ADVERTISEMENT

ಕಂಕಣ ಸೂರ್ಯಗ್ರಹಣ: ವೈಚಾರಿಕತೆಗೂ ಬದ್ಧತೆ, ಸಂಪ್ರದಾಯಕ್ಕೂ ಆದ್ಯತೆ

ಕಂಕಣ ಸೂರ್ಯಗ್ರಹಣ: ವೀಕ್ಷಣೆಗೆ ಒತ್ತುಕೊಟ್ಟ ಯುವಜನರು, ಪೂಜೆಗೆ ಶರಣಾದ ಹಿರಿಯರು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 12:08 IST
Last Updated 27 ಡಿಸೆಂಬರ್ 2019, 12:08 IST
ದಾವಣಗೆರೆ ಹೈಸ್ಕೂಲ್‌ ಮೈದಾನದಲ್ಲಿ ಸೂರ್ಯಗ್ರಹಣ ವೀಕ್ಷಣೆ
ದಾವಣಗೆರೆ ಹೈಸ್ಕೂಲ್‌ ಮೈದಾನದಲ್ಲಿ ಸೂರ್ಯಗ್ರಹಣ ವೀಕ್ಷಣೆ   

ದಾವಣಗೆರೆ: ಕಂಕಣ ಸೂರ್ಯಗ್ರಹಣವನ್ನು ವಿದ್ಯಾರ್ಥಿ ಸಮೂಹ ಆಸಕ್ತಿಯಿಂದ ವೀಕ್ಷಿಸಿದರೆ, ಹಿರಿಯರು ಪೂಜೆ, ಹೋಮ, ಪ್ರಾರ್ಥನೆಗಳಿಗೆ ಮೊರೆ ಹೋದರು. ಗ್ರಹಣ ಸಂದರ್ಭದಲ್ಲಿ ಬಹುತೇಕ ದೇವಸ್ಥಾನಗಳು ಬಾಗಿಲು ಮುಚ್ಚಿದ್ದವು.

ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು, ಮನೆಮನೆ ವಿಜ್ಞಾನ ದಾಸೋಹ ಕಾರ್ಯಕ್ರಮ ಬಳಗವು ಹೈಸ್ಕೂಲ್‌ ಮೈದಾನದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ಸೂರ್ಯಗ್ರಹಣ ವೀಕ್ಷಿಸಲು ವಿದ್ಯಾರ್ಥಿಗಳ ದಂಡೇ ಮೆರೆದಿತ್ತು. ಜತೆಗೆ ಒಂದಷ್ಟು ಇತರರು ಗ್ರಹಣ ನೋಡಿ ಸೋಜಿಗಪಟ್ಟರು.

ಡಯಟ್‌ ಉಪನಿರ್ದೇಶಕ ಎಚ್‌.ಕೆ. ಲಿಂಗರಾಜು, ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಇ. ರಂಗಸ್ವಾಮಿ, ಕಾರ್ಯದರ್ಶಿ ಎಂ.ಟಿ. ಶರಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಫಾಲಾಕ್ಷಿ, ವಿಜ್ಞಾನ ಪರಿವೀಕ್ಷಕಿ ವಸಂತಕುಮಾರಿ, ಡಾ.ವಸುಧೇಂದ್ರ ಈ ವೀಕ್ಷಣೆಗೆ ಚಾಲನೆ ನೀಡಿದರು.

ADVERTISEMENT

ಬರೀಗಣ್ಣಿನಲ್ಲಿ ಸೂರ್ಯಗ್ರಹಣ ನೋಡಿದರೆ ಕಣ್ಣಿನ ರೆಟಿನಾಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಸೋಲಾರ್‌ ಫಿಲ್ಟರ್‌ ಕನ್ನಡಕದಲ್ಲಿಯೇ ವೀಕ್ಷಿಸಬೇಕು. ನೇರವಾಗಿ ಬೈನಾಕ್ಯುಲರ್‌ನಲ್ಲಿ ನೋಡಬಾರದು. ಬೈನಾಕ್ಯುಲರ್‌ ಪ್ರೋಜೆಕ್ಟರ್‌ ಮೂಲಕ ನೋಡಬಹುದು. ಟೆಲೆಸ್ಕೋಪ್‌ ಪ್ರೋಜೆಕ್ಟರ್‌ಗಳಲ್ಲಿ ವೀಕ್ಷಿಸಿ. ಆದರೆ ಎಕ್ಸ್‌ರೆ ನೆಗೆಟಿವ್‌ಗಳಲ್ಲಿ ನೋಡಬೇಡಿ ಎಂದು ಡಾ. ವಸುಧೇಂದ್ರ ಸಲಹೆ ನೀಡಿದರು.

ರಂಗಕರ್ಮಿ ಸಿದ್ಧರಾಜು ಅವರು ಮಂಡಕ್ಕಿ ತಂದು ಹಂಚಿ, ವೀಕ್ಷಣೆಗೆ ಸೋಲಾರ್‌ ಫಿಲ್ಟರ್‌ ನೀಡಿ ಹುರಿದುಂಬಿಸಿದರು. ಬ್ರೇಕ್‌ಥ್ರೂ ವಿಜ್ಞಾನ ಸೊಸೈಟಿಯು ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಟೆಲಿಸ್ಕೋಪ್‌ ಮತ್ತು ಸೋಲಾರ್‌ ಫಿಲ್ಟರ್‌ ವ್ಯವಸ್ಥೆ ಮಾಡಿತು. ಸೊಸೈಟಿಯ ಜಿಲ್ಲಾ ಸಂಚಾಲಕ ಮಂಜುನಾಥ್‌ ಎಸ್‌. ಮತ್ತು ಅವರ ತಂಡ ಮೈಕ್‌ ಮೂಲಕ ವಿವರ ನೀಡಿದರು. ತಮಿಳುನಾಡು ವಿಐಟಿಯಲ್ಲಿ 3ನೇ ವರ್ಷದ ಬಿಟೆಕ್‌ ಮಾಡುತ್ತಿರುವ ಎಸ್‌ಎಸ್‌ ಬಡಾವಣೆಯ ನರೇಂದ್ರ ಬೈನಾಕ್ಯುಲರ್‌ನಿಂದ ಸೂರ್ಯನ ನೆರಳನ್ನು ಹಾಯಿಸಿ ಗ್ರಹಣ ತೋರಿಸಿದರು. ನಿವೃತ್ತ ಉಪನ್ಯಾಸಕ ಸರಸ್ವತಿ ನಗರದ ರೇಣುಕಾಪ್ರಸಾದ್‌ ಕಾಗದಕ್ಕೆ ತೂತು ಮಾಡಿ ಬೆಳಕನ್ನು ಇನ್ನೊಂದು ಕಾಗದದ ಮೇಲೆ ಹಾಯಿಸಿ ಬೆಳಕಿನಾಟ ತೋರಿಸಿದರು. ಕೆಲವರು ಎಕ್ಸ್‌ರೆ ನೆಗೆಟಿವ್‌ನಲ್ಲಿ ನೋಡುವುದೂ ಕಂಡುಬಂತು.

ಮೋಡ ಇಲ್ಲದ ಕಾರಣ ದಾವಣಗೆರೆಯಲ್ಲಿ ಗ್ರಹಣ ವೀಕ್ಷಣೆಗೆ ಯಾವುದೇ ಅಡ್ಡಿ ಉಂಟಾಗಿಲ್ಲ. ಆನೆಕೊಂಡ ಶಾಲೆಯಲ್ಲಿ ಸುತ್ತಮುತ್ತಲಿನ 15 ಶಾಲೆಗಳ ಮಕ್ಕಳಿಗೆ ಗ್ರಹಣ ವೀಕ್ಷಣೆಗೆ ಕೆ.ಸಿ. ಬಸವರಾಜ್‌ ವ್ಯವಸ್ಥೆ ಮಾಡಿದ್ದರು. ಇದೇ ರೀತಿ ಮೋತಿ ವೀರಪ್ಪ ಶಾಲೆಯಲ್ಲಿ ಮಹಾದೇವಮ್ಮ, ಎಸ್‌ಪಿಎಸ್‌ ನಗರದಲ್ಲಿ ಅಂಬಣ್ಣ, ಎಂಇಎಸ್‌ ಬಿಎಡ್‌ ಕಾಲೇಜಿನಲ್ಲಿ ಮಂಜುನಾಥ ಕುಂಬಾರ್‌, ಆವರಗೆರೆ ಶಾಲೆಯಲ್ಲಿ ಎಸ್‌.ಬಿ. ಶಿಲ್ಪಾ, ಡಿಆರ್‌ಆರ್‌ನಲ್ಲಿ ಸುನೀತಾ, ಎಲೆ ಬೇತೂರಿನಲ್ಲಿ ಷಡಕ್ಷರಪ್ಪ ಸೂರ್ಯಗ್ರಹಣ ನೋಡಲು ವ್ಯವಸ್ಥೆ ಮಾಡಿದ್ದರು.

ದೇವಸ್ಥಾನ, ಅಂಗಡಿ ಬಂದ್‌, ಸಂಚಾರ ವಿರಳ:

ಗ್ರಹಣ ಮುಗಿಯುವವರೆಗೆ ನಗರದ ಬಹುತೇಕ ದೇವಸ್ಥಾನಗಳಿಗೆ ಬೀಗ ಹಾಕಲಾಗಿತ್ತು. ನಗರದೇವತೆ ದುರ್ಗಾಂಬಿಕಾ ದೇವಸ್ಥಾನ, ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬೆಳಿಗ್ಗೆ 11.30ರ ನಂತರ ಬೀಗ ತೆಗೆಯಲಾಯಿತು. ಬಳಿಕ ಭಕ್ತರು ಬಂದು ಪೂಜೆ ಸಲ್ಲಿಸಿದರು.

ಗ್ರಹಣ ಮುಗಿಯುವವರೆಗೆ ಬಹುತೇಕ ಅಂಗಡಿಗಳು ಕೂಡ ಮುಚ್ಚಿದ್ದವು. ಅಲ್ಲೊಂದು ಇಲ್ಲೊಂದು ಬೆರಳೆಣಿಕೆಯ ಹೋಟೆಲ್‌ಗಳು ತೆರೆದಿದ್ದವು. ವಾಹನ ಸಂಚಾರ ಕೂಡ ಈ ಸಮಯದಲ್ಲಿ ಕಡಿಮೆಯಾಗಿತ್ತು. ಕೆಲವು ಮನೆಗಳಲ್ಲಿ ಈ ಸಮಯದಲ್ಲಿ ಮನೆಯಿಂದ ಹೊರಗೆ ಬಾರದೆ ಒಳಗೇ ಕುಳಿತಿದ್ದರು. ಗ್ರಹಣ ಮುಕ್ತಾಯಗೊಂಡ ಬಳಿಕ ಹಲವರು ಮನೆಯಲ್ಲಿದ್ದ ನೀರನ್ನು ಚೆಲ್ಲಿದರು.

ವಿವಿಧ ದೇವಸ್ಥಾನಗಳಲ್ಲಿ ಗ್ರಹಣ ಮುಗಿದ ಬಳಿಕ ಗ್ರಹಣ ದೋಷ ಪರಿಹಾರ ಹೋಮ, ಹವನಗಳು, ಪೂಜೆಗಳು ನಡೆದವು.

ವ್ಯಾಪಾರವಾಗದ ಐಸ್‌ಕ್ರೀಂ

ಹೈಸ್ಕೂಲ್‌ ಮೈದಾನದಲ್ಲಿ ಜನ ಸೇರಿರುವುದನ್ನು ಕಂಡ ಎಸ್‌ಪಿಎಸ್‌ ನಗರದ ನಾಗರಾಜ್‌ ಅವರು ಐಸ್‌ಕ್ರೀಂ ಮಾರಾಟ ಮಾಡಲು ಬಂದಿದ್ದರು. ಗ್ರಹಣ ವೀಕ್ಷಕರಲ್ಲಿ ಹೆಚ್ಚಿನವರು ವೈಚಾರಿಕ ಮನೋಭಾವದವರೇ ಇದ್ದರೂ ಚಳಿಗಾಲದಲ್ಲಿ ಐಸ್‌ಕ್ರೀಂ ತಿಂದು ಆರೋಗ್ಯ ಕೆಡಿಸಿಕೊಳ್ಳಲು ತಯಾರಿರಲಿಲ್ಲ. ಅವರೆಲ್ಲ ಮಂಡಕ್ಕಿ ತಿನ್ನುವುದಕ್ಕೆ ಸೀಮಿತರಾದರು. ಹಾಗಾಗಿ ಐಸ್‌ಕ್ರೀಂ ವ್ಯಾಪಾರವಾಗಲಿಲ್ಲ.

ಸೋಲಾರ್‌ ಫಿಲ್ಟರ್‌ ಕನ್ನಡಕ ಕಳವು

ಸೂರ್ಯಗ್ರಹಣ ವೀಕ್ಷಣೆಗೆ ನೀಡಲು ಎಂದು ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಗುರುಸಿದ್ಧಸ್ವಾಮಿ ಚೀಲದಲ್ಲಿ ತಂದಿಟ್ಟಿದ್ದ ಸೋಲಾರ್‌ ಫಿಲ್ಟರ್‌ಗಳನ್ನೇ ಯಾರೋ ಎಗರಿಸಿದ್ದರು. ಇದರಿಂದ ಸೋಲಾರ್‌ ಫಿಲ್ಟರ್‌ಗಳು ಕೊರತೆಯಾದವರು. ಟೆಲೆಸ್ಕೋಪ್‌ನಲ್ಲಿ ನೋಡಲು ಸರತಿಯಲ್ಲಿ ನಿಂತಂತೆ ಸೋಲಾರ್‌ ಫಿಲ್ಟರ್‌ನಲ್ಲಿ ನೋಡಲೂ ನಿಲ್ಲಬೇಕಾಯಿತು.

ಹುಟ್ಟಿದ ಹಬ್ಬ ಆಚರಣೆ

ನಿಟುವಳ್ಳಿ ನಿಂಚನ ಸ್ಕೂಲ್‌ನ 8ನೇ ತರಗತಿಯ ವಿದ್ಯಾರ್ಥಿ, ಮೌನೇಶ್ವರ ಬಡಾವಣೆಯ ಎಚ್‌.ಎಂ. ವಿಶ್ವನಾಥ್‌ ಗ್ರಹಣ ಸಮಯದಲ್ಲಿಯೇ ಹೈಸ್ಕೂಲ್‌ ಮೈದಾನದಲ್ಲಿ ಕೇಕ್‌ ಕತ್ತರಿಸಿ ಸ್ನೇಹಿತರಿಗೆ ತಿನ್ನಿಸಿ, ತಾನೂ ತಿಂದು ಹುಟ್ಟಿದ ಹಬ್ಬ ಆಚರಿಸಿದನು.

‘ಇಂದು ನನ್ನ ಹುಟ್ಟಿದ ಹಬ್ಬ. ಆದರೆ ಗ್ರಹಣವಾಗಿರುವುದರಿಂದ ಇಂದು ಬೇಡ ಎಂದು ನಿನ್ನೆ ಸಂಜೆಯೇ ಆಚರಿಸಲು ತಂದೆ ಕೊಟ್ರೇಶಪ್ಪ ತಿಳಿಸಿದ್ದರು. ಆದರೆ ಚಿಕ್ಕಪ್ಪ ವಿಶ್ವನಾಥ್‌ ಅವರು ಅದೆಲ್ಲ ಮೌಢ್ಯ. ಇಂದು ಆಚರಿಸಿದರೆ ಏನು ಆಗುವುದಿಲ್ಲ ಎಂದು ತಿಳಿದರು. ಅದಕ್ಕೆ ತಂದೆಯೂ ಒಪ್ಪಿಕೊಂಡಿದ್ದರಿಂದ ಕೇಕ್‌ ಕತ್ತರಿಸಿದ್ದೇವೆ’ ಎಂದು ಎಚ್‌.ಎಂ. ವಿಶ್ವನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.