ADVERTISEMENT

ಯಡಿಯೂರಪ್ಪ, ಎಚ್‌ಡಿಕೆ ಚರ್ಚೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 6:48 IST
Last Updated 12 ಸೆಪ್ಟೆಂಬರ್ 2020, 6:48 IST
 ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತುಕತೆ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅದು ಸೌಹಾರ್ದ ಭೇಟಿ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರು ನಮ್ಮ ಪಕ್ಷದ ಪ್ರಶ್ನಾತೀತ ನಾಯಕರು.ಅವರಿಗೆ ಯಾವುದೇ ಹಿನ್ನಡೆ ಆಗುತ್ತಿಲ್ಲ. ಅದು ಮಾಧ್ಯಮಗಳ ಸೃಷ್ಟಿ. ಈ ಊಹಾಪೋಹಗಳು ಸತ್ಯಕ್ಕೆ ದೂರವಾದದ್ದು’ ಎಂದು ಹೇಳಿದರು.

‘ಮುಂದಿನ ಮೂರೂವರೆ ವರ್ಷಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ. ಯಾವುದೇ ಊಹಾಪೋಹಗಳಿಗೆ ಅವಕಾಶ ಇಲ್ಲ’ ಎಂದರು.

ಅರ್ಹರಿಗೆ ಮೀಸಲಾತಿ–ಪಕ್ಷದ ನಿಲುವು:‘ಮೀಸಲಾತಿ ವರ್ಗೀಕರಣದ ಬಗ್ಗೆ ಈಗಾಗಲೇ ಹೇಳಿಕೆ ಕೊಟ್ಟಿರುವೆ. ಹಿಂದಿನಿಂದಲೂ ಸಮಾಜದಲ್ಲಿ ಶೋಷಣೆ ಒಳಗಾಗಿದ್ದವರಿಗೆ ಸಾಮಾಜಿಕವಾಗಿ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರಿಯಲು ಮೀಸಲಾತಿ ಅಗತ್ಯ. ಸಮಾಜದಲ್ಲಿ ಕೆಳಗೆ ತಳ್ಳಲ್ಪಟ್ಟವರಿನ್ನು ಮೇಲೆತ್ತಲುಸಂವಿಧಾನದಲ್ಲಿ ಮೀಸಲಾತಿ ಜಾರಿಗೆ ತರಲಾಗಿದೆ. ಮೀಸಲಾತಿ ವ್ಯವಸ್ಥೆಯಲ್ಲಿ ಬರುವ 101 ಜಾತಿಗಳಿಗೆ ಅನ್ಯಾಯ ಆಗಬಾರದು. ಅರ್ಹರಿಗೆ ಮೀಸಲಾತಿ ಸೌಲಭ್ಯ ನೀಡಲು ಬಿಜೆಪಿ ಬದ್ಧ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನೆರೆ ಪರಿಹಾರ ನೀಡಲು ಬದ್ಧ:ಭವಿಷ್ಯದಲ್ಲಿ ಕಂಡು ಕೇಳದಂತ ಪ್ರವಾಹ ಕಳೆದ ಬಾರಿ ಬಂದಿತ್ತು.ಮುಖ್ಯಮಂತ್ರಿ ಯೆಡಿಯೂರಪ್ಪ ಒಬ್ಬರೇ ಇದ್ದರೂ ಇಡಿ ರಾಜ್ಯ ಪ್ರವಾಸ ಮಾಡಿದ್ದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬ ಕೆಲಸ ಕಾರ್ಯಕಾರ್ಯಗಳನ್ನು ಮಾಡಿದ್ದರು.

ಕೇಂದ್ರ ಸರ್ಕಾರದ ನಿಯಮ ಮೀರಿ ಪ್ರತಿ ಹೆಕ್ಟೇರ್‌ಗೆ ₹ 10 ಸಾವಿರ ಪರಿಹಾರ ಘೋಷಿಸಿದ್ದರು.ದೇಶದ ಯಾವುದೇ ರಾಜ್ಯದಲ್ಲಿ ಕೊಡದ ಹೆಚ್ಚಿನ ಪರಿಹಾರ ಯಡಿಯೂರಪ್ಪ ನೀಡಿದ್ದಾರೆ.ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಪರಿಹಾರ ನೀಡಲಾಗಿದೆ. ಈ ಬಾರಿಯೂ ಜಿಲ್ಲಾಧಿಕಾರಿ ವರದಿ ಆಧರಿಸಿ ಪ್ರವಾಹ, ಬೆಳೆಹಾನಿ ಪರಿಹಾರ ನೀಡಲಾಗುವುದು ಎಂದು ಕಾರಜೋಳ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.