ADVERTISEMENT

ಹೊನ್ನಾಳಿ: ಅಡ್ಡ ರಸ್ತೆಗಳ ಒತ್ತುವರಿ, ಸಂಚಾರಕ್ಕೆ ಅಡೆತಡೆ

ಒಂದು ರಸ್ತೆಯಲ್ಲಿ ಎರಡು ದೊಡ್ಡ ವಾಹನಗಳು ಮುಖಾಮುಖಿಯಾದರೆ ಗಲಾಟೆ ಗ್ಯಾರಂಟಿ

ಎನ್.ಕೆ.ಆಂಜನೇಯ
Published 26 ನವೆಂಬರ್ 2021, 4:14 IST
Last Updated 26 ನವೆಂಬರ್ 2021, 4:14 IST
ದುರ್ಗಿಗುಡಿ 6ನೇ ಕ್ರಾಸ್‍ನಿಂದ 7ನೇ ಕ್ರಾಸ್‌ಗೆ ಬರುವ ಅಡ್ಡ ರಸ್ತೆಯಲ್ಲಿ ಶೆಡ್ ನಿರ್ಮಾಣ ಮಾಡಿರುವುದು (ಎಡಚಿತ್ರ). ದುರ್ಗಿಗುಡಿ 2ನೇ ಕ್ರಾಸ್‍ನಿಂದ ಮೂರನೇ ಕ್ರಾಸ್‌ಗೆ ಹೋಗುವ ಅಡ್ಡ ರಸ್ತೆಯಲ್ಲಿ ಎರಡೂ ಮನೆಯವರು ಗೋಡೆ ನಿರ್ಮಿಸಿಕೊಂಡಿರುವುದು.
ದುರ್ಗಿಗುಡಿ 6ನೇ ಕ್ರಾಸ್‍ನಿಂದ 7ನೇ ಕ್ರಾಸ್‌ಗೆ ಬರುವ ಅಡ್ಡ ರಸ್ತೆಯಲ್ಲಿ ಶೆಡ್ ನಿರ್ಮಾಣ ಮಾಡಿರುವುದು (ಎಡಚಿತ್ರ). ದುರ್ಗಿಗುಡಿ 2ನೇ ಕ್ರಾಸ್‍ನಿಂದ ಮೂರನೇ ಕ್ರಾಸ್‌ಗೆ ಹೋಗುವ ಅಡ್ಡ ರಸ್ತೆಯಲ್ಲಿ ಎರಡೂ ಮನೆಯವರು ಗೋಡೆ ನಿರ್ಮಿಸಿಕೊಂಡಿರುವುದು.   

ಹೊನ್ನಾಳಿ: 40 ವರ್ಷಗಳಿಂದ ಅಸ್ತಿತ್ವದಲ್ಲಿರುವ ದುರ್ಗಿಗುಡಿ ಬಡಾವಣೆಯಲ್ಲಿ ಸಂಚಾರ ಸಮಸ್ಯೆ ತೀವ್ರವಾಗಿದೆ.

ಆರಂಭದಲ್ಲಿ ರೈತರು ಉಳುಮೆ ಮಾಡುತ್ತಿದ್ದ ತಮ್ಮ ಜಮೀನುಗಳನ್ನೇ ಭೂ ಪರಿವರ್ತನೆ ಮಾಡಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಮೂಲಕ ಈ ಬಡಾವಣೆಯ ಹುಟ್ಟಿಗೆ ಕಾರಣರಾದರು. ತಾಲ್ಲೂಕಿನ ಉದ್ಯೋಗಸ್ಥರು, ಹಳ್ಳಿಗಳಿಂದ ಪಟ್ಟಣಕ್ಕೆ ಹೋಗಿ ಒಂದಿಷ್ಟು ಸಂಪಾದನೆ ಮಾಡಿಟ್ಟುಕೊಂಡವರು ನಿವೇಶನ ಕೊಂಡವರೇ ಹೆಚ್ಚು. ಹೀಗೆ ನಿವೇಶನ ಪಡೆದುಕೊಂಡವರು ನಿಧಾನವಾಗಿ ಮನೆ ಕಟ್ಟಲು ಶುರು ಮಾಡಿದರು. ಆಗ ಈ ದುರ್ಗಿಗುಡಿ ಬಡಾವಣೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ಯಾರೂ ಎಣಿಸಿರಲಿಕ್ಕಿಲ್ಲ.

ಇದೀಗ ದುರ್ಗಿಗುಡಿ ಉತ್ತರ ಭಾಗ ಮತ್ತು ದಕ್ಷಿಣ ಭಾಗ ಎಂದು ವಿಭಾಗಿಸಲಾಗಿದೆ. ಒಟ್ಟು ನಾಲ್ಕು ವಾರ್ಡ್‌ಗಳನ್ನಾಗಿ ವಿಂಗಡಿಸಲಾಗಿದೆ. ದುರ್ಗಿಗುಡಿ ದಕ್ಷಿಣ ಭಾಗದಲ್ಲಿ ಒಟ್ಟು 13 ರಸ್ತೆಗಳು ಇವೆ. ಇಲ್ಲಿಯ ನಿವಾಸಿಗಳು ಒಂದು ರಸ್ತೆಯಿಂದ ಮನೆಯ ಹಿಂಭಾಗದ ಅಥವಾ ಮುಂಭಾಗದ ರಸ್ತೆಗೆ ಹೋಗಬೇಕಾದರೆ ಯಾವುದಾದರೂ ಓಣಿ ಬಳಸಿ ಹೋಗಬೇಕು. ವಾಹನಗಳಾದರೆ ದುರ್ಗಿಗುಡಿ ಹಿರೇಮಠ ರಸ್ತೆಯಿಂದ ಸಾರ್ವಜನಿಕ ಆಸ್ಪತ್ರೆಗೆ ತೆರಳುವ ಮುಖ್ಯ ರಸ್ತೆಗೆ ಹೋಗಿಯೇ ಬರಬೇಕು. ಏಕೆಂದರೆ ಇವುಗಳಿಗೆ ಅಡ್ಡ ರಸ್ತೆಗಳು ಇಲ್ಲ. ಇದ್ದರೂ ಅವುಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎನ್ನುವ ದೂರು ಇಲ್ಲಿಯ ನಿವಾಸಿಗಳಿಂದ ಕೇಳಿಬರುತ್ತಿದೆ.

ADVERTISEMENT

‘ಮನೆ ಕಟ್ಟಲು ಅನುಮತಿ ಕೊಡುವಾಗ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಭಾಗದಲ್ಲಿ ಸರ್ವೆ ಮಾಡದೇ ಮನೆ ಕಟ್ಟಲು ಅನುಮತಿ ನೀಡಿದ್ದಾರೆ. ಆಗ ಟೌನ್ ಪ್ಲಾನಿಂಗ್‌ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಅನುಮತಿ ಕೊಟ್ಟಿರುವುದರುಂದ ಮನೆ ಕಟ್ಟುವವರು ಕೆಲವರು ರಸ್ತೆ ಒತ್ತುವರಿ ಮಾಡಿದ್ದಾರೆ’ ಎಂದು ಮಾಜಿ ಸೈನಿಕ ಎಂ. ವಾಸಪ್ಪ ಆರೋಪಿಸುತ್ತಾರೆ.

‘ಮನೆ ನಿರ್ಮಾಣ ಮಾಡುವವರು ರಸ್ತೆಗಳಿಗೆ ಕಡಿಮೆ ಜಾಗವನ್ನು ಮೀಸಲಿಟ್ಟರು. ಮನೆ ನಿರ್ಮಾಣಕ್ಕೆ ಅನುಮತಿ ಕೊಡುವಾಗಲೇ ರಸ್ತೆಗೆ 30 ಅಡಿ ಜಾಗ ಬಿಡಿ ಎಂದು ಹೇಳಿದ್ದರೆ ಈಗ ರಸ್ತೆಗಳು ಕಿರಿದಾಗುತ್ತಿರಲಿಲ್ಲ. ಅಡ್ಡ ರಸ್ತೆಗಳು ಬರುವ ಕಡೆಗಳಲ್ಲಿ ಶೆಡ್ ನಿರ್ಮಾಣವಾಗುತ್ತಿರಲಿಲ್ಲ’ ಎನ್ನುತ್ತಾರೆ ಎಂ. ವಾಸಪ್ಪ.

ಆಗಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇದ್ಯಾವುದನ್ನೂ ಕೇಳುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಈ ಭಾಗದಲ್ಲಿ 8 ಅಡಿಯಿಂದ 12 ಅಡಿ, ಹೆಜ್ಜೆಂದರೆ 15 ಅಡಿ ಇರಬಹುದು. ಇವುಗಳಲ್ಲಿ ಬಹುತೇಕ 8ರಿಂದ 12 ಅಡಿ ಅಗಲದ ರಸ್ತೆಗಳೇ ಹೆಚ್ಚು. ಒಂದೋ ಎರಡೋ ರಸ್ತೆಗಳು ಮಾತ್ರ 10ರಿಂದ 15 ಅಡಿ ಇರಬಹುದು. 30, 40 ವರ್ಷಗಳ ಹಿಂದೆ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಈ ಸಮಸ್ಯೆ ಕಂಡು ಬರಲಿಲ್ಲ. ಆದರೆ ಈಗ ನಾಲ್ಕೈದು ಮನೆಗಳಿಗೊಂದು ಕಾರು ಇದೆ. ಅವರೆಲ್ಲರೂ 10, 12 ಅಡಿ ಅಗಲವಿರುವ ರಸ್ತೆಗಳಲ್ಲಿಯೇ ಅಂದರೆ ತಮ್ಮ ಮನೆ ಮುಂಭಾಗದಲ್ಲಿ ಕಾರುಗಳನ್ನು ನಿಲುಗಡೆ ಮಾಡಿ ಹೋಗುತ್ತಾರೆ. ಈ ರಸ್ತೆಗಳಲ್ಲಿ ಯಾವುದಾದರೂ ಒಂದು ಕಾರು ರಸ್ತೆ ಪ್ರವೇಶ ಮಾಡಿದರೆ ಮುಗಿಯಿತು. ಈ ಕಾರು ರಸ್ತೆಯ ಕೊನೆ ತಲುಪಿ ಬೇರೆಡೆ ತಿರುಗಿದಾಗ ಮಾತ್ರ ಇನ್ನೊಂದು ಕಾರು ಅದೇ ರಸ್ತೆಗೆ ಪ್ರವೇಶ ಮಾಡಬಹುದು. ಒಂದು ವೇಳೆ ಗೊತ್ತಿಲ್ಲದೇ ಕಾರು ಅಥವಾ ಸಣ್ಣಪುಟ್ಟ ಲಾರಿಗಳು ಮುಖಾಮುಖಿಯಾದರೆ ಮುಗಿಯಿತು. ಇಬ್ಬರೂ ಹಿಂದಕ್ಕೆ ಚಲಿಸದೇ ಕದನಕ್ಕೆ ಮುಂದಡಿ ಇಡುತ್ತಾರೆ. ಇಂತಹ ನೂರಾರು ಗಲಾಟೆಗಳು ಇಲ್ಲಿ
ನಡೆದಿವೆ.

ಈಚೆಗೆ ಶಾಸಕರ ಕಾರು ದುರ್ಗಿಗುಡಿಯ ಕಿರಿದಾದ ರಸ್ತೆಯಲ್ಲಿ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿತ್ತು. ಅದು ಸಾಕಷ್ಟು ವೈರಲ್ ಕೂಡ ಆಗಿತ್ತು. ಇಂಥದ್ದೇ ಸಮಸ್ಯೆ ಇಲ್ಲಿ ನಿತ್ಯ ನಡೆಯುತ್ತವೆ.

ಈ ಭಾಗದ ನಾಗರಿಕರು ಹೇಳುವುದೇನೆಂದರೆ, ‘ಈ ಭಾಗದಲ್ಲಿ ಅಲ್ಲಲ್ಲಿ ಅಡ್ಡ ರಸ್ತೆಗಳು ಇವೆ. ಆದರೆ ಅವುಗಳನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಅಂಥವುಗಳನ್ನು ಗುರುತಿಸಿ ತೆರವುಗೊಳಿಸಿದರೆ ಅಲ್ಲಲ್ಲಿ ಅಡ್ಡ ರಸ್ತೆಗಳನ್ನು ನಿರ್ಮಿಸಬಹುದು. ಇದರಿಂದ ದೂರದ ಸಂಚಾರಕ್ಕೆ ಕಡಿವಾಣ ಬೀಳುತ್ತದೆ. ಪಾದಚಾರಿಗಳು ಮೈಲುದ್ದುದ ದಾರಿ ಕ್ರಮಿಸುವುದು ತಪ್ಪುತ್ತದೆ. ಕಾರು ಇತರ ವಾಹನಗಳು ಗಲಾಟೆ, ಗದ್ದಲವಿಲ್ಲದೇ ತಮ್ಮ ದಾರಿ ನೋಡಿಕೊಳ್ಳುತ್ತವೆ’.

‘ದುರ್ಗಿಗುಡಿ 6 ಮತ್ತು 7ನೇ ಕ್ರಾಸ್‌ನಲ್ಲಿ ಪುರಸಭೆಗೆ ಸೇರಿದ 30 ಅಡಿ ರಸ್ತೆ ಇದೆ. ಅಲ್ಲಿ ಶೆಡ್ ಹಾಕಿಕೊಂಡಿರುವುದು ನಿಜ. ಈ ಸಂಬಂಧ ತೆರವುಗೊಳಿಸುವಂತೆ ಈ ಹಿಂದೆಯೇ ಹೇಳಿದ್ದರೂ, ಅವರು ತೆರವುಗೊಳಿಸಿಲ್ಲ. ಈ ಭಾಗದಲ್ಲಿರುವ ಅಡ್ಡ ರಸ್ತೆಗಳಿಗೆ ಈ ಹಿಂದೆಯೇ ಅಸೆಸ್‍ಮೆಂಟ್ ನಂಬರ್ ಕೊಟ್ಟಿದ್ದಾರೆ. ಆದರೆ ಇವುಗಳಿಗೆ ಖಾತೆ ಪುಸ್ತಕಗಳೇ ಇಲ್ಲ (ಡಿಮ್ಯಾಂಡ್ ರಿಜಿಸ್ಟರ್ ಬುಕ್)’ ಎಂದು ಪುರಸಭಾ ಸದಸ್ಯೆ ಸವಿತಾ ಮಹೇಶ್ ಹುಡೇದ್
ತಿಳಿಸಿದರು.

ರಸ್ತೆ ಒತ್ತುವರಿಯಾಗಿದ್ದರೆ ಕ್ರಮ

ದುರ್ಗಿಗುಡಿ ಬಡಾವಣೆಯಲ್ಲಿಯ ಲೇಔಟ್ ಬಗ್ಗೆ ನನಗೆ ಮಾಹಿತಿ ಇಲ್ಲ, ಇದು 20, 30 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು. ಆಗಿನ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಲಿಂಕ್ ರೋಡ್ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ಜೊತೆಗೆ ನೀರು ಹರಿಸುವುದಕ್ಕೂ ವ್ಯವಸ್ಥೆ ಮಾಡಬೇಕಿತ್ತು. ಓಡಾಡಲಿಕ್ಕೆ ಸಂಪರ್ಕ ವ್ಯವಸ್ಥೆಯನ್ನು ಮಾಡಬೇಕಿತ್ತು. ಇದ್ಯಾವುದೂ ಆಗಿಲ್ಲ. ಇದಕ್ಕೆ ಆಗಿನ ಅಧಿಕಾರಿಗಳೇ ಜವಾಬ್ದಾರರು. ಒಂದು ವೇಳೆ ಪುರಸಭೆಯ ಜಾಗದಲ್ಲಿ ಲಿಂಕ್ ರೋಡ್ ಬರುವುದಿದ್ದರೆ, ಅನಧಿಕೃತವಾಗಿ ಯಾರಾದರೂ ರಸ್ತೆ ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಾಣ ಮಾಡಿಕೊಂಡಿದ್ದರೆ ಅದನ್ನು ಪರಿಶೀಲಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು

– ಪಂಪಾಪತಿ ನಾಯ್ಕ, ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.