
ದಾವಣಗೆರೆ: ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ತೆಂಗು ಬೆಳೆಯನ್ನು ವಿವಿಧ ರೋಗಗಳು ಆವರಿಸಿವೆ. ಈ ಪೈಕಿ ಕಪ್ಪುತಲೆ ಹುಳುವಿನ ಸಮಸ್ಯೆ ತೆಂಗು ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ‘ಕಲ್ಪವೃಕ್ಷ’ ಎಂದು ಕರೆಯಲಾಗುವ ತೆಂಗಿನ ಮರಗಳನ್ನು ರಕ್ಕಸ ಕಪ್ಪುಹುಳುಗಳು ಆಪೋಷನ ತೆಗೆದುಕೊಳ್ಳುತ್ತಿದ್ದು, ರೈತರನ್ನು ನಷ್ಟದ ಕೂಪಕ್ಕೆ ತಳ್ಳಿವೆ.
ಜಿಲ್ಲೆಯಲ್ಲಿ 7,500 ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ಈ ಪೈಕಿ ಅಂದಾಜು 2,500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶವು ಕಪ್ಪುತಲೆ ಹುಳು ಹಾಗೂ ಬಿಳಿನೊಣಗಳ ಸಮಸ್ಯೆ ಎದುರಿಸುತ್ತಿದೆ. ಹರಿಹರ ತಾಲ್ಲೂಕಿನಲ್ಲಿ ಕಪ್ಪುತಲೆ ಹುಳುವಿನ ಸಮಸ್ಯೆ ಅಧಿಕವಾಗಿದೆ. ನಿಟ್ಟೂರು, ಹೊಳೆಸಿರಿಗೆರೆ, ಧೂಳೆಹೊಳೆ, ಕಡರನಾಯ್ಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ತೋಟದ ಮಾಲೀಕರು ಬೆಳೆದು ನಿಂತ ತೆಂಗಿನ ಮರಗಳನ್ನೇ ತೆಗೆದುಹಾಕಿದ್ದಾರೆ.
ಮಳೆಗಾಲ ಹೇಗೋ ಕಳೆಯಿತು. ಆದರೆ ನಿಜವಾದ ಸತ್ವ ಪರೀಕ್ಷೆ ಇರುವುದು ಬೇಸಿಗೆಯಲ್ಲಿ. ಮಳೆಯ ರಭಸಕ್ಕೆ ಕಪ್ಪುಹುಳು ರೋಗ ಅಷ್ಟಾಗಿ ಪಸರಿಸುವುದಿಲ್ಲ. ಇನ್ನೇನು ಬರಲಿರುವ ಬೇಸಿಗೆಯಲ್ಲಿ ಅವುಗಳ ಹಾವಳಿಯನ್ನು ತಡೆಯುವುದು ಸಾಧ್ಯವೇ ಇಲ್ಲದಂತಾಗುತ್ತದೆ. ಗಿಡದಿಂದ ಗಿಡಕ್ಕೆ, ತೋಟದಿಂದ ತೋಟಕ್ಕೆ ವಿಸ್ತರಿಸುವ ಈ ರೋಗ, ಒಂದಿಡೀ ಪ್ರದೇಶದವನ್ನು ತನ್ನ ತೆಕ್ಕೆಗೆ ಪಡೆಯುತ್ತದೆ. ಇದು ಆತಂಕಕ್ಕೀಡು ಮಾಡಿದೆ ಎನ್ನುತ್ತಾರೆ ರೈತರು.
ಏನಿದು ರೋಗ:
ಕಪ್ಪುತಲೆ ಹುಳುಗಳು ತೆಂಗಿನ ಗರಿಯನ್ನು ಆಕ್ರಮಿಸುತ್ತವೆ. ಗರಿಯನ್ನು ತಿನ್ನುತ್ತಾ ಕೊನೆಗೆ ಸುಳಿಯನ್ನೂ ಪ್ರವೇಶಿಸುತ್ತವೆ. ಕ್ರಮೇಣವಾಗಿ ಇಡೀ ಗರಿಯು ಕಂದುಬಣ್ಣಕ್ಕೆ ತಿರುಗಿ ಒಣಗುತ್ತದೆ. ಎಲ್ಲ ಗರಿಗಳೂ ಹೀಗೆ ಒಣಗುವುದರಿಂದ ಗಿಡಕ್ಕೆ ಅಗತ್ಯ ಪೋಷಕಾಂಶಗಳ ಕೊರತೆಯುಂಟಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆ, ಪೋಷಕಾಂಶ ನಿರ್ವಹಣೆಯಂತಹ ವಿಧಾನಗಳನ್ನು ಸೂಚಿಸಲಾಗಿದ್ದರೂ ಅವು ನಿರೀಕ್ಷಿತ ಫಲ ನೀಡಿಲ್ಲ ಎಂಬುದು ರೈತರ ಬೇಸರ.
ಕಪ್ಪುತಲೆ ಹುಳು ನಿಯಂತ್ರಿಸುವ ಪರೋಪಜೀವಿಯನ್ನು ಟ್ಯೂಬ್‌ನಲ್ಲಿ ಇರಿಸಿರುವುದು
ದರ ಏರಿಕೆ ಇಳುವರಿ ಕೊರತೆ
ರೋಗಬಾಧೆಯಿಂದ ತೆಂಗಿನ ಇಳುವರಿ ಗಣನೀಯವಾಗಿ ಕುಸಿದಿದೆ. ಈ ಮೊದಲು ವರ್ಷಕ್ಕೆ 100 ಗಿಡಗಳಿಂದ 10 ಸಾವಿರ ತೆಂಗಿನಕಾಯಿ ಸಿಗುತ್ತಿದ್ದವು. ಈಗ ಎರಡು ಸಾವಿರ ಸಿಗುವುದೂ ದುಸ್ತರವಾಗಿದೆ. ಈ ಮಧ್ಯೆ ಎಳನೀರಿಗೆ ಬೇಡಿಕೆ ಹೆಚ್ಚು ಇರುವುದರಿಂದ ಕಾಯಿ ಲಭ್ಯತೆ ಕಡಿಮೆಯಾಗಿದೆ. ಸಹಜವಾಗಿ ಇದು ತೆಂಗಿನಕಾಯಿ ದರ ಹೆಚ್ಚಳಕ್ಕೆ ಕಾರಣವಾಗಿದೆ. ತೆಂಗಿನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ₹30ರಂತೆ ತೆಂಗಿನಕಾಯಿ ಹಾಗೂ ₹15ರಿಂದ ₹18ರಂತೆ ಎಳನೀರನ್ನು ರೈತರು ತಮ್ಮ ಹೊಲದಲ್ಲೇ ಸಗಟು ದರಕ್ಕೆ ಮಾರುತ್ತಿದ್ದಾರೆ. ತೆಂಗಿನಕಾಯಿ ದರ ಏರುತ್ತಿರುವ ಈ ಹೊತ್ತಿನಲ್ಲಿ ರೋಗ ನಿಯಂತ್ರಣ ಸಾಧ್ಯವಾಗದೇ ಇದರ ಸಹವಾಸವೇ ಸಾಕು ಎಂದು ಮರಗಳಿಗೆ ಕೊಡಲಿ ಹಾಕುವ ರೈತರು ಒಂದೆಡೆಯಾದರೆ ರೋಗದ ಅರಿವಿದ್ದರೂ ದರದ ಆಕರ್ಷಣೆಗೆ ಒಳಗಾಗಿ ಕೆಲವು ರೈತರು ಹೊಸದಾಗಿ ತೆಂಗಿನ ನಾಟಿಯಲ್ಲೂ ತೊಡಗಿರುವ ಯತ್ನಗಳೂ ಜಿಲ್ಲೆಯಲ್ಲಿ ನಡೆದಿವೆ.
ರೋಗಬಾಧಿತ ಪ್ರದೇಶದ ಸಮೀಕ್ಷೆ
ಜಿಲ್ಲೆಯಲ್ಲಿ ಕಪ್ಪುತಲೆ ಹುಳು ಹಾಗೂ ಬಿಳಿ ನೊಣದ ಸಮಸ್ಯೆ ಎದುರಿಸುತ್ತಿರುವ ತೆಂಗಿನ ತೋಟಗಳನ್ನು ಸಮೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 5000ಕ್ಕಿಂತ ಹೆಚ್ಚು ಹೆಕ್ಟೇರ್‌ನಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ‘ಇದೇ 15ರ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದ್ದು ಅಷ್ಟರೊಳಗೆ ಎಲ್ಲ ತೆಂಗು ಬೆಳೆಯುವ ಪ್ರದೇಶವನ್ನು ಸಮೀಕ್ಷೆಗೆ ಒಳಪಡಿಸಿ ನಿಖರ ದತ್ತಾಂಶದಿಂದ ಕೂಡಿದ ವರದಿಯನ್ನು ಸಲ್ಲಿಸಲಾಗುವುದು. ಸಮೀಕ್ಷೆಗೆ ಆ್ಯಪ್ ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಜಿ.ಸಿ. ಮಾಹಿತಿ ನೀಡಿದರು.
ಕಪ್ಪುಹುಳುಗಳನ್ನು ತಿನ್ನುವ ಪರೋಪಜೀವಿ!
ರೋಗ ಹತೋಟಿಗೆ ನೈಸರ್ಗಿಕ ವಿಧಾನ ಉತ್ತಮ ಎಂದು ತೋಟಗಾರಿಕೆ ಇಲಾಖೆ ಪರಿಗಣಿಸಿದೆ. ಗರಿಗಳನ್ನು ತಿನ್ನುವ ಕಪ್ಪುತಲೆ ಹುಳುಗಳನ್ನೇ ತಿಂದುಹಾಕುವ ಪರೋಪಕಾರಿ ಜೀವಿಗಳು (ಕೀಟ) ರೋಗ ನಿಯಂತ್ರಣದಲ್ಲಿ ನೆರವಾಗುತ್ತವೆ. ‘ಗೋನಿಯೋಸಿಸ್ ನೆಫಾಂಟಟಿಸ್’ ಹೆಸರಿನ ಪರೋಪ ಜೀವಿಗಳನ್ನು ತೋಟಗಾರಿಕೆ ಇಲಾಖೆಯು ಸ್ವತಃ ತನ್ನ ಪ್ರಯೋಗಾಲಯಗಳಲ್ಲಿ ಉತ್ಪಾದಿಸಿ ರೈತರಿಗೆ ಉಚಿತವಾಗಿ ಪೂರೈಸುತ್ತಿದೆ. ‘ಸಮಸ್ಯೆಗೆ ಒಳಗಾದ ಪ್ರತೀ ಮರಕ್ಕೆ 15–20 ಪರೋಪ ಜೀವಿ ಕೀಟಗಳನ್ನು ಬಿಡಲಾಗುತ್ತದೆ. ಅವು ನೇರವಾಗಿ ಕಪ್ಪುತಲೆ ಹುಳುಗಳ ಮೇಲೆ ದಾಳಿ ನಡೆಸುತ್ತವೆ. ಅವುಗಳ ಜಾಗದಲ್ಲಿ ಮೊಟ್ಟೆ ಇಟ್ಟು ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡು ಕ್ರಮೇಣ ಕಪ್ಪುತಲೆ ಹುಳುವಿನ ಸಂಖ್ಯೆಯನ್ನು ಮಿತಗೊಳಿಸುತ್ತವೆ. ನೈಸರ್ಗಿಕವಾಗಿ ನಡೆಯುವ ಈ ಪ್ರಕ್ರಿಯೆಯಿಂದ ಒಣಗಿರುವ ತೆಂಗಿನ ಮರವು ಕ್ರಮೇಣ ಚೇತರಿಸಿಕೊಳ್ಳುತ್ತದೆ’ ಎಂದು ದಾವಣಗೆರೆಯ ಪರೋಪಜೀವ ಪ್ರಯೋಗಶಾಲೆಯ ಸಹಾಯಕ ತೋಟಗಾರಿಕೆ ಅಧಿಕಾರಿ ಪವನ್ ಕುಮಾರ್ ಎಚ್.ಎಸ್. ಮಾಹಿತಿ ನೀಡಿದರು.
ಹರಿಹರದಲ್ಲಿ ಪ್ರಯೋಗಾಲಯ–ಪ್ರಸ್ತಾವ ಸಲ್ಲಿಕೆ
‘ದಾವಣಗೆರೆ ನಗರದ ಪಿ.ಬಿ. ರಸ್ತೆಯ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಪರೋಪಜೀವಿ ಉತ್ಪಾದನೆಗೆಂದೇ ಪ್ರತ್ಯೇಕ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದೆ. ಹೊನ್ನಾಳಿಯಲ್ಲಿ ಕಿರು ಪ್ರಯೋಗಾಲಯ ತೆರೆಯಲಾಗಿದೆ. ಕೆಲವು ವರ್ಷಗಳಿಂದ ಈ ಎರಡೂ ಪ್ರಯೋಗಾಲಯಗಳಲ್ಲಿ ಉತ್ಪಾದನೆ ಕಾರ್ಯ ನಡೆಯುತ್ತಿದ್ದು ರೈತರಿಗೆ ಕೀಟಗಳನ್ನು ಒದಗಿಸಲಾಗುತ್ತಿದೆ. ರೈತರಿಂದ ಬೇಡಿಕೆ ಹೆಚ್ಚಿರುವುದರಿಂದ ಹರಿಹರದಲ್ಲಿ ಮತ್ತೊಂದು ಹೊಸ ಪ್ರಯೋಗಾಲಯವನ್ನು ತೆರೆಯುವ ಉದ್ದೇಶವಿದ್ದು ಈ ಬಗ್ಗೆ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಜಿ.ಸಿ. ತಿಳಿಸಿದರು.
ದಾವಣಗೆರೆಯಲ್ಲಿರುವ ಪ್ರಯೋಗಾಲಯ ಈ ಭಾಗದಲ್ಲಿ ತೆಂಗು ಬೆಳೆಗಾರರಿಗೆ ಸಾಕಷ್ಟು ನೆರವಾಗುತ್ತಿದೆ. ಹಾವೇರಿ ರಾಣೆಬೆನ್ನೂರು ಸವಣೂರು ಹಗರಿಬೊಮ್ಮನಹಳ್ಳಿಯಿಂದಲೂ ರೈತರು ದಾವಣಗೆರೆಯ ಪ್ರಯೋಗಾಲಕ್ಕೆ ಬಂದು ಪರೋಪ ಜೀವಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
‘ಬೇರೆ ಭಾಗದ ರೈತರೂ ಬರುವುದರಿಂದ ಜಿಲ್ಲೆಯ ರೈತರಿಗೆ ಅಗತ್ಯ ಸಂಖ್ಯೆಯಷ್ಟು ಪರೋಪ ಜೀವಿಗಳನ್ನು ಪೂರೈಸಲು ಆಗುತ್ತಿಲ್ಲ. ಹೀಗಾಗಿ ಹಾವೇರಿ ಭಾಗದಲ್ಲಿ ಒಂದು ಪ್ರಯೋಗಾಲಯ ನಿರ್ಮಾಣವಾದರೆ ಇಲ್ಲಿನ ಪ್ರಯೋಗಾಲಯದ ಮೇಲಿನ ಒತ್ತಡ ಕಡಿಮೆಯಾಗಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಪರೋಪಜೀವಿಗಳನ್ನು ಇರಿಸಿರುವ 3ರಿಂದ 4 ಟ್ಯೂಬ್‌ಗಳನ್ನು ಇಲಾಖೆ ನೀಡುತ್ತಿದ್ದು ಇದು ಸಾಲುತ್ತಿಲ್ಲ. ಎಲ್ಲ ಸಮಯದಲ್ಲೂ ಟ್ಯೂಬ್ ಲಭ್ಯ ಇರುವುದಿಲ್ಲ. ಇಡೀ ತೋಟಕ್ಕೆ ಪರೋಪಜೀವಿ ಬಿಡಲು ಸಾಧ್ಯವಾಗಿಲ್ಲ– ಎಸ್.ರೇವಣಸಿದ್ದಪ್ಪ, ತೆಂಗು ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.