ADVERTISEMENT

ಹರಿಹರ ನಗರಸಭೆ ಅತಂತ್ರ: ಮೈತ್ರಿಗೆ ಒಲಿಯಲಿದೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 31 ಮೇ 2019, 6:34 IST
Last Updated 31 ಮೇ 2019, 6:34 IST
ಹರಪನಹಳ್ಳಿ ಪುರಸಭೆಯ 27 ಸ್ಥಾನಗಳ ಪೈಕಿ 14ರಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸದಸ್ಯರು ಅಭಿಮಾನಿಗಳೊಂದಿಗೆ ಶುಕ್ರವಾರ ವಿಜಯೋತ್ಸವ ಆಚರಿಸಿದರು.
ಹರಪನಹಳ್ಳಿ ಪುರಸಭೆಯ 27 ಸ್ಥಾನಗಳ ಪೈಕಿ 14ರಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸದಸ್ಯರು ಅಭಿಮಾನಿಗಳೊಂದಿಗೆ ಶುಕ್ರವಾರ ವಿಜಯೋತ್ಸವ ಆಚರಿಸಿದರು.   

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ನಡೆದಿದ್ದ ಎರಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಪಕ್ಷಗಳೇ ಮೇಲುಗೈ ಸಾಧಿಸಿವೆ. ಹರಪನಹಳ್ಳಿ ಪುರಸಭೆ ಅಧಿಕಾರ ಕಾಂಗ್ರೆಸ್‌ಗೆ ಒಲಿದಿದೆ. ಹರಿಹರ ನಗರಸಭೆ ಅತಂತ್ರವಾಗಿದ್ದು, ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಪಕ್ಷಗಳು ಆಡಳಿತ ನಡೆಸುವುದು ಬಹುತೇಕ ನಿಶ್ಚಿತವಾಗಿದೆ.

ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯಿಂದಾಗಿ ಜಿಲ್ಲೆಯಲ್ಲೂ ಭಾರಿ ಪ್ರಮಾಣದಲ್ಲಿ ಮತದಾರರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಆದರೆ, ಸ್ಥಳೀಯ ಚುನಾವಣೆಯಲ್ಲಿ ‘ಕಮಲ’ ಪಕ್ಷದ ಮೇಲೆ ‘ಮೋದಿ ಅಲೆ’ ಹೆಚ್ಚಿನ ಪ್ರಭಾವ ಬೀರಿಲ್ಲ ಎಂಬುದು ಫಲಿತಾಂಶದಿಂದ ಗೊತ್ತಾಗುತ್ತದೆ.

ಹರಪನಹಳ್ಳಿ ಪುರಸಭೆಯ 27 ಸ್ಥಾನಗಳ ಪೈಕಿ ಕಾಂಗ್ರೆಸ್‌ 14 ಸ್ಥಾನಗಳಲ್ಲಿ ಗೆದ್ದು ಸರಳ ಬಹುಮತದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಿತು. ಬಿಜೆಪಿ 10 ಸ್ಥಾನ ಗಳಿಸಿದರೆ, ಜೆಡಿಎಸ್‌ ಒಂದು ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.

ADVERTISEMENT

ಕಳೆದ ಬಾರಿ ಫಲಿತಾಂಶ ಅತಂತ್ರವಾಗಿತ್ತು. ಮೊದಲ ಅವಧಿಗೆ ಕಾಂಗ್ರೆಸ್‌ ಅಧಿಕಾರ ಹಿಡಿದಿದ್ದರೆ, ಎರಡನೇ ಅವಧಿಗೆ ಬಿಎಸ್‌ಆರ್‌ ಕಾಂಗ್ರೆಸ್‌ ನೆರವಿನೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಈ ಬಾರಿ ಕಾಂಗ್ರೆಸ್‌ ಸ್ವತಂತ್ರವಾಗಿಯೇ ಅಧಿಕಾರ ಹಿಡಿಯುತ್ತಿದೆ.

ಹರಿಹರ ನಗರಸಭೆ ಅತಂತ್ರ: 31 ವಾರ್ಡ್‌ಗಳನ್ನು ಹೊಂದಿರುವ ಹರಿಹರ ನಗರಸಭೆಯ ಫಲಿತಾಂಶ ಈ ಬಾರಿಯೂ ಅತಂತ್ರವಾಗಿದೆ. 14 ಸ್ಥಾನಗಳೊಂದಿಗೆ ಜೆಡಿಎಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ 10 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ ಕೇವಲ 5 ಸ್ಥಾನಗಳನ್ನು ಪಡೆದಿದೆ. ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ.

ಕಳೆದ ಬಾರಿ ಜೆಡಿಎಸ್‌ ಬೆಂಬಲದೊಂದಿಗೆ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿಯೂ ಮೈತ್ರಿ ಪಕ್ಷವಾದ ಜೆಡಿಎಸ್‌–ಕಾಂಗ್ರೆಸ್‌ ಆಡಳಿತ ನಡೆಸುವುದು ಬಹುತೇಕ ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.