
ಹೊನ್ನಾಳಿಯ ಗುರುಭವನದಲ್ಲಿ ಬಿಎಲ್‍ಎ–2 ಕಾರ್ಯಾಗಾರವನ್ನು ಎಂ.ಪಿ. ರೇಣುಕಾಚಾರ್ಯ, ಪಿ.ರಾಜೀವ್ ಉದ್ಘಾಟಿಸಿದರು
ಹೊನ್ನಾಳಿ: ‘ಸ್ವಾತಂತ್ರ್ಯದ ನಂತರ ನಡೆದ ಎಲ್ಲಾ ಸಾರ್ವತ್ರಿಕ ಚುನಾವಣೆಗಳಲ್ಲೂ ಕಾಂಗ್ರೆಸ್ ಹಣಬಲ, ತೋಳ್ಬಲ, ಹೆಂಡದ ಬಲದಲ್ಲಿಯೇ ಮತ ಪಡೆದು ಅಧಿಕಾರ ಚಲಾಯಿಸಿದೆ. ಮತಗಳ್ಳತನ ಮಾಡಿರುವುದು ಕಾಂಗ್ರೆಸ್ಸಿಗರೇ ಹೊರತು ಬಿಜೆಪಿ ಅಲ್ಲ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಶನಿವಾರ ಗುರುಭವನದಲ್ಲಿ ತಾಲ್ಲೂಕು ಬಿಜೆಪಿ ಘಟಕದಿಂದ ಏರ್ಪಡಿಸಿದ್ದ ಬಿಎಲ್‍ಎ–2 ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ರಾಹುಲ್ ಗಾಂಧಿ ಈಗ ಬಿಜೆಪಿ ಮತಗಳ್ಳತನ ಮಾಡಿ ಅಧಿಕಾರ ಹಿಡಿದಿದೆ ಎಂದು ಆರೋಪಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ ಯಾವ ರೀತಿ ಮತದಾನ ನಡೆಯುತ್ತಿತ್ತು ಎಂದು ಒಮ್ಮೆ ಹಿಂತಿರುಗಿ ನೋಡಲಿ ಎಂದು ಆಕ್ರೋಶ ಹೊರಹಾಕಿದರು.
ಮತದಾರರ ಪರಿಷ್ಕರಣೆ ಕಾರ್ಯಾಗಾರ ನಡೆಯುತ್ತಿದ್ದು, ಏಜೆಂಟರುಗಳು ಬೂತ್ ಮಟ್ಟದಲ್ಲಿ ಮತದಾರರ ಹೆಸರು ಕೈ ಬಿಟ್ಟಿದ್ದರೆ ಸೇರಿಸುವುದು, ಮೃತಪಟ್ಟಿದ್ದರೆ ಡಿಲಿಟ್ ಮಾಡಿಸುವುದು ಹಾಗೂ ಹೊಸದಾಗಿ ಸೇರ್ಪಡೆ ಮಾಡಿಸುವ ಕೆಲಸ ಮಾಡಬೇಕು. ಇವರು ಜವಬ್ದಾರಿಯಿಂದ ಈ ಕೆಲಸ ಮಾಡಿದರೆ ನಮ್ಮ ಪಕ್ಷಕ್ಕೆ ಗೆಲುವಿನ ಹಾದಿ ಸುಲಭವಾಗಲಿದೆ ಎಂದರು.
ನ. 3 ರಂದು ಪ್ರತಿಭಟನೆ; ಅವಳಿ ತಾಲ್ಲೂಕುಗಳಲ್ಲಿ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ. ಜೊತೆಗೆ ಅರ್ಹ ಫಲಾನುಭವಿಗಳ ಪಡಿತರ ಚೀಟಿ ರದ್ದು ಮಾಡುತ್ತಿರುವುದನ್ನು ಖಂಡಿಸಿ ನ. 3 ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮಾತನಾಡಿ, ಜಿಎಸ್‍ಟಿ ಬಂದ ಮೇಲೆ ರಾಜ್ಯ ಸರ್ಕಾರಕ್ಕೆ ತೆರಿಗೆ ಹಾಕಲಿಕ್ಕೆ ಅಧಿಕಾರವಿರಲಿಲ್ಲ. ಅದಕ್ಕೆ ಅವರು ಸೆಸ್ ಮೂಲಕ ತೆರಿಗೆ ಹಾಕಿ ಲೂಟಿ ಮಾಡುತ್ತಿದ್ದರು. ರಾಜ್ಯದಲ್ಲಿ ಅತಿವೃಷ್ಟಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅವರಿಗೆ ಪರಿಹಾರ ನೀಡಿಲ್ಲ, ಆದರೆ, ಮಹಾರಾಷ್ಟ್ರ ಸರ್ಕಾರ ರೈತರಿಗೆ ₹ 31 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಿದೆ ಎಂದರು.
ವಿಜಯಪುರ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಈರುಳ್ಳಿಯನ್ನು ಯಥೇಚ್ಛವಾಗಿ ಬೆಳೆದಿದ್ದು, ಮಳೆಯಿಂದಾಗಿ ಬೆಳೆ ಹಾಳಾಗಿದೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಸಿಗುತ್ತಿಲ್ಲ, ಆದರೆ, ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಎಂಎಸ್‍ಪಿ ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ಇನ್ನೂ ಖರೀದಿ ಕೇಂದ್ರಗಳನ್ನೇ ತೆರದಿಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್, ನೆಲಹೊನ್ನೆ ಮಂಜುನಾಥ್ ಮಾತನಾಡಿದರು.
ಅರಕೆರೆ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಜೆ.ಕೆ. ಸುರೇಶ್, ಮಾರುತಿನಾಯ್ಕ್, ಶಿವಪ್ರಕಾಶ್, ಎಸ್.ಎಸ್. ಬೀರಪ್ಪ, ಮಂಜುನಾಥ್ ಕೊನಾಯಕನಹಳ್ಳಿ, ರಂಗಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.