
ಹೊನ್ನಾಳಿ: ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ– 26ರ ಅಭಿವೃದ್ಧಿ ಕಾಮಗಾರಿ (ಕೆ– ಶಿಪ್) ಪ್ರಗತಿಯಲ್ಲಿದ್ದು, ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಹೆದ್ದಾರಿಯಲ್ಲಿದ್ದ ಅಂದಾಜು 12 ಮಳಿಗೆಗಳ ತೆರವು ಕಾರ್ಯ ಗುರುವಾರ ಆರಂಭವಾಯಿತು.
ಗುರುವಾರ ಸಂಜೆ ಹೊತ್ತಿಗೆ 6 ಮಳಿಗೆಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದ್ದು, ಉಳಿದ 4 ಮಳಿಗೆಗಳನ್ನು ತೆರವುಗೊಳಿಸದೇ ಇರುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಅವರನ್ನು ಪ್ರಶ್ನಿಸಿದಾಗ, ‘ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ 6 ಮಳಿಗೆಗಳನ್ನು ತೆರವುಗೊಳಿಸಿ ಬಿಟ್ಟು ಕೊಡಲಾಗಿದೆ. 4 ಮಳಿಗೆಗಳ ತೆರವು ಕಾರ್ಯ ಅಪೂರ್ಣಗೊಂಡಿದ್ದು, ಈ ಮಳಿಗೆಗಳ ವಿಚಾರಣೆ ಕೋರ್ಟ್‍ನಲ್ಲಿದೆ. ಆದರೆ ಅವುಗಳಿಗೆ ತಡೆಯಾಜ್ಞೆ ಸಿಕ್ಕಿಲ್ಲ. ಆದ್ದರಿಂದ ತೆರವುಗೊಳಿಸಲು ಸ್ವಲ್ಪ ಸಮಯ ಬೇಕಾಗುತ್ತದೆ’ ಎಂದರು.
ಈಗಾಗಲೇ ತಾಲ್ಲೂಕಿನ ತುಮ್ಮಿನಕಟ್ಟೆ ಗಡಿಭಾಗದಿಂದ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಕೊನೆಯ ಹಂತದಲ್ಲಿ ಪಟ್ಟಣದೊಳಗಿನ ರಾಜ್ಯ ಹೆದ್ದಾರಿ ವಿಸ್ತರಣೆ ಕಾರ್ಯಕ್ಕೆ ಕೆ. ಶಿಪ್ ಅಧಿಕಾರಿಗಳು ಮುಂದಾಗಿದ್ದಾರೆ ಎಂದರು.
14 ಮಳಿಗೆಗಳ ತೆರವಿಗೆ ಕೌನ್ಸಿಲ್ ಬಾಡಿ ತೀರ್ಮಾನ: ರಾಜ್ಯ ಹೆದ್ದಾರಿ ವಿಸ್ತರಣೆ ವ್ಯಾಪ್ತಿಯಲ್ಲಿ ಬರುವ 14 ಮಳಿಗೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವ ಕುರಿತು ಈ ಹಿಂದೆ ಇದ್ದ ಕೌನ್ಸಿಲ್ ಬಾಡಿ ತೀರ್ಮಾನಿಸಿತ್ತೇ? ಎಂಬ ಬಗ್ಗೆ ಪ್ರಶ್ನಿಸಿದಾಗ ಅವರು ‘ಹೌದು’ ಎಂದಷ್ಟೇ ಉತ್ತರಿಸಿದರು.
ಉಳಿದ 4 ಮಳಿಗೆಗಳ ತೆರವಿಗೆ ಆಗ್ರಹ: ‘12 ಮಳಿಗೆಳನ್ನು ಸಂಪೂರ್ಣ ತೆರವುಗೊಳಿಸಬೇಕು ಎನ್ನುವ ಕೌನ್ಸಿಲ್ ಬಾಡಿ ತೀರ್ಮಾನಕ್ಕೆ ಪುರಸಭೆಯ ಮುಖ್ಯಾಧಿಕಾರಿ ಬದ್ಧವಾಗಿರಬೇಕು’ ಎಂದು ಮಾಜಿ ಅಧ್ಯಕ್ಷ ರಂಗಪ್ಪ ಹೇಳಿದರು. ‘ಈಗಾಗಲೇ 6 ಮಳಿಗೆಗಳನ್ನು ಸಂಪೂರ್ಣ ತೆರವುಗೊಳಿಸಿದ್ದು, ಉಳಿದ ಮಳಿಗೆಗಳನ್ನು ಬಿಟ್ಟರೆ ಪ್ರಯೋಜನವಿಲ್ಲ. ವಿಶಾಲವಾದ ಬಸ್ ನಿಲ್ದಾಣ ಹಾಗೂ ವಿಶಾಲವಾದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಅಡ್ಡವಾಗಿರುವ ಈ 4 ಮಳಿಗೆಗಳನ್ನು ತೆರವುಗೊಳಿಸಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ’ ಎಂದರು.
‘ಪುರಸಭೆಗೆ ಈಗಾಗಲೇ ₹ 85 ಲಕ್ಷ ಬಿಡುಗಡೆಯಾಗಿದ್ದು, ನಾಲ್ಕು ಮಳಿಗೆಗಳನ್ನು ಉಳಿಸುವುದು ಬೇಡ. ಉಳಿಸುವ ಪ್ರಯತ್ನ ಮಾಡಿದರೆ ಹೋರಾಟ ಮಾಡಲಾಗುವುದು’ ಎಂದು ಹೋರಾಟಗಾರ ಕತ್ತಿಗೆ ನಾಗಣ್ಣ ಹಾಗೂ ಪುರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೊಸಕೇರಿ ಸುರೇಶ್ ತಿಳಿಸಿದರು.
ಅಪಘಾತ ವಲಯವಾಗಲಿದೆ
‘ಈ ನಾಲ್ಕೈದು ಮಳಿಗೆಗಳನ್ನು ತೆರವುಗೊಳಿಸುವುದು ಬೇಡ ಎಂದು ಈ ಹಿಂದೆ ಕೆ– ಶಿಪ್ ವತಿಯಿಂದ ನಡೆದಿದ್ದ ಸಭೆಯಲ್ಲಿ ನಾವು ಸಲಹೆ ನೀಡಿದ್ದೆವು’ ಎಂದು ರಾಜ್ಯ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು. ‘ಈ ಮಳಿಗೆಗಳನ್ನು ತೆರವುಗೊಳಿಸಿದರೆ ಇದು ಅಪಘಾತ ವಲಯವಾಗುತ್ತದೆ. ಎಲ್ಲೆಂದರಲ್ಲಿ ತರಕಾರಿ ಅಂಗಡಿಗಳು ಹಣ್ಣಿನ ಅಂಗಡಿಗಳು ಹಾಗೂ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಹಿಂದೆ ಈ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿದ್ದು ಇದೇ ಕಾರಣಕ್ಕೆ. ಹೀಗಾಗಿ ಈ ಮಳಿಗೆಗಳನ್ನು ಮುಂದಿನ 6 ತಿಂಗಳಲ್ಲಿ ತೆರವುಗೊಳಿಸಿ ಸುಭದ್ರವಾಗಿ ನಿರ್ಮಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.