ದಾವಣಗೆರೆ: ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಈ ತುಷ್ಟೀಕರಣ ನಿಲ್ಲಿಸದೇ ಇದ್ದರೆ ಹಿಂದೂ ಸಮಾಜ ಕಾಂಗ್ರೆಸ್ ಸರ್ವನಾಶ ಮಾಡಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.
‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅಲ್ಪಸಂಖ್ಯಾತರು ಮಾತ್ರವೇ ಮತ ಹಾಕಿಲ್ಲ. ಹಿಂದೂಗಳು ಕಾಂಗ್ರೆಸ್‌ಗೆ ಮತ ಹಾಕಿದ್ದರಿಂದ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಹಿಂದೂಗಳ ಹಿತ ಕಾಪಾಡುವ ಬದಲು ತುಷ್ಟೀಕರಣ ಮಾಡುತ್ತಿದ್ದಾರೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ತೂರಾಟ, ಸಾಗರದಲ್ಲಿ ಉಗುಳುವ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಿಂದೂ ಹಬ್ಬಗಳನ್ನು ಮಾತ್ರವೇ ಹೀಗೆ ಅವಮಾನಿಸಲಾಗುತ್ತಿದೆ. ಶಾಂತಿಯಿಂದ ಬದುಕುವ ಹಿಂದೂಗಳ ಸಹನೆಗೂ ಮಿತಿ ಇದೆ. ಹಿಂದೂ ದೇವರಿಗೆ ಅವಮಾನ ಮಾಡಿದವರ ಮನೆಗಳಿಗೆ ನುಗ್ಗುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಲ್ಲು ತೂರಾಟ ಮಾಡಿದವರ ಜೊತೆಗೆ ಪ್ರತಿಭಟನೆ ನಡೆಸಿದ ಹಿಂದುತ್ವದ ಕಾರ್ಯಕರ್ತರ ವಿರುದ್ಧವೂ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿದ್ದು ಸರಿಯಲ್ಲ. ಶೀಘ್ರವೇ ಮದ್ದೂರಿಗೆ ಭೇಟಿ ನೀಡಿ ಹಿಂದುತ್ವದ ಕಾರ್ಯಕರ್ತರಿಗೆ ಕಾನೂನು ನೆರವು ನೀಡಲಿದ್ದೇವೆ. ಕಾಂಗ್ರೆಸ್, ಪೊಲೀಸ್ ಹಾಗೂ ನ್ಯಾಯಾಲಯದಿಂದ ನ್ಯಾಯ ಸಿಗುವ ಭರವಸೆ ಕಮರಿ ಹೋಗಿದೆ’ ಎಂದು ತಿಳಿಸಿದರು.
‘ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದುಕೊಟ್ಟ ಬಾನು ಮುಷ್ತಾಕ್ ಅಭಿನಂದನೀಯರು. ಆದರೆ, ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಅರ್ಹತೆ ಅವರಲ್ಲಿಲ್ಲ. ಮುಸ್ಲಿಂ ಮಹಿಳೆಯೊಬ್ಬರು ದಸರಾ ಉದ್ಘಾಟನೆ ಮಾಡುವುದನ್ನು ಒಪ್ಪುವುದಿಲ್ಲ. ದಸರಾ ಧಾರ್ಮಿಕ ಕಾರ್ಯಕ್ರಮವೇ ಹೊರತು ಸರ್ಕಾರಿ ಉತ್ಸವವಲ್ಲ. ಹಿಂದೂಗಳ ಭಾವನೆ ಕೆಣಕಿ ಪಾವಿತ್ರ್ಯತೆ ಹಾಳು ಮಾಡಬೇಡಿ’ ಎಂದರು.
ಶ್ರೀರಾಮ ಸೇನೆಯ ಉತ್ತರ ಪ್ರಾಂತ್ಯದ ಗೌರವಾಧ್ಯಕ್ಷರಾದ ಸತ್ಯ ಪ್ರಮೋದೇಂದ್ರ ಸ್ವಾಮೀಜಿ, ಅಧ್ಯಕ್ಷ ರವಿ ಗೋಕಿಟ್ಕರ್, ದಕ್ಷಿಣ ಪ್ರಾಂತ್ಯದ ಅಧ್ಯಕ್ಷ ಬಾಬಣ್ಣ, ಕಾರ್ಯಾಧ್ಯಕ್ಷ ಸುಂದರೇಶ್ ಕರೆಗಲ್, ಜಿಲ್ಲಾ ಘಟಕದ ಅಧ್ಯಕ್ಷ ಮಣಿ ಸರ್ಕಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.