ADVERTISEMENT

ಕಲುಷಿತ ನೀರು: 18 ತಿಂಗಳಲ್ಲಿ 28 ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 6:30 IST
Last Updated 15 ಆಗಸ್ಟ್ 2023, 6:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಡಿ.ಕೆ. ಬಸವರಾಜು

ದಾವಣಗೆರೆ: ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಕಲುಷಿತ ನೀರು ಸೇವನೆಯಿಂದ ಅನೇಕರು ಮೃತಪಟ್ಟು, ನೂರಾರು ಜನ ಅಸ್ವಸ್ಥರಾಗಿರುವ ಘಟನೆಗಳು ನಡೆದಿವೆ. ಜನರ ಆರೋಗ್ಯದ ಹಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ಈಚೆಗೆ 28 ನೀರಿನ ಮಾದರಿ ಪರೀಕ್ಷೆ ನಡೆಸಿದಾಗ ಪೂರೈಕೆಯಾದ ನೀರು ಕುಡಿಯಲು ಅಯೋಗ್ಯ ಎಂಬುದು ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ‘ಸಮಗ್ರ ಕಾಯಿಲೆ ಕಣ್ಗಾವಲು ಕಾರ್ಯಕ್ರಮ’ (ಐಡಿಎಸ್‌ಪಿ)ದ ಮೂಲಕ ಆರೋಗ್ಯ ಇಲಾಖೆಯಿಂದ ಪ್ರತಿ ತಿಂಗಳು ಕುಡಿಯುವ ನೀರಿನ ಮಾದರಿ ಪರೀಕ್ಷೆ ನಡೆಯುತ್ತದೆ. ನೀರು ಕುಡಿಯಲು ಯೋಗ್ಯ ಎಂದು ಕಂಡುಬಂದರೆ ಮಾತ್ರ ಆಯಾ ಪ್ರದೇಶದಲ್ಲಿ ನೀರು ಪೂರೈಸಲಾಗುತ್ತದೆ.

ADVERTISEMENT

ಅದರಂತೆ, ಜಿಲ್ಲೆಯಲ್ಲಿ ಕಳೆದ ವರ್ಷ 9,152 ಜಲ ಮೂಲಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವುಗಳಲ್ಲಿ 24 ಕಡೆ ಸಂಗ್ರಹಿಸಿದ ನೀರು ಕುಡಿಯಲು ಅಯೋಗ್ಯ ಎಂಬುದು ದೃಢಪಟ್ಟಿದೆ.

2022ರಲ್ಲಿ ಕೊಳವೆಬಾವಿಗಳ 937, ನಲ್ಲಿಗಳ 4,958, ಓವರ್‌ಹೆಡ್‌ ಟ್ಯಾಂಕ್‌ಗಳ 2,121, ಮಿನಿ ಟ್ಯಾಂಕ್‌ಗಳ 184, ಬಾವಿಗಳ 136 ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ 816 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವುಗಳಲ್ಲಿ 24 ಕಡೆ ಅಶುದ್ಧ ನೀರು ಇರುವುದು ಪತ್ತೆಯಾಗಿದೆ.

ಮಾರ್ಚ್ ತಿಂಗಳಲ್ಲಿ ನಲ್ಲಿ ಮೂಲಕ ಪೂರೈಸಲಾದ ನೀರಿನ ಒಂದು ಮಾದರಿ ಹಾಗೂ ಏಪ್ರಿಲ್‌ನಲ್ಲಿ ಒಂದು ನಲ್ಲಿ ಹಾಗೂ ಒಂದು ಕೊಳವೆಬಾವಿಯ ನೀರಿನ ಮಾದರಿಗಳನ್ನು ಪರೀಕ್ಷಿಸಿದಾಗ ಕುಡಿಯಲು ಯೋಗ್ಯವಲ್ಲ ಎಂದು ವರದಿಯಾಗಿದೆ. ಮೇ ತಿಂಗಳಲ್ಲಿ 6 ಓವರ್‌ಹೆಡ್ ಟ್ಯಾಂಕ್, 3 ನಲ್ಲಿ ಹಾಗೂ 1 ಕೊಳವೆಬಾವಿ ಸೇರಿದಂತೆ 10 ಮಾದರಿಗಳನ್ನು ಪರೀಕ್ಷಿಸಿದಾಗ ಕುಡಿಯಲು ಯೋಗ್ಯವಲ್ಲ ಎಂಬ ಫಲಿತಾಂಶ ಬಂದಿದೆ.

ಜೂನ್ ತಿಂಗಳಲ್ಲಿ 3 ಓವರ್‌ಹೆಡ್ ಟ್ಯಾಂಕ್, ಒಂದು ಶುದ್ಧ ಕುಡಿಯುವ ನೀರಿನ ಘಟಕ, ಒಂದು ಕೊಳವೆಬಾವಿ ಹಾಗೂ 3 ನಲ್ಲಿಯಲ್ಲಿ,  ಜುಲೈ ತಿಂಗಳಲ್ಲಿ 2 ನಲ್ಲಿ ಹಾಗೂ ಒಂದು ಓವರ್‌ಹೆಡ್ ಟ್ಯಾಂಕ್‌ನ ನೀರಿನ ಮಾದರಿಗಳು ಜನರು ಕುಡಿಯಲು ಸಮರ್ಥವಲ್ಲ ಎಂಬುದು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಂಕಿ– ಅಂಶಗಳು ತಿಳಿಸಿವೆ.

‘ಈ ವರ್ಷ ಜುಲೈ ವೇಳೆಗೆ ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ  ಜಗಳೂರು ತಾಲ್ಲೂಕಿನ ಮುಸ್ಟೂರು ಗ್ರಾಮದ ಮಾದರಿ ಸೇರಿ 4 ಕಡೆ ಪೂರೈಸಲಾದ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಕೂಡಲೇ ನೀರು ಪೂರೈಕೆ ಸ್ಥಗಿತಗೊಳಿಸಿ ಬೇರೆ ಮೂಲಗಳಿಂದ ಪೂರೈಸಲಾಯಿತು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ‘ಪ್ರಜಾವಾಣಿ’ಗೆ ವಿವರ ನೀಡಿದರು.

‘ಪ್ರತಿ ತಿಂಗಳು ಆಯಾ ಗ್ರಾಮದಿಂದ 2 ಬಾರಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗುವುದು. ಕುಡಿಯಲು ಯೋಗ್ಯವಲ್ಲದ ನೀರು ಕಂಡುಬಂದರೆ ಇಲಾಖೆಯ ಸಿಬ್ಬಂದಿ ಆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ. ತಕ್ಷಣವೇ ಪೂರೈಕೆ ಸ್ಥಗಿತಗೊಳಿಸಿ ಬೇರೆ ಮೂಲಗಳಿಂದ ನೀರು ಪೂರೈಸಲಾಗುವುದು. ನಂತರ ಆ ನೀರಿನ ಟ್ಯಾಂಕ್‌ ಖಾಲಿ ಮಾಡಿ ಶು‌ದ್ಧೀಕರಿಸಿ ಕ್ಲೊರಿನೇಷನ್ ಮಾಡಲಾಗುವುದು’ ಎಂದು ಅವರು ತಿಳಿಸಿದರು.

‘ಸೂಳೆಕೆರೆಯಿಂದ ಸರಬರಾಜು ಆಗುವ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕಾರ್ಯ ಮಾಡುತ್ತಿಲ್ಲ. ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ತಿಂಗಳು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 400–500 ಮಾದರಿ ಪರೀಕ್ಷಿಸಲಾಗುವುದು’ ಎಂದು ರಾಘವನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.