ADVERTISEMENT

ಜಿ.ಎಂ. ಶುಗರ್ಸ್ ಕಂಪನಿ ಮೇಲೆ ದೂರು ದಾಖಲು: ಎಸ್‌.ಆರ್‌. ಹಿರೇಮಠ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 5:12 IST
Last Updated 12 ಜನವರಿ 2022, 5:12 IST
ಎಸ್‌.ಆರ್‌. ಹಿರೇಮಠ್
ಎಸ್‌.ಆರ್‌. ಹಿರೇಮಠ್   

ದಾವಣಗೆರೆ: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಜಿ.ಎಂ. ಶುಗರ್ಸ್ ಮತ್ತು ಎನರ್ಜಿ ಲಿಮಿಟೆಡ್ ಅನಧಿಕೃತವಾಗಿ ಕಟ್ಟಡ ಕಲ್ಲು ತೆಗೆದಿರುವ ಬಗ್ಗೆ ಹಾವೇರಿಯ ಭೂ ವಿಜ್ಞಾನ ಇಲಾಖೆಯು ಹಿರೇಕರೂರು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದೆ. ಇದು ಸಮಾಜ ಪರಿವರ್ತನ ಸಮುದಾಯ ಹಾಗೂ ಸಮಾನ ಮನಸ್ಕ ಸಂಘಟನೆಗಳ ಹೋರಾಟದ ಫಲ ಎಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ್ ತಿಳಿಸಿದರು.

ಕಂದಾಯ, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡವು ನವಂಬರ್ 8, 2021ರಂದು ಜಂಟಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಅದರಂತೆ ಈ ಕ್ರಮ ಜರುಗಿಸಲಾಗಿದ್ದು, ಇದು ಹೋರಾಟಕ್ಕೆ ಸಂದ ಮೊದಲ ಜಯ. ಆದರೆ, ಇಲಾಖೆಯ ಅಧಿಕಾರಿಗಳು ಈ ಪ್ರಕರಣವನ್ನು ನಿಧಾನಗತಿಯಲ್ಲಿ ಕೊಂಡ್ಯೊಯುತ್ತಿದ್ದಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಜಿ.ಎಂ. ಶುಗರ್ಸ್ ಕಂಪನಿ ಅನಧಿಕೃತವಾಗಿ ಗಣಿಗಾರಿಕೆಯಿಂದ ತೆಗೆದ ಖನಿಜವನ್ನು ವಿವಿಧ ನಮೂನೆ ಜಿಲ್ಲೆಯಾಗಿ ಮಾರ್ಪಡಿಸಿ ದಾಸ್ತಾನು ಮಾಡಿದ್ದನ್ನು ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆದೇಶದಂತೆ ಅಕ್ರಮ ಕಲ್ಲು ಮತ್ತು ಜಿಲ್ಲಿಯನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಸ್ವಾಧೀನ ಪಡೆಸಿಕೊಂಡಿರುವ 16,080 ಮೆಟ್ರಿಕ್ ಟನ್ ಜಲ್ಲಿ ಮತ್ತು 980 ಮೆಟ್ರಿಕ್ ಟನ್ ಕಟ್ಟಡ ಕಲ್ಲನ್ನು ಹರಾಜು ಮೂಲಕ ವಿಲೇವಾರಿ ಮಾಡಬೇಕು. ಕಂಪನಿಯವರು ಕಲ್ಲು ತೆಗೆಯಲು ಅನುಮತಿ ಪಡೆದಿರುವ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶದಲ್ಲಿ ಅನಧಿಕೃತವಾಗಿ ಉಪಖನಿಜ ತೆಗೆದು ಸಾಗಾಣಿಕೆ ಮಾಡಿರುವ ಪ್ರಮಾಣವನ್ನು ಡ್ರೋನ್‌ ಸಮೀಕ್ಷೆ ನಡೆಸುವ ಮೂಲಕ ಅಂದಾಜಿಸಬೇಕು. ಆ ಪ್ರಮಾಣಕ್ಕೆ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮದಂತೆ ಕಾಂಪೌಂಡಿಂಗ್ ಶುಲ್ಕ ಮತ್ತು ರಾಜಧನವನ್ನು ಸಂಗ್ರಹಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಜಿ.ಎಂ. ಶುಗರ್ ಕಂಪನಿ ಮುಖ್ಯಸ್ಥರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಆಗಿರುವ ನಷ್ಟಕ್ಕೆ ಪೈಸ ಪೈಸ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲ ಆನೀಷ್ ಪಾಷಾ, ಸಮಾಜ ಪರಿವರ್ತನ ಸಮುದಾಯದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಿ. ಹಾವೇರಿ, ಆಡಳಿತ ಮಂಡಳಿ ಸದಸ್ಯ ನಾಗಪ್ಪ ಸಿ. ದೊಡ್ಡಮನಿ, ಲಂಚಮುಕ್ತ ಕರ್ನಾಟಕದ ಮಾಲತೇಶ್, ಹುಸೇನ್ ಸಾಬ್ ಹಸನ್ ಸಾಬ್ ಬಿಲ್ಲಾಳ್ಳಿ ಅವರೂ ಇದ್ದರು.

ರೈತ ವಿರೋಧಿ ಕಾಯ್ದೆ ರದ್ದು ಮಾಡಿ

ರೈತರು ಒಂದು ವರ್ಷ ಹೋರಾಟ ಮಾಡಿದ ಬಳಿಕ ಕೇಂದ್ರ ಸರ್ಕಾರವು ಮೂರು ಕರಾಳ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್‌ ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಕೂಡ ಮೂರು ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಜಾರಿ ಮಾಡಿದ್ದು, ಅವುಗಳನ್ನು ಕೂಡ ವಾಪಸ್‌ ಪಡೆಯಬೇಕು ಎಂದು ಎಸ್‌.ಆರ್. ಹಿರೇಮಠ್ ಒತ್ತಾಯಿಸಿದರು.

ಭೂಸುಧಾರಣಾ ಕಾಯ್ದೆ, ಕರ್ನಾಟಕ ಗೋ ಹತ್ಯಾ ತಡೆ ಮತ್ತು ಸಂರಕ್ಷಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿದೆ. ಕೃಷಿ ಸೇವೆಗಳು ಹಾಗೂ ಬೆಲೆ ಭರವಸೆ ಒಪ್ಪಂದ ಕಾಯ್ದೆ, ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆಗಳು ಎಪಿಎಂಸಿಯಡಿ ಬರುತ್ತವೆ. ಅವೆಲ್ಲವನ್ನು ಸರ್ಕಾರ ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದರೆ ಜನಾಂದೋಲನಗಳ ಮಹಾಮೈತ್ರಿ, ಸಿಟಿಜನ್ ಫಾರ್ ಡೆಮಾಕ್ರಸಿ ಹಾಗೂ ಸಮಾನ ಮನಸ್ಕ ಸಂಘಟನೆಗಳೊಂದಿಗೆ ರಾಜ್ಯದಾದ್ಯಂತ ಜನಾಂದೋಲನ ರೂಪಿಸಲಾಗುವುದು. ಜಾಥಾ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.