ADVERTISEMENT

ಹುಬ್ಬಳ್ಳಿ | ಕಾಂಪೋಸ್ಟ್ ಯಂತ್ರ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 8:43 IST
Last Updated 24 ಜೂನ್ 2020, 8:43 IST
   

ಹುಬ್ಬಳ್ಳಿ: ಬೆಂಗಳೂರು ಮೂಲದ ‘ಗ್ರೀನ್ ರಿಸೈಕ್ಲೊ ಪ್ಲಾಸ್ಟ್’ ಕಂಪನಿ ಅಭಿವೃದ್ಧಿಪಡಿಸಿರುವ ಕಾಂಪೋಸ್ಟ್ ಯಂತ್ರದ ಪ್ರಾತ್ಯಕ್ಷಿಕೆ ನಗರದ ಮುನವಳ್ಳಿ ಪಾಲಿಟೆಕ್ನಿಕ್‌ನಲ್ಲಿ ಬುಧವಾರ ಜರುಗಿತು.

ಕಂಪನಿಯ ಪಾಲುದಾರ ಎಂ.ಡಿ. ರವಿ ಮಾತನಾಡಿ, ‘ಪ್ಲಾಸ್ಟಿಕ್, ಕಬ್ಬಿಣ, ರಬ್ಬರ್‌ನಂತಹ ವಸ್ತುಗಳನ್ನು ಹೊರತುಪಡಿಸಿ ಹೋಟೆಲ್, ಹಾಸ್ಟೆಲ್, ಕಲ್ಯಾಣ ಮಂಟಪ, ಮಾರುಕಟ್ಟೆಗಳ ತ್ಯಾಜ್ಯವನ್ನು ಈ ಯಂತ್ರದಿಂದ ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಬಹುದಾಗಿದೆ’ ಎಂದರು.

‘100 ಕೆ.ಜಿ.ಯಿಂದ ಒಂದು ಟನ್ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. 100 ಕೆ.ಜಿ. ಸಾಮರ್ಥ್ಯದ ಯಂತ್ರಕ್ಕೆ ತ್ಯಾಜ್ಯ ಹಾಕಿದರೆ, 14ರಿಂದ 24 ತಾಸಿನಲ್ಲಿ 25ರಿಂದ 30 ಕೆ.ಜಿ ಗೊಬ್ಬರ ತಯಾರಾಗಲಿದೆ. ತ್ಯಾಜ್ಯಕ್ಕೆ ಪೂರಕವಾಗಿ ಕಟ್ಟಿಗೆ ಪುಡಿಯನ್ನು ಹಾಕಬೇಕು’ ಎಂದು ಹೇಳಿದರು.

ADVERTISEMENT

‘ಶಬ್ದ ಮಾಡದ, ದುರ್ವಾಸನೆ ಬೀರದ ಈ ಯಂತ್ರ ಪರಿಸರ ಸ್ನೇಹಿಯಾಗಿದೆ. 100 ಕೆ.ಜಿ ಸಾಮರ್ಥ್ಯದ ಯಂತ್ರಕ್ಕೆ ₹7.5 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಯಂತ್ರಗಳ ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆ ಇದೆ. ಸದ್ಯ ಬೆಂಗಳೂರಿನ ಕೆಲ ಕಲ್ಯಾಣ ಮಂಟಪಗಳಿಗೆ ಯಂತ್ರಗಳನ್ನು ಮಾರಾಟ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ‘ಸಂಸ್ಥೆ ವತಿಯಿಂದ ಯಂತ್ರ ಖರೀದಿಸಲು ಚಿಂತನೆ ನಡೆಸಲಾಗಿದೆ. ಗೊಬ್ಬರವನ್ನು ಕ್ಯಾಂಪಸ್‌ನ ಉದ್ಯಾನಗಳಿಗೆ ಬಳಸಿಕೊಳ್ಳಲಾಗುವುದು’ ಎಂದರು.

ಪ್ರಾಚಾರ್ಯರಾದ ಡಾ. ಪ್ರಕಾಶ ತೇವರಿ, ವೀರೇಶ ಅಂಗಡಿ, ಡಾ. ಎಂ.ಐ. ಪಟ್ಟಣಶೆಟ್ಟಿ, ವಿ.ಆರ್. ವಾಘಮೋಡೆ, ಪ್ರೊ. ವೆಂಕಟೇಶ ಸಣಗೌಡರ, ಎಂ.ಆರ್. ಪಾಟೀಲ ಹಾಗೂ ಬಿಜೆಪಿ ಮುಖಂಡ ವಿಜಯಾನಂದ ಹೊಸಕೋಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.