ದಾವಣಗೆರೆ: ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಸರ್ಕಾರದಿಂದ ಮಾತ್ರವೇ ಸಾಧ್ಯವಿಲ್ಲ. ರೈತರೊಂದಿಗೆ ನಿರಂತರ ಒಡನಾಟ ಹೊಂದಿರುವ ಕೃಷಿ ಪರಿಕರ ಮಾರಾಟಗಾರರು ಕೈಜೋಡಿಸುವ ಅಗತ್ಯವಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಜಿಯಾವುಲ್ಲಾ ಹೇಳಿದರು.
ತಾಲ್ಲೂಕಿನ ಕಾಡಜ್ಜಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಪರಿಕರ ಮಾರಾಟ ಹಾಗೂ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮಾ ವಿದ್ಯಾರ್ಥಿಗಳು ಭಾನುವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೃಷಿ ಪರಿಕರ ಮಾರಾಟದ ಜೊತೆಗೆ ರೈತರಲ್ಲಿ ಅರಿವು ಮೂಡಿಸುವ ಜವಾಬ್ದಾರಿಯೂ ಇದೆ. ಕೀಟನಾಶಕ ಮತ್ತು ರಸಗೊಬ್ಬರ ಬಳಕೆ, ಬೇಸಾಯ ಪದ್ಧತಿಯ ಕುರಿತು ಜಾಗೃತಿ ಮೂಡಿಸಬೇಕು. ಕೃಷಿ ಸಂಬಂಧಿ ಸಂಶೋಧನೆ, ಆವಿಷ್ಕಾರಗಳನ್ನು ರೈತರಿಗೆ ತಲುಪಿಸಬೇಕು’ ಎಂದು ಕಿವಿಮಾತು ಹೇಳಿದರು.
‘ಕೃಷಿಗೆ ಪೂರಕವಾಗಿರುವ ಉದ್ಯಮದಲ್ಲಿ ಲಾಭದ ಉದ್ದೇಶವನ್ನಷ್ಟೇ ಹೊಂದಿದ್ದರೆ ಯಶಸ್ಸು ಕಾಣಲು ಸಾಧ್ಯವಿಲ್ಲ. ಅಗತ್ಯ ಸೇವೆಗೆ ಒತ್ತು ನೀಡಿದರೆ ಲಾಭವೂ ಸಿಗುತ್ತದೆ. ಕೃಷಿ ಕ್ಷೇತ್ರದಲ್ಲಿ ಸುಸ್ಥಿರತೆ ಕಾಪಾಡುತ್ತ ಮೌಲ್ಯಾಧಾರಿತ ಲಾಭ ಗಳಿಸುವತ್ತ ಗಮನ ಹರಿಸಿ’ ಎಂದರು.
‘ಈ ಹಿಂದೆ ಕೃಷಿಗೂ ಮತ್ತು ಬಡತನಕ್ಕೂ ಸಂಬಂಧವಿರಲಿಲ್ಲ. ಕುಟುಂಬದ ಅಗತ್ಯಗಳನ್ನು ರೈತರೇ ಬೆಳೆದುಕೊಳ್ಳುತ್ತಿದ್ದರು. ಸಂತೆಯ ಪರಿಕಲ್ಪನೆ ಕೂಡ ಇರಲಿಲ್ಲ. ನಿತ್ಯ ಜಮೀನಿಂದ ತರುತ್ತಿದ್ದ ಸೊಪ್ಪು, ತರಕಾರಿಯಲ್ಲಿಯೇ ಅಡುಗೆ ಆಗುತ್ತಿತ್ತು. ಕಾಲ ಬದಲಾಗಿದ್ದು, ಜಮೀನಿಗಿಂತ ಮಾರುಕಟ್ಟೆಯ ಮೇಲೆ ಅವಲಂಬನೆ ಹೆಚ್ಚಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯ ಉಪನಿರ್ದೇಶಕ ಆರ್.ತಿಪ್ಪೇಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ರಾಜಶೇಖರಪ್ಪ, ಕೃಷಿ ವಿಜ್ಞಾನಿ ಮಲ್ಲಿಕಾರ್ಜುನ, ತರಬೇತಿ ಕೇಂದ್ರದ ಮುಖ್ಯಸ್ಥ ಗೊಂದಿ ಮಂಜುನಾಥ್, ಪ್ರಾಂಶುಪಾಲ ಜಿ.ಟಿ.ಸುದರ್ಶನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.