ADVERTISEMENT

ಹಳೆ ವಿದ್ಯಾರ್ಥಿಗಳ ಸಹಕಾರ: ಶಾಲೆಗೆ ಕಾಯಕಲ್ಪ

ಸಂತೋಷ್ ಎನ್.ಜೆ.
Published 6 ಡಿಸೆಂಬರ್ 2021, 4:40 IST
Last Updated 6 ಡಿಸೆಂಬರ್ 2021, 4:40 IST
ಮಳಲಕೆರೆ ಸರ್ಕಾರಿ ಪ್ರೌಢಶಾಲೆಯ ಕೈತೋಟದಲ್ಲಿನ ತರಕಾರಿಗಳನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿನಿಯರು
ಮಳಲಕೆರೆ ಸರ್ಕಾರಿ ಪ್ರೌಢಶಾಲೆಯ ಕೈತೋಟದಲ್ಲಿನ ತರಕಾರಿಗಳನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿನಿಯರು   

ತ್ಯಾವಣಿಗೆ: ಸಮೀಪದ ಮಳಲಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿ ಕಾಣುತ್ತಿದೆ.

ಎಲ್ಲರ ಸಹಕಾರದಿಂದ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿರುವುದಲ್ಲದೇ ಕಂಪ್ಯೂಟರ್ ಕಲಿಕೆಗೆ ಉತ್ತೇಜನ ನೀಡಲಾಗುತ್ತಿದೆ.

ಹೊರ ದೇಶದಲ್ಲಿರುವ ಹಳೆ ವಿದ್ಯಾರ್ಥಿಗಳೆಲ್ಲರೂ ಸೇರಿ ‘ಮಳಲ್ಕರೆ ಅಭಿವೃದ್ಧಿ ಸಂಘ’ ಮಾಡಿಕೊಂಡು ತಾವು ಓದಿರುವ ಶಾಲೆ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಪ್ರಾಥಮಿಕ ಶಾಲೆಗೆ 10 ಕಂಪ್ಯೂಟರ್ ನೀಡಿರುವುದಲ್ಲದೇ ಮಕ್ಕಳ ಸಾಂಸ್ಕೃತಿಕ ಕಲಿಕೆಗೆ ರಂಗಮಂದಿರ ನಿರ್ಮಿಸಲು ಧನಸಹಾಯ ಮಾಡಿದ್ದಾರೆ.

ADVERTISEMENT

ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಗಳು ₹ 10 ಲಕ್ಷ ವೆಚ್ಚದಲ್ಲಿ ಸಮುದಾಯಭವನ ಹಾಗೂ ಮಕ್ಕಳ ರಂಗಮಂದಿರ ನಿರ್ಮಿಸಿದ್ದಾರೆ. ಕಲಿಕೋಪಕರಣ, ಪುಸ್ತಕಗಳನ್ನು ದಾನವಾಗಿ ನೀಡಿದ್ದಾರೆ. ಪ್ರತಿ ಬಾರಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಣ ಸಹಾಯ ಮತ್ತು ಬಹುಮಾನ ನೀಡುತ್ತಾರೆ ಎಂದು ಮುಖ್ಯಶಿಕ್ಷಕ ಸತೀಶ್ ಹೇಳಿದರು.

1990-91ರಲ್ಲಿ ಪ್ರೌಢಶಾಲೆ ನಿರ್ಮಾಣವಾಗಿದ್ದು, ಗ್ರಾಮದ ಹಳವುದರ ಪಾರ್ವತಮ್ಮ ಅವರು 2 ಎಕರೆ ಜಮೀನನ್ನು ದಾನವಾಗಿ ನೀಡಿರುವ ಸ್ಮರಣಾರ್ಥ ಪ್ರೌಢಶಾಲೆಗೆ ಅವರ ಹೆಸರು ಇಡಲಾಗಿದೆ. ನಿವೃತ್ತ ಎಂಜಿನಿಯರ್ ಸಿದ್ದಬಸಪ್ಪ 1.23 ಗುಂಟೆ ಜಮೀನು ದಾನವಾಗಿ ನೀಡಿದ್ದಾರೆ. ಇದರಿಂದ ಸುಂದರ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ ಎಂದರು.

2019-20ನೇ ಸಾಲಿನಲ್ಲಿ ಡಯಟ್ ವತಿಯಿಂದ 10 ಕಂಪ್ಯೂಟರ್ ನೀಡಿದ್ದು, ಸುಸಜ್ಜಿತವಾದ ಗ್ರಂಥಾಲಯ, ಸಮಾಜ, ಗಣಿತ ವಿಜ್ಞಾನ ಪ್ರಯೋಗಲಾಯಗಳು ಇವೆ. ಪ್ರಯೋಗಾಲಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಕುಳಿತು ಅಭ್ಯಸಿಸಲು ಆಸನದ ವ್ಯವಸ್ಥೆ ಇದೆ ಎಂದು ವಿಜ್ಞಾನ ಶಿಕ್ಷಕ ಯೋಗೇಶ್ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿಯಿಂದ 2020-21ರಲ್ಲಿ ಶಾಲೆಯ ಕೊಠಡಿ ಮೇಲೆ ವಿಂಡ್ ಫ್ಯಾನ್ ಅಳವಡಿಸಿ ಶಾಲೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದು, ಎಲ್ಲಾ ಕೊಠಡಿಯಲ್ಲಿ ಫ್ಯಾನ್ ಅಳವಡಿಸಲಾಗಿದೆ ಎಂದರು.

ಶಾಲೆಯಲ್ಲಿ ಕೈ ತೋಟ ಇದ್ದು, ಸೊಪ್ಪು ತರಕಾರಿಗಳನ್ನು ಬೆಳೆದು ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗೂ ಶಿಕ್ಷಕರು ಹೆಚ್ಚು ಒತ್ತು ನೀಡಿದ್ದಾರೆ ಎಂದರು ಎಸ್‌‌ಡಿಎಂಸಿ ಅಧ್ಯಕ್ಷಎಚ್. ಬಸವರಾಜ್.

ಮಕ್ಕಳ ಮನಸ್ಸನ್ನು ಬದಲಾಯಿಸುವಂತಹ ಸೂಕ್ತಿಗಳು ಗೋಡೆಗಳ ಮೇಲೆ ಬರೆಯಲಾಗಿದೆ. ಧ್ಯಾನ, ಪ್ರಾಣಾಯಮ ಪರಿಸರ ಪ್ರಜ್ಞೆ ಮಹತ್ವ ತಿಳಿಸಲಾಗುತ್ತಿದೆ. ಇದರಿಂದ ಮಕ್ಕಳ ದಾಖಲಾತಿ ಜತೆಗೆ ಶೈಕ್ಷಣಿಕ ಪ್ರಗತಿ ಕಾಣುತ್ತಿದೆ ಎಂದರು ಅವರು.

ಡಯಟ್ ಅಧಿಕಾರಿಗಳು, ಬಿಇಒ, ಗ್ರಾಮಸ್ಥರ ಸಹಕಾರದಿಂದ ಶಾಲೆ ಉತ್ತಮವಾಗಿ ರೂಪುಗೊಂಡಿದೆ. ಪ್ರತಿ ವರ್ಷಶೇ 95ಕ್ಕಿಂತ ಹೆಚ್ಚು ಎಸ್ಸೆಸ್ಸೆಲ್ಸಿ ಫಲಿತಾಂಶ ಬರುತ್ತಿದೆ.

ತಿಪ್ಪೇಸ್ವಾಮಿ, ಪ್ರೌಢಶಾಲೆ ಮುಖ್ಯಶಿಕ್ಷಕ

ಶಾಲೆಯಲ್ಲಿ ಹಲವು ಸೌಲಭ್ಯಗಳಿದ್ದು, ನುರಿತ ಶಿಕ್ಷಕರಿಂದ ಪ್ರಗತಿ ಕಾಣುತ್ತಿದೆ. ಉತ್ತಮ ಫಲಿತಾಂಶ ಬರುತ್ತಿದೆ.

ಎನ್. ಒ. ಮುರುಗೇಂದ್ರಪ್ಪ, ಹಳೆಯ ವಿದ್ಯಾರ್ಥಿ

ಪ್ರಾಥಮಿಕ ಶಾಲೆ ಉತ್ತಮವಾಗಿದ್ದು, ಕಲಿಕೆಗೆ ಪೂರಕವಾದ ವಾತಾವರಣವಿದೆ. ಶಾಲೆ 125 ವರ್ಷಕ್ಕಿಂತ ಹಳೆಯದಾಗಿದ್ದು, ಹೆಚ್ಚುವರಿ ಕೊಠಡಿ ಅಗತ್ಯ ಇದೆ.
ಎಚ್. ಬಸವರಾಜ್, ಎಸ್‌ಡಿಎಂಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.