಗ್‌ ಕೇಂದ್ರಗಳ ಕುರಿತು ಬಳಕೆದಾರರಿಗೆ ಸೂಕ್ತ ಮಾಹಿತಿ ಒದಗಿಸಲು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತವು (ಬೆಸ್ಕಾಂ) ‘ಇವಿ ಮಿತ್ರ’ ಹೆಸರಿನ ಆ್ಯಪ್‌ ಹೊರತಂದಿದೆ. ಇದಕ್ಕೆ ಇತ್ತೀಚೆಗೆ ಹೊಸ ರೂಪವನ್ನೂ ನೀಡಲಾಗಿದೆ.  ಆ್ಯಂಡ್ರಾಯ್ಡ್‌ ಹಾಗೂ ಐಒಎಸ್‌ ಮೊಬೈಸ್‌ ಅಪ್ಲಿಕೇಷನ್‌ಗಳಲ್ಲಿ ಲಭ್ಯವಿರುವ ಈ ಆ್ಯಪ್‌ ಬಳಕೆದಾರರ ಪ್ರೊಫೈಲ್‌ ನಿರ್ವಹಣೆ ಚಾರ್ಜಿಂಗ್‌ ಕೇಂದ್ರಗಳು ಹಾಗೂ ಅವು ಹೊಂದಿರುವ ಸೌಲಭ್ಯಗಳು ಚಾರ್ಜಿಂಗ್‌ ಪ್ರಕ್ರಿಯೆ ಬುಕ್ಕಿಂಗ್ ವಿವರ ಚಾರ್ಜಿಂಗ್‌ಗಾಗಿ ವಾಹನ ಕಾಯ್ದಿರಿಸುವ ಸೌಲಭ್ಯಗಳನ್ನು ಒಳಗೊಂಡಿದೆ.   ಮುಂದಿನ ದಿನಗಳಲ್ಲಿ ದಾವಣಗೆರೆ ಮಂಗಳೂರು ಸೇರಿದಂತೆ ಇತರೆ ಜಿಲ್ಲೆಗಳ  ಬಳಕೆದಾರರಿಗೂ ಇದರ ಪ್ರಯೋಜನ ಸಿಗಲಿದೆ. 

ಒಮ್ಮೆ ಚಾರ್ಜ್‌ ಮಾಡಿ; 100 ಕಿ.ಮೀ ಪ್ರಯಾಣಿಸಿ

  ಇವಿ ಸ್ಕೂಟರ್‌ಗಳನ್ನು ಒಮ್ಮೆ ಚಾರ್ಜ್‌ ಮಾಡಿದರೆ 100 ಕಿ.ಮೀ ಹಾಗೂ ಕಾರು ಹಾಗೂ ಇತರೆ ನಾಲ್ಕು ಚಕ್ರದ ವಾಹನಗಳನ್ನು ಪೂರ್ತಿ ಚಾರ್ಜ್‌ ಮಾಡಿದರೆ 200 ಕಿ.ಮೀವರೆಗೂ ಪ್ರಯಾಣಿಸಬಹುದು. ಒಮ್ಮೆ ಚಾರ್ಜ್‌ ಮಾಡಿ 300 ರಿಂದ 400 ಕಿ.ಮೀ ಸಂಚರಿಸಬಹುದಾದ ಕಾರುಗಳೂ ಈಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಚಾರ್ಜಿಂಗ್‌ಗಾಗಿ ಒಂದು ಯುನಿಟ್‌ಗೆ ಸರಾಸರಿ ₹8 ಖರ್ಚಾಗುತ್ತದೆ. ಸ್ಕೂಟರ್‌ಗಳನ್ನು ಒಮ್ಮೆ ಚಾರ್ಜ್‌ ಮಾಡಿದರೆ 15 ಯುನಿಟ್‌ ವಿದ್ಯುತ್‌ ಖರ್ಚಾಗುತ್ತದೆ. ಇದಕ್ಕೆ ತಗಲುವ ದರ ಅಂದಾಜು ₹120.  ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ವೇಗದ ಚಾರ್ಜಿಂಗ್‌ಗೆ ಬೆಸ್ಕಾಂನಿಂದ ₹7.67 ದರ ನಿಗದಿಪಡಿಸಲಾಗಿದೆ. ನೇರ ಚಾರ್ಜಿಂಗ್‌ (ಡಿಸಿ) ಮತ್ತು ಸಾಮಾನ್ಯ ಚಾರ್ಜಿಂಗ್‌ಗೆ (ಎಸಿ) ಕ್ರಮವಾಗಿ ₹7 ಹಾಗೂ ₹6.86 ದರ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.