ದಾವಣಗೆರೆ: ‘ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿ, ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಕಸಿದುಕೊಂಡಿದೆ’ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನುಮಂತು ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶದಲ್ಲಿ ಮಾತನಾಡಿದ ಅವರು, ‘ಈಗಾಗಲೇ ₹11,400 ಕೋಟಿ ಅನುದಾನ ಕಿತ್ತುಕೊಂಡಿರುವ ರಾಜ್ಯ ಸರ್ಕಾರ ಮತ್ತೆ ₹ 14,000 ಕೋಟಿಗೆ ಕಣ್ಣು ಹಾಕಿದೆ’ ಎಂದು ಆರೋಪಿಸಿದರು.
‘ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಸಲಾಯಿತು. ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ, ಧರಣಿ ಸತ್ಯಾಗ್ರಹ ನಡೆಸಲಾಯಿತು. ಬಸವರಾಜ ಬೊಮ್ಮಾಯಿ ಅವರು ಎಸ್ಟಿ ಮೀಸಲಾತಿಯನ್ನು ಶೇ. 3ರಿಂದ ಶೇ 7ಕ್ಕೆ ಹೆಚ್ಚಿಸಿದರು. ಬಿ.ಎಸ್. ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿ, ಭವನಗಳ ನಿರ್ಮಾಣ, ಪ್ರತ್ಯೇಕ ಸಚಿವಾಲಯ ಪ್ರಾರಂಭಿಸುವ ಮೂಲಕ ಪರಿಶಿಷ್ಟ ವರ್ಗಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.
‘ವಾಲ್ಮೀಕಿ ನಾಯಕ ಸಮಾಜದ ವೀರಮದಕರಿನಾಯಕ, ಭರಮಪ್ಪ ನಾಯಕ ಅವರು ದಾವಣಗೆರೆ-ಚಿತ್ರದುರ್ಗ ಜಿಲ್ಲೆಯಲ್ಲಿ ಹಲವಾರು ಕೆರೆಗಳ ಕಟ್ಟಿಸಿದವರು. ನಾಯಕ ಸಮಾಜ ಯಾವಾಗಲೂ ಬಿಜೆಪಿಗೆ ಬೆಂಬಲಿಸುತ್ತಾ ಬಂದಿದೆ. ಲೋಕಸಭಾ ಚುನಾವಣೆಯಲ್ಲೂ ಮತ್ತೆ ಮೋದಿಯವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡಿ ದೇಶವನ್ನ ರಕ್ಷಿಸೋಣ. ಅದಕ್ಕೆ ನಾಯಕ ಸಮಾಜ ಮತ್ತೆ ಕೈ ಜೋಡಿಸಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಮನವಿ ಮಾಡಿದರು.
ಪ್ರಾಸ್ತಾವಿಕ ಮಾತುಗಳಾಡಿದ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ‘ಬಿಜೆಪಿ ಪರಿಶಿಷ್ಟ ವರ್ಗಗಳವರ ಸಮಗ್ರ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ತಿಳಿಸುವ ಜೊತೆಗೆ ಪ್ರಧಾನಿ ಅವರೊಂದಿಗೆ ನಿಲ್ಲುವ ಸಂದೇಶ ಸಾರುವ ಉದ್ದೇಶದಿಂದ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ ನಡೆಸಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಒಳಗೊಂಡಂತೆ ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
ಶಾಸಕರಾದ ಹೇಮಲತಾ ನಾಯಕ, ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಮಾಡಾಳ್ ವಿರೂಪಾಕ್ಷಪ್ಪ, ಎ.ಎಚ್. ಶಿವಯೋಗಿಸ್ವಾಮಿ, ಎಂ. ಬಸವರಾಜನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಲ್ ಕುಮಾರ್ ನಾಯ್ಕ, ಎಸ್ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಕೃಷ್ಣಕುಮಾರ್, ರಾಜ್ಯ ಉಪಾಧ್ಯಕ್ಷ ಅನಿಲ್‌ಕುಮಾರ್, ವಾದಿರಾಜ್, ಜಿ.ಎಸ್. ಶ್ಯಾಮ್, ಮಣಿಕಂಠ, ಕೆ.ಬಿ. ಕೊಟ್ರೇಶ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.