ADVERTISEMENT

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್‌ ಚೇತನ್‌ಗೆ ಅಂತಿಮನಮನ

ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 9:06 IST
Last Updated 25 ಆಗಸ್ಟ್ 2021, 9:06 IST
ಚನ್ನಗಿರಿ ತಾಲ್ಲೂಕಿನ ಮಲಹಾಳ್ ಗ್ರಾಮದಲ್ಲಿ ಮೃತ ಚೇತನ್‌ಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಂಗಳವಾರ ಅಂತಿಮ ನಮನ ಸಲ್ಲಿಸಿದರು (ಎಡಚಿತ್ರ). ಚೇತನ್ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ.
ಚನ್ನಗಿರಿ ತಾಲ್ಲೂಕಿನ ಮಲಹಾಳ್ ಗ್ರಾಮದಲ್ಲಿ ಮೃತ ಚೇತನ್‌ಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಂಗಳವಾರ ಅಂತಿಮ ನಮನ ಸಲ್ಲಿಸಿದರು (ಎಡಚಿತ್ರ). ಚೇತನ್ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ.   

ಚನ್ನಗಿರಿ: ದಾವಣಗೆರೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಸೋಮವಾರ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟ ಕಾನ್‌ಸ್ಟೆಬಲ್ ಆರ್. ಚೇತನ್ ಅವರ ಮೃತದೇಹ ಸ್ವಂತ ಗ್ರಾಮ ಮಲಹಾಳ್‌ಗೆ ಬಂದಾಗ ಕುಟುಂಬ ವರ್ಗವದವರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿತ್ತು.

ಚೇತನ್ ಅವರ ಪಾರ್ಥಿವ ಶರೀರವನ್ನು ಸರ್ಕಾರಿ ವಾಹನದಲ್ಲಿ ಮಂಗಳವಾರ ಬೆಳಿಗ್ಗೆ ಗ್ರಾಮಕ್ಕೆ ತರುತ್ತಿದ್ದಂತೆ ಮನೆಯ ಮುಂದೆ ಕುಟುಂಬದವರು ಹಾಗೂ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಸೇರಿ ಅಂತಿಮ ನಮನ ಸಲ್ಲಿಸಿದರು. ಚೇತನ್‌ ಇಡೀ ಗ್ರಾಮಕ್ಕೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಅವರ ಪಾರ್ಥಿವ ಶರೀರವನ್ನು ಟ್ರ್ಯಾಕ್ಟರ್‌ನಲ್ಲಿಟ್ಟು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮಸ್ಥರು ತಮ್ಮ ತಮ್ಮ ಮನೆಗಳ ಮುಂದೆ ನಿಂತು ಅಂತಿಮ ದರ್ಶನ ಪಡೆದುಕೊಂಡರು.

1992ರಲ್ಲಿ ಮಲಹಾಳ್ ಗ್ರಾಮದಲ್ಲಿ ಜನಿಸಿದ್ದ ಚೇತನ್ ಅವರಿಗೆ ಈಗ 29 ವರ್ಷ ವಯಸ್ಸು. ಮದುವೆಯಾಗಿ ಮೂರು ವರ್ಷಗಳಾಗಿತ್ತು. ಕೆಲಸಕ್ಕೆ ಸೇರಿ 7 ವರ್ಷಗಳಾಗಿದ್ದವು. ಅವರಿಗೆ ಗರ್ಭಿಣಿ ಪತ್ನಿ, 2 ವರ್ಷದ ಮಗ
ಇದ್ದಾನೆ.

ADVERTISEMENT

ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಐಜಿಪಿ ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಡಿವೈಎಸ್‌ಪಿ ಬಸವರಾಜ್, ಸಿಪಿಐ ಮಧು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಂತರ ಸರ್ಕಾರಿ ಗೌರವಗಳೊಂದಿಗೆ ಚೇತನ್ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.