ADVERTISEMENT

ನಗದುರಹಿತ ವಹಿವಾಟಿಗೆ ಮುಂದೆ ಬನ್ನಿ: ಜಿ.ಎಂ. ಸಿದ್ದೇಶ್ವರ

‘ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌’ ಶಾಖೆ ಉದ್ಘಾಟಿಸಿದ ಸಂಸದ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 13:58 IST
Last Updated 1 ಸೆಪ್ಟೆಂಬರ್ 2018, 13:58 IST
ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ನ ದಾವಣಗೆರೆ ಶಾಖೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಶನಿವಾರ ಉದ್ಘಾಟಿಸಿದರು
ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ನ ದಾವಣಗೆರೆ ಶಾಖೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಶನಿವಾರ ಉದ್ಘಾಟಿಸಿದರು   

ದಾವಣಗೆರೆ: ‘ಜಿಲ್ಲೆಯ ಪ್ರತಿಯೊಬ್ಬನೂ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐ.ಪಿ.ಪಿ.ಬಿ)ನಲ್ಲಿ ಖಾತೆ ತೆರೆದು ನಗದುರಹಿತ ವಹಿವಾಟು ನಡೆಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.

ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್‌ನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಐಪಿಪಿಬಿಯ ದಾವಣಗೆರೆ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್‌ ಇಂಡಿಯಾ ಯೋಜನೆಯನ್ನು ಜಾರಿಗೆ ತಂದರು. ಇದರ ಪರಿಣಾಮ ಇಂದು ಕಾಗದರಹಿತ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಮನೆ ಬಾಗಿಲಿಗೇ ಬ್ಯಾಂಕ್‌ ಬಂದಿದೆ. ಬಡವರು, ರೈತರು, ಕೂಲಿಕಾರ್ಮಿಕರಿಗೆ ಮೋದಿ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಐಪಿಪಿಬಿಯಲ್ಲಿ ಖಾತೆ ತೆರೆದು ಸರ್ಕಾರದ ಸಬ್ಸಿಡಿ, ಅನುದಾನ ಹಾಗೂ ಫಸಲ್‌ ಬಿಮಾದಂತಹ ಯೋಜನೆಗಳ ಹಣವನ್ನು ಇದರ ಮೂಲಕವೇ ವಹಿವಾಟು ನಡೆಸಬೇಕು. ಅಂಚೆ ಪೇಮೆಂಟ್‌ ಬ್ಯಾಂಕಿನ ಮೂಲಕ ವಹಿವಾಟು ನಡೆಸುವುದರಲ್ಲಿ ರಾಜ್ಯದಲ್ಲಿ ದಾವಣಗೆರೆಯನ್ನು ಮೊದಲ ಸ್ಥಾನಕ್ಕೆ ತರಬೇಕು ಎಂದು ಆಶಿಸಿದರು.

‘ರಾಜ್ಯದ 31 ಶಾಖೆಗಳಲ್ಲಿ ಇಂದು ಐಪಿಪಿಬಿಯನ್ನು ಉದ್ಘಾಟಿಸಲಾಗಿದೆ. ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ 10 ಕಡೆ ಬ್ಯಾಂಕ್‌ಗೆ ಚಾಲನೆ ನೀಡಲಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ದೇಶದ 1.55 ಲಕ್ಷ ಅಂಚೆ ಕಚೇರಿಗಳಲ್ಲೂ ಈ ಸೇವೆ ಲಭ್ಯವಾಗಲಿದೆ. ರಾಜ್ಯದಲ್ಲಿ ಸುಮಾರು 10 ಸಾವಿರ ಅಂಚೆ ಕಚೇರಿಗಳಲ್ಲೂ ಆರಂಭಗೊಳ್ಳಲಿದೆ. ದೇಶದಲ್ಲಿ ಸುಮಾರು 3 ಲಕ್ಷ ಅಂಚೆ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಸೇವೆ ನೀಡಲಿದ್ದಾರೆ’ ಎಂದು ಹೇಳಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ‘ಅಂಚೆ ಪೇಮೆಂಟ್ಸ್‌ ಬ್ಯಾಂಕ್‌ನಿಂದಾಗಿ ಜನಸಾಮಾನ್ಯರಿಗೆ ಮನೆ ಬಾಗಿಲಿನಲ್ಲೇ ವಹಿವಾಟು ನಡೆಸಲು ಅನುಕೂಲವಾಗಲಿದೆ. ಮನೆಯಲ್ಲಿ ಹಣ ಸಂಗ್ರಹಿಸಿಟ್ಟಿದ್ದರೆ ಕಳುವಾಗುವ ಸಾಧ್ಯತೆ ಇದೆ. ಹೀಗಾಗಿ ಖಾತೆ ತೆರೆದು ಹಣ ಉಳಿತಾಯ ಮಾಡಬೇಕು. ಜೊತೆಗೆ ನಿಮಗೆ ಆಗ ಬಡ್ಡಿಯೂ ಸಿಗಲಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶೀಲಾ ಕೆ.ಆರ್‌. ಮಾತನಾಡಿ, ‘ಭಾರತ ಇಂದು ಡಿಜಿಟಲೀಕರಣದತ್ತ ದಾಪುಗಾಲು ಇಡುತ್ತಿದೆ. ಪ್ರಧಾನಿ ಮೋದಿ ಅವರ ಕನಸು ಈಡೇರುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕ ಶಿವರಾಜ ಖಿಂಡೇಮಠ, ‘ಆಧಾರ್‌ ಕಾರ್ಡ್‌ ಸಂಖ್ಯೆ ನೀಡಿ ಬಯೊಮೆಟ್ರಿಕ್‌ ದಾಖಲು ಮಾಡಿದ ತಕ್ಷಣವೇ ಖಾತೆ ತೆರೆದು ಕ್ಯೂಆರ್‌ ಕೋಡ್‌ ಕೊಡಲಾಗುತ್ತದೆ. ಈ ಸೌಲಭ್ಯವನ್ನು ಜನ ಸದ್ಬಳಕೆ ಮಾಡಿಕೊಂಡು ಭಾರತೀಯ ಅಂಚೆಯನ್ನು ಇನ್ನಷ್ಟು ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ದಾವಣಗೆರೆ ಪ್ರಧಾನ ಅಂಚೆ ಕಚೇರಿಯ ಪೋಸ್ಟ್‌ಮಾಸ್ಟರ್‌ ವಿ. ಕೆಂಪಲಕ್ಕಮ್ಮ ಹಾಜರಿದ್ದರು. ಐಪಿಪಿಬಿ ಶಾಖೆಯ ವ್ಯವಸ್ಥಾಪಕಿ ಶಿಲ್ಪಾ ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕ ಶಂಕರಪ್ಪ ನಿರೂಪಿಸಿದರು. ಈಶ್ವರಮ್ಮ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಖಾತೆ ತೆರೆಯಲು ಕೈಕೊಟ್ಟ ಬೆರಳು

ಪ್ರಧಾನಿ ಮೋದಿ ಕಾರ್ಯಕ್ರಮದ ಲೈವ್‌ ಬಳಿಕ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಖಾತೆಯನ್ನು ತೆರೆದು ಕ್ಯೂಆರ್‌ ಕೋಡ್‌ ಕಾರ್ಡ್‌ ವಿತರಿಸಲೆಂದು ಅಂಚೆ ಸಿಬ್ಬಂದಿ ಬಯೊಮೆಟ್ರಿಕ್‌ ಪಡೆಯಲು ಯತ್ನಿಸಿದಾಗ ಕೈಬೆರಳುದಾಖಲಾಗಲಿಲ್ಲ.

ಎಡಗೈನ ಕೆಲವು ಬೆರಳುಗಳನ್ನು ಬಯೊಮೆಟ್ರಿಕ್‌ ರೀಡರ್‌ ಮೇಲೆ ಇಟ್ಟರೂ ಅದು ದಾಖಲಿಸಿಕೊಳ್ಳಲಿಲ್ಲ. ಬೇಸತ್ತ ಸಂಸದರು ಅದನ್ನು ಬಿಟ್ಟು ಭಾಷಣ ಮಾಡಿದರು. ನಂತರ ಪುನಃ ಯತ್ನಿಸಿದರೂ ದಾಖಲಾಗಲಿಲ್ಲ. ಬಲಗೈಗೆ ಹಾಕಿದ್ದ ಬ್ಯಾಂಡೇಜ್‌ ಬಿಚ್ಚಿ ಬೆರಳಚ್ಚನ್ನು ನೀಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೈಬರಳಿನ ಗೆರೆಗಳು ಮಾಸಿ ಹೋಗಿದ್ದರಿಂದ ಬಹುಶಃ ಬೆರಳಚ್ಚು ಮೂಡುತ್ತಿಲ್ಲ ಎಂದು ಅಂಚೆ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.